
ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲ್ಲೂಕಿನ ನೀಲಹಳ್ಳಿ ಗ್ರಾಮದ ಕೆರೆಯಲ್ಲಿ ಫೆಬ್ರವರಿ 12, 2025 ರಂದು ಶ್ಯಾಮಮ್ಮ ಗಂ. ಹುಸೇನಪ್ಪ ಸಿರಿಗಿರಿ (20) ಮತ್ತು ಸಾಯಮ್ಮ ತಂ. ಭೀಮಪ್ಪ (15) ಎಂಬವರ ಶವ ಪತ್ತೆಯಾಗಿದ್ದು ಈ ಘಟನೆ ಅನುಮಾನಸ್ಪದವಾಗಿದೆ.
ಮೃತರು ಅಲೆಮಾರಿ ಬುಡಗ ಜಂಗಮ (ಪರಿಶಿಷ್ಟ ಜಾತಿ) ಸಮುದಾಯದವರಾಗಿದ್ದು, ಇವರ ಸಾವಿನ ಕುರಿತು ಕುಟುಂಬಸ್ಥರು ಮತ್ತು ಸ್ಥಳೀಯರು ಗಂಭೀರ ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಕುರಿತು ತನಿಖೆ ನಡೆಯಬೇಕೆಂದು ಒತ್ತಾಯಿಸಿದ್ದಾರೆ.
ಘಟನೆಯ ಕುರಿತು ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿಯ ರಾಜ್ಯ ಉಪಾಧ್ಯಕ್ಷ ಕೆ.ಬಿ. ವಾಸು ಅವರು ಸ್ಥಳಕ್ಕೆ ಭೇಟಿ ನೀಡಿ, ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರು ಮತ್ತು ಈ ಸಾವಿನ ಹಿಂದೆ ಇರುವ ನಿಜವಾದ ಕಾರಣ ಹೊರಬರುವಂತೆ ಸಿಐಡಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ಸ್ಥಳೀಯರು ಜನಪ್ರತಿನಿಧಿಗಳು ಹಾಗೂ ಸಾಮಾಜಿಕ ಕಾರ್ಯಕರ್ತರು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ, ಸರ್ಕಾರ ಮತ್ತು ಪೊಲೀಸ್ ಇಲಾಖೆ ಶೀಘ್ರ ಕ್ರಮ ಕೈಗೊಂಡು ಸಿಐಡಿ ತನಿಖೆಗೆ ಆದೇಶಿಸಬೇಕು ಎಂದು ಒತ್ತಾಯಿಸಿದ್ದಾರೆ.
ಈ ಸಂಬಂಧ ಗುರುಮಠಕಲ್ ಪೊಲೀಸರು ಪ್ರಾಥಮಿಕ ತನಿಖೆ ಆರಂಭಿಸಿದ್ದು, ಈ ಪ್ರಕರಣದಲ್ಲಿ ನ್ಯಾಯ ದೊರಕುವವರೆಗೆ ಹೋರಾಟ ಮುಂದುವರಿಸಲಾಗುವುದು ಎಂದು ಸ್ಥಳೀಯರು ತಿಳಿಸಿದ್ದಾರೆ.
ವರದಿ – ಮಹಾದೇವಪ್ಪ
