ಅಪ್ಪ ನಿನ್ನ ಹೆಗಲನೇರಿ
ಆಕಾಶ ನೋಡುವಾಸೆ
ನೀನು ಹೊಡೆವ ಸೈಕಲ್ಲೇರಿ
ಬೀದಿ ಬೀದಿ ತಿರಗುವಾಸೆ//೧//
ನಿನ್ನ ಹಾಗೆ ವಿದ್ಯೆ ಕಲಿತು
ದೊಡ್ಡ ನೌಕರನಾಗುವೆ
ಹೀರೋ ಹೊಂಡಾ ನಿನಗೆ ಕೊಡಿಸಿ
ನಾನು ಸೈಕಲ್ ಹೊಡೆಯುವೆ//೨//
ಸೈಕಲ್ ಮೇಲೆ ಸಂತೆಗೆ ಹೋಗಿ
ಚುರುಮುರಿ ತಿಂದು ನಲಿಯುವೆ
ಅಕ್ಕ ತಂಗಿಗೆ ಮಿಠಾಯಿ ತಂದು
ಅಪ್ಪನ ಹೆಸರನು ಹೇಳುವೆ //೩//
ಹಗಲು ರಾತ್ರಿ ದುಡಿವ ಅಪ್ಪ
ನೋವ ನುಂಗಿ ಮಲಗುವಾ
ಕಷ್ಟ ಸುಖವ ತಿಳಿಸುತ ಅಮ್ಮ
ಹಾಲು ಕುಡಿಸಿ ಮಲಗಿಸುವಾ//೪//
ಅಪ್ಪ ಅಮ್ಮನ ಮಡಿಲಿನೊಳಗೆ
ಸ್ವರ್ಗ ಸುಖವು ಅಡಗಿದೆ
ನಮಗೆ ಎಲ್ಲಾ ಕೊಡಿಸಿ ತಾನು
ಸಂಧಿಗೊಂಧಿಯಲ್ಲಿ ನಲುಗಿದೆ//೫//
ಕವಿ : ಹನುಮಂತರಾವ್ ನಾಗಪ್ಪಗೋಳ, ಗೋಕಾಕ
