ಬೀದರ್ : ಮಾ.5 ರಿಂದ 10 ರವರೆಗೆ ಗೋರಸೇನಾ ರಾಷ್ಟ್ರೀಯ ಸಂಘಟನೆಯ ರಾಜ್ಯ ಘಟಕದ ವತಿಯಿಂದ ಗೋರ ಬಂಜಾರ ಸಮುದಾಯದ ಜನ ಜಾಗೃತಿ ಹಾಗೂ ಜನಾಂದೋಲನ ರಥ ಯಾತ್ರೆ ಕೈಗೊಳ್ಳಲಾಗಿದೆ ಎಂದು ಸೇವಾನಗರ
ತಾಂಡಾದ ಶಿವ ಶಕ್ತಿ ಪೀಠದ ಪೂಜ್ಯ ಗೋವಿಂದ್ ಮಹಾರಾಜ್ ರವರು ಹೇಳಿದರು.
ನಿನ್ನೆ ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಗೋರ ಬಂಜಾರ ಜನಾಂಗ ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳ ಪರಿಹಾರಕ್ಕಾಗಿ ಈ ಜನಜಾಗೃತಿ ಮತ್ತು ಜನಾಂದೋಲನ ರಥ ಯಾತ್ರೆ ಹಮ್ಮಿಕೊಳ್ಳಲಾಗಿದೆ.
ಬೀದರ್ ನಗರದಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ ವರೆಗೆ ಸತತ 6 ದಿನಗಳು ನಡೆಯಲಿದೆ. ರಾಜ್ಯದ 15 ಜಿಲ್ಲೆಗಳು ಒಳಗೊಂಡಂತೆ ಒಟ್ಟು 1,250 ಕಿ.ಮೀ. ವರೆಗಿನ ರಥಯಾತ್ರೆ ಇದಾಗಿದೆ ಎಂದು ಅವರು ತಿಳಿಸಿದರು.
ಕರ್ನಾಟಕ ರಾಜ್ಯದಲ್ಲಿ ಸುಮಾರು 3,500 ಕ್ಕಿಂತಲೂ ಹೆಚ್ಚು ತಾಂಡಾಗಳಿದ್ದು, ಇಲ್ಲಿಯವರೆಗೆ ಈ ಎಲ್ಲಾ ತಾಂಡಾಗಳ ಜನಸಂಖ್ಯೆ ಕುರಿತಂತೆ ಯಾವುದೇ ವೈಜ್ಞಾನಿಕ ಅಧ್ಯಯನ ಆಗಿರುವುದಿಲ್ಲ. ಪ್ರಸ್ತುತ ಮಿಸಲಾತಿ ಹಂಚಿಕೆ ಸಂಬಂಧ ರಚನೆಯಾಗಿರುವ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್ ಏಕ ಸದಸ್ಯ ಆಯೋಗಕ್ಕೆ ಸಮರ್ಪಕ ದತ್ತಾಂಶದ ಕೊರತೆ ಎದುರಾಗಬಹುದು ಎಂಬ ಆತಂಕ ನಮ್ಮ ಸಮಾಜಕ್ಕೆ ಇದೆ. ಹಾಗಾಗಿ ಸರ್ಕಾರ ರಾಜ್ಯಾದಂತ ಇರುವ ಗೋರ ಬಂಜಾರ ಜನಾಂಗದ ಸಂಪೂರ್ಣ ವೈಜ್ಞಾನಿಕ ದತ್ತಾಂಶ ಸಂಗ್ರಹಣೆ ಮಾಡುವ ಆವಶ್ಯಕತೆ ಇದೆ ಎಂದರು.
ನಮ್ಮ ಸಮಾಜದಲ್ಲಿ ನಾಯಕತ್ವ ದುರ್ಬಲವಾಗುತ್ತಿದ್ದು, ಅದನ್ನು ಗಟ್ಟಿಗೊಳಿಸುವುದು ಅತೀ ಅವಶ್ಯಕವಾಗಿದೆ. ತಾಂಡದ ಜನರ ಏಳಿಗೆ, ಬೆಳವಣಿಗೆ ಮತ್ತು ಮುಖ್ಯ ವಾಹಿನಿಯಲ್ಲಿ ಭಾಗವಹಿಸುವಂತೆ ಮಾಡುವ ಜವಾಬ್ದಾರಿ ನಮ್ಮದಾಗಿದೆ.
ಈ ನಿಟ್ಟಿನಲ್ಲಿ ರಾಜ್ಯಾದ್ಯಂತ ಒಂದು ಒಗ್ಗಟ್ಟಿನ ಕೂಗು ಆತಿ ಅವಶ್ಯಕ ಎಂದು ನಮಗೆ ಕಂಡುಬಂದಿದೆ ಹಾಗಾಗಿ ರಾಜ್ಯಾದ್ಯಂತ ಒಮ್ಮತದ ಜನಜಾಗೃತಿಗೆ ಕರೆ ನೀಡುತ್ತಿದ್ದು, ಮಾ.5 ರಂದು ಜಿಲ್ಲೆಯಿಂದ ಈ ಜನ ಜಾಗೃತಿ ರಥ ಯಾತ್ರೆಗೆ ಚಾಲನೆ ನೀಡುತ್ತಿದ್ದೇವೆ ಎಂದು ಹೇಳಿದರು.
ಈ ರಥಯಾತ್ರೆಯು ಬೀದರ್, ಕಲಬುರಗಿ, ವಿಜಯಪುರ, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ, ವಿಜಯನಗರ, ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ತುಮಕೂರು ಮತ್ತು ಬೆಂಗಳೂರು ಗ್ರಾಮಾಂತರ ಒಳಗೊಂಡಂತೆ ಸುಮಾರು 15 ಜಿಲ್ಲೆಗಳಿಂದ ಹಾದು ಹೋಗಿ ಮಾ.10 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ಗೆ ತಲುಪಿ ಈ ಚಳುವಳಿಗೆ ಯಶಸ್ಸು ತರುವುದಾಗಿ ಶಪಥ ಮಾಡಿದ್ದೇವೆ. ಫ್ರೀಡಂ ಪಾರ್ಕ್ ಲ್ಲಿ ಮುಖ್ಯ ಮಂತ್ರಿ ಅಥವಾ ಸಂಬಂಧ ಪಟ್ಟ ಸಚಿವರಿಗೆ ಮನವಿ ಪತ್ರ ಸಲ್ಲಿಸುವುದಾಗಿ ತಿಳಿಸಿದರು.
ಗೋರ ಶಿಖವಾಡಿ ಜಿಲ್ಲಾಧ್ಯಕ್ಷ ಗೋವರ್ಧನ್ ರಾಠೋಡ್ ಮಾತನಾಡಿ ಗೋರ ಬಂಜಾರ ಸಮಾಜದ ಜನ ಹೊಟ್ಟೆ ಪಾಡಿಗಾಗಿ ಹೊರ ರಾಜ್ಯಗಳಿಗೆ ಗುಳೆ ಹೋಗುತ್ತಿದ್ದಾರೆ.ಇದರಿಂದಾಗಿ ತಮ್ಮ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ನಮ್ಮ ಸಮಾಜದ ಜನ ಹೆಚ್ಚಿನ ಸಂಖ್ಯೆಯಲ್ಲಿ ಮೂಢನಂಬಿಕೆಯಲ್ಲಿ ತೊಡಗಿಕೊಂಡು ತನ್ಮೂಲಕ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ನಮ್ಮ ಜನರಲ್ಲಿನ ಬಡತನ, ಅಜ್ಞಾನ, ಅನಕ್ಷರತೆಯ ಲಾಭ ಪಡೆಯಲು ಆನೇಕ ಕುತಂತ್ರಿಗಳು ಹವಣಿಸುತ್ತಿದ್ದು, ನಮ್ಮ ಸಮಾಜವನ್ನು ಮತಾಂತರಕ್ಕೆ ತಳ್ಳುತ್ತಿದ್ದಾರೆ. ಇದರಿಂದಾಗಿ ನಮ್ಮ ಸಮಾಜದ ಜನ ಒಗ್ಗಟ್ಟಾಗುತ್ತಿಲ್ಲ, ನಮಗೆ ಒಂದು ಬಲಿಷ್ಠವಾದ ಸಂಘಟನೆಯ ಅವಶ್ಯಕತೆ ಇದೆ ಎಂದು ಅವರು ಅಭಿಪ್ರಾಯಪಟ್ಟರು.
ಈ ರಥಯಾತ್ರೆಯು ಭಾಲ್ಕಿ ತಾಲೂಕಿನ ಸೇವಾ ನಗರ ತಾಂಡದಿಂದ ಖಾನಾಪುರ ಮಾರ್ಗವಾಗಿ ಬೀದರ್ ಗೆ ಬಂದು ನಗರದ ಅಂಬೇಡ್ಕರ್ ವೃತ್ತ ,ಬಸವೇಶ್ವರ ವೃತ್ತ ,ಬೊಮ್ಮ ಗೊಂಡೇಶ್ವರ ವೃತ್ತ ,ಮಾರ್ಗವಾಗಿ ಬಗ್ದಲ್ ತಾಂಡಾ, ಮನ್ನಾಎಖ್ಖೇಳ್ಳಿ ಮಾರ್ಗವಾಗಿ ಕಮಲಾಪುರದಿಂದ ಕಲಬುರ್ಗಿಗೆ ತೆರಳಿದೆ ಎಂದು ಅವರು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಗೋರಸೇನಾ ಜಿಲ್ಲಾಧ್ಯಕ್ಷ ರಮೇಶ್ ಜಾಧವ್, ಸವಿತಾಬಾಯಿ ರಾಠೋಡ್ ಬಾಬು ಜಾದವ್, ನೀಲಕಂಠ ರಾಠೋಡ್ ಸುಧಾಕರ್ ರಾಠೋಡ್, ಅರವಿಂದ್ ರಾಠೋಡ್, ಕೃಷ್ಣ ರಾಠೋಡ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ವರದಿ: ರೋಹನ್ ವಾಘಮಾರೆ
