ಗದಗ : ಪರಿಶಿಷ್ಟರ ಕಲ್ಯಾಣಕ್ಕಾಗಿ ಮೀಸಲಿರುವ ಅನುದಾನವನ್ನು ದುರ್ಬಳಕೆ ಮಾಡುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ನಡೆ ಖಂಡನೀಯವೆಂದು ರಾಜ್ಯ ದಲಿತ ವಿದ್ಯಾರ್ಥಿ ಪರಿಷತ್ ಬೆಳಗಾವಿ ವಿಭಾಗೀಯ ಸಂಚಾಲಕ ಸುರೇಶ ವಾಯ್.ಚಲವಾದಿ ಆರೋಪಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಜನರ ಕಲ್ಯಾಣಕ್ಕಾಗಿ ಮೀಸಲಿರುವ SESP / TSP ಅನುದಾನವನ್ನು ಪರಿಶಿಷ್ಟರ ಕಲ್ಯಾಣ ಯೋಜನೆಗಳಿಗೆ ಬಳಸದೆ ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿರುವ ಪಂಚ ಗ್ಯಾರಂಟಿಗಳಿಗೆ ಬಳಸಿಕೊಂಡು ರಾಜ್ಯ ಕಾಂಗ್ರೆಸ್ ಸರ್ಕಾರ ದಲಿತರಿಗೆ
ಅನ್ಯಾಯವೆಸಗುತ್ತಿದೆ. ಕಳೆದ ಸನ್ 2023-24 ನೇ ಸಾಲಿನಲ್ಲಿ 11344 ಕೋಟಿ ಹಾಗೂ ಸನ್ 2024-25 ನೇ ಸಾಲಿನಲ್ಲಿ 14282 ಕೋಟಿ ಎರಡು ವರ್ಷದ ಅವಧಿಯಲ್ಲಿ ಒಟ್ಟಾರೆಯಾಗಿ 25,426,68 ಕೋಟಿ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಂಡು ಈ ನೆಲದ ಶೋಷಿತ ಸಮುದಾಯಗಳಿಗೆ ಅನ್ಯಾಯವೆಸಗಿರುವದು ನಾಚಿಕೆಗೇಡಿನ ಸಂಗತಿ.
ರಾಜ್ಯದ ಮುಖ್ಯ ಮಂತ್ರಿಗಳಾದ ಸನ್ಮಾನ್ಯ ಸಿದ್ದರಾಮಯ್ಯನವರು ಚುನಾವಣಾ ಪೂರ್ವದಲ್ಲಿ ನಾನು ಅಹಿಂದ ನಾಯಕ, ದಲಿತರ ಪರವಾಗಿರುತ್ತೇನೆಂದು ಭಾಷಣ ಬಿಗಿದು ದಲಿತರ ಮತಗಳನ್ನು ಪಡೆದು ಮುಖ್ಯಮಂತ್ರಿಗಳಾದ ನಂತರ ಅದೇ ದಲಿತರ ಉದ್ದಾರಕ್ಕಾಗಿ ಮೀಸಲಿರುವ ಅನುದಾನವನ್ನು ದುರ್ಬಳಕೆ ಮಾಡಿಕೊಂಡು ದಲಿತರ ಶಕ್ತಿಯನ್ನು ಕುಗ್ಗಿಸುವಂತಹ ಕೆಲಸ ಮಾಡುತ್ತಿರುವುದು ದಲಿತ ಸಮುದಾಯಕ್ಕೆ ಮಾಡುತ್ತಿರುವ ದ್ರೋಹವಲ್ಲದೇ ಮತ್ತೇನು ಎಂದು ಪ್ರಶ್ನಿಸಿದರು.
ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು 1949 ನವೆಂಬರ್ 26 ರಂದು ಭಾರತ ದೇಶಕ್ಕೆ ಸಂವಿಧಾನ ಸಮರ್ಪಿಸುತ್ತಾರೆ. 1950 ಜನವರಿ 26 ರಂದು ಸಂವಿಧಾನ ಅಧಿಕೃತವಾಗಿ ಅಂಗೀಕಾರವಾಗುತ್ತದೆ. ಅವಾಗ ಪತ್ರಕರ್ತರೊಬ್ಬರು ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರಿಗೆ ನೀವು ಬರೆದ ಸಂವಿಧಾನ ಇಂದು ಅಂಗೀಕಾರವಾಗಿದೆ ಇದರ ಬಗ್ಗೆ ತಮ್ಮ ಅಭಿಪ್ರಾಯವೇನು ಎಂದು ಕೇಳಿದಾಗ ಬಾಬಾಸಾಹೇಬರು ನಾನು ಬರೆದ ಸಂವಿಧಾನ ಅಂಗೀಕಾರವಾಗಿರುವುದು ನನಗೆ
ಸಂತೋಷವನ್ನುಂಟು ಮಾಡಿದೆ ಆದರೆ ನಾನು ಬರೆದ ಸಂವಿಧಾನ ಯಥಾವತ್ತಾಗಿ ಜಾರಿಯಾದರೆ ದೇಶದಲ್ಲಿನ ಜನತೆ 10 ರಿಂದ 20 ವರ್ಷದೊಳಗೆ ಶೈಕ್ಷಣಿಕ ಸಾಮಾಜಿಕ ಹಾಗೂ ಆರ್ಥಿಕ ಸಮಾನತೆ ದೊರೆಯುತ್ತದೆ ಆದರೆ ಸಂವಿಧಾನ ಜಾರಿಮಾಡುವ ಜಾಗದಲ್ಲಿ ಯಾರು ಕೂರುತ್ತಾರೆ ಎನ್ನುವುದರ ಮೇಲೆ ದೇಶದ ಭವಿಷ್ಯ ನಿರ್ಧಾರವಾಗುತ್ತದೆ ಎನ್ನುತ್ತಾರೆ. ಹಾಗಿದ್ದರೆ ಕಳೆದ 70 ವರ್ಷಗಳ ಕಾಲ ಸುಧೀರ್ಘ ಆಡಳಿತದಲ್ಲಿರುವ ಕಾಂಗ್ರೆಸ್ ಸಂವಿಧಾನವನ್ನು ಸಮರ್ಪಕವಾಗಿ ಜಾರಿಗೊಳಿಸಲಿಲ್ಲವೇ….? ದಲಿತರು ಇನ್ನೂ ಯಾಕೆ ಬಡವರಾಗಿ ಉಳಿದಿರುತ್ತಾರೆ ಎಂದು ಪ್ರಶ್ನಿಸಿದರು. ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುವ ಸನ್ಮಾನ್ಯ ಮುಖ್ಯಮಂತ್ರಿಗಳು ಉತ್ತರಿಸಬೇಕೆಂದು ಹೇಳಿದರು.
ಅಂಬೇಡ್ಕರ್ ಕಾಲದಿಂದಲೂ ಒಂದಿಲ್ಲೊಂದು ರೀತಿಯಲ್ಲಿ ಬಾಬಾ ಸಾಹೇಬರನ್ನು ಅವಮಾನಿಸುತ್ತಾ ಬಂದಿರುವ ಕಾಂಗ್ರೆಸ್ ಅಂಬೇಡ್ಕರ್ ಅವರ ಸಂವಿಧಾನವನ್ನು ಗೌರವಿಸದೆ ಸಂವಿಧಾನವನ್ನು ಯಥಾವತ್ತಾಗಿ ಜಾರಿಗೊಳಿಸದೆ ಅನ್ಯಾಯವೆಸಗಿರುವ ಕಾಂಗ್ರೆಸ್ ದಲಿತರನ್ನು ಉದ್ದಾರ ಮಾಡುತ್ತಾರೆ ಎಂಬುದು ಕನಸಿನ ಮಾತು ಎಂದು ಲೇವಡಿ ಮಾಡಿದರು.
ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ವಿವಿಧ ನಿಗಮಗಳಲ್ಲಿರುವ ದಲಿತರ ಅಭಿವೃದ್ದಿಗಿರುವ ಯೋಜನೆಗಳಾದ ಸ್ವಾವಲಂಬಿ ಸಾರಥಿ ಯೋಜನೆ, ಸ್ವಯಂ ಉದ್ಯೋಗ, ಗಂಗಾ ಕಲ್ಯಾಣ ಭೂ ಒಡೆತನ ಹಾಗೂ ಮುಂತಾದ ಯೋಜನೆಗಳ ಮತ ಕ್ಷೇತ್ರವಾರು ಟಾರ್ಗೆಟ್‌ಗಳನ್ನು ಕಡಿತಗೊಳಿಸಿ ದಲಿತರ ಆರ್ಥಿಕತೆಯನ್ನು ದುರ್ಬಲಗೊಳಿಸುವ ಪ್ರಯತ್ನ ಮಾಡುತ್ತಿದೆ. ಅಷ್ಟೇ ಅಲ್ಲದೇ ಪ್ರಸಕ್ತ ಸಾಲಿನ ಬಡ್ಜಟ್‌ನಲ್ಲಿ SESP/TSP ಯೋಜನೆಯ 15,000 ಕೋಟಿ ಪಂಚ ಗ್ಯಾರಂಟಿಗಳಿಗೆ ಬಳಸಿಕೊಳ್ಳಲು ಹೊಂಚು ಹಾಕುತ್ತಿದೆ. ಈ ಬಾರಿ ಏನಾದರೂ ದಲಿತರ ಅಭಿವೃದ್ದಿಗಾಗಿ ಮೀಸಲಿರುವ ಅನುದಾನವನ್ನು ಮುಟ್ಟುವ ಪ್ರಯತ್ನ ಮಾಡಿದರೆ ಶೋಷಿತ ಸಮುದಾಯ ಕೈ ಕಟ್ಟಿ ಕುಳಿತುಕೊಳ್ಳುವುದಿಲ್ಲ ತಮ್ಮ ವಿರುದ್ದ ಸಿಡಿದೇಳುವ ಕಾಲ ಸನ್ನಿಹಿತವಾಗಿದೆ ಎಂದು ಎಚ್ಚರಿಕೆ ನೀಡಿದರು.
- ಕರುನಾಡ ಕಂದ
