ಬೆಳಗಾವಿ/ ಅಥಣಿ: ಆಧ್ಯಾತ್ಮಿಕ ಸಾಧನೆಗೈದ, ಶಿಕ್ಷಣ ಪ್ರೇಮಿಗಳಾಗಿದ್ದ ಜೊತೆಗೆ ದಾಸೋಹದ ಮೂಲಕ ಸಾಧನೆಗೈದ, ಕರ್ತೃತ್ವ ಶಕ್ತಿಯಿಂದ ವಿರಕ್ತ ಪರಂಪರೆಗೆ ಮುಕುಟಪ್ರಾಯರಾದ ಸವದಿಯ ಶ್ರೀ.ಮ.ನಿ.ಪ್ರ ಮಹಾಂತಪ್ಪಗಳ ಕೃಪಾ ಆರ್ಶಿವಾದ ಸದಾ ನಮ್ಮ ಮನೆತನದ ಮೇಲೆ ಇರಲಿ ಎಂಬುದೇ ನಮ್ಮೆಲ್ಲರ ಅಪೇಕ್ಷೆಯಾಗಿದೆ ಎಂದು ಸಮಾಜ ಸೇವಕಿ, ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ನಾಯಕಿ ಶಿಲ್ಪಾ ತೊದಲಬಾಗಿ ಹೇಳಿದರು.
ಅವರು ತಾಲೂಕಿನ ಸವದಿ ಗ್ರಾಮದ ಸಂಗನಬಸವ ಶಿವಯೋಗಿಗಳವರ ೮೩ ನೇ ಹಾಗೂ ಡಾ. ಮಹಾಂತ ಶಿವಯೋಗಿಗಳವರ ೭ ನೇ ವರ್ಷದ ಸ್ಮರಣೋತ್ಸವದ ಅಂಗವಾಗಿ ಜರುಗಿದ ಶರಣ ಸಂಸ್ಕೃತಿ ಮಹೋತ್ಸವದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡುತ್ತಾ
ನಾನು ಚಿಕ್ಕವಳಿಂದಾಗಿಂದ ಈ ಮಠದ ಆವರಣದಲ್ಲಿಯೇ ಬೆಳದ ನನಗೆ ಇವತ್ತು ಈ ಆವರಣದಲ್ಲಿಯೇ ಸನ್ಮಾನ ಸ್ವೀಕಾರ ಮಾಡುತ್ತಿರುವುದು ನನ್ನ ಭಾಗ್ಯ ಅಂತಾ ಭಾವಿಸಿರುವೆ ಇದು ನನಗೆ ಅತೀ ಸಂತೋಷ ಉಂಟು ಮಾಡಿದೆ. ಅಂದು ಅಪ್ಪಗಳು ಹೇಳಿದ ಆ ಒಂದು ಮಾತು ನನಗೆ ಇಂದಿಗೂ ನೆನಪಿದೆ, ಇಂದು ಮಹಿಳಾ ಸಬಲೀಕರಣ ಕುರಿತು ಪ್ರಪಂಚದಲ್ಲಿ ದಿನದಿಂದ ದಿನಕ್ಕೆ ಹೆಚ್ಚಿಗೆ ಚರ್ಚಿಸಲ್ಪಡುತ್ತಿದೆ, ಆದರೆ ಅನೇಕ ಜನರು ಇನ್ನೂ ಮಹಿಳೆಯರು ತಮ್ಮ ಕಾಲ ಮೇಲೆ ತಾವು ನಿಲ್ಲಬೇಕು ಅವರ ನಿಜವಾದ ಸಾಮರ್ಥ್ಯವು ಜನರನ್ನು ತಲುಪಬೇಕು ಎಂದು ಬಯಸುತ್ತಾರೆ, ಈ ಎಲ್ಲಾ ಸಾಮಾಜಿಕ ಕಟ್ಟುಪಾಡುಗಳನ್ನು ಬದಿಗೊತ್ತಿ ಭಾರತೀಯ ಮಹಿಳೆಯರು ಪ್ರತಿಯೊಂದು ಕ್ಷೇತ್ರದಲ್ಲಿ ಹೆಸರು ಮಾಡುತ್ತಿದ್ದು ಪುರುಷ ಪ್ರಧಾನ ದೇಶದಲ್ಲಿ ಗೆಲವು ಸಾಧಿಸುವುದು ಅಷ್ಟು ಸುಲಭದ ಮಾತಲ್ಲ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ನಮ್ಮ ಹಿರಿಯರು ಸಹ ಸದಾ ಮಠದ ಸೇವೆ ಸಲ್ಲಿಸಿದವರು ದಾಸೋಹ ತಯಾರು ಮಾಡುವಲ್ಲಿ ಸಹಕರಿಸಿದವರು, ಅದರಲ್ಲಿಯೇ ತೃಪ್ತಿ ಕಂಡವರು.
ಮಹಾಂತ ಅಪ್ಪಗಳು ಬಸವ ಪರಂಪರೆಯ ಮೌಢ್ಯತೆಯ ನಿವಾರಣೆಯ ಪ್ರವರ್ತಕರಾಗಿರುವುದು, ಮಹಾಂತ ಜೋಳಿಗೆ ಬಸವ ನಿಷ್ಠೆ, ಇಷ್ಟಲಿಂಗ ಪೂಜಾ ನಿಷ್ಟತೆ ಮೂಲಕ ನಾವು ಕಂಡ ಅಂದಿನ ದಿನಮಾನಗಳಲ್ಲಿ ಅವರು ಅಪರೂಪದ ಸ್ವಾಮಿಗಳಾಗಿದ್ದರು, ಸಮಾಜಕ್ಕೆ ಉಪಯುಕ್ತವಾಗಬಲ್ಲ ಹತ್ತು ಹಲವು ಯೋಜನೆಗಳನ್ನು ಹಮ್ಮಿಕೊಂಡು ಕಾರ್ಯಗತಗೊಳಿಸಿದ ಶ್ರೇಯಸ್ಸು ಅವರದು ಎಂದರು.
ಸವದಿಯ ಶ್ರೀ ಸಂಗನಬಸವ ಶಿವಯೋಗಿಗಳು ತಮ್ಮ ನಡೆ, ನುಡಿಗಳಿಂದ ನಾಡನ್ನು ಪಾವನಗೊಳಿಸಿದ ಪ್ರಾತ: ಸ್ಮರಣೀಯ ಮಹಾಚೇತನಗಳ ಮೇಲ್ಪಂಕ್ತಿಯಲ್ಲಿರುವವರು. ಅವರ ತೇಜಸ್ವಿನಿಂದ ಆಧ್ಯಾತ್ಮಿಕ, ಸಾಂಸ್ಕೃತಿಕ ನೆಲೆಯಾಗಿ ಬಸವತತ್ವಾನುಷ್ಠಾನದಿಂದ ಅವಿಮುಕ್ತ ಸವದಿ ಎಂಬ ಪುಟ್ಟ ಗ್ರಾಮ ಇಂದು ಪುಣ್ಯ ಕ್ಷೇತ್ರಗಳಲ್ಲಿ ಒಂದಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಇಳಕಲ್ ಮಠದ ಗುರುಮಹಾಂತ ಸ್ವಾಮಿಗಳು ಮಾತನಾಡಿ ಪ್ರತಿಯೊಬ್ಬರು ಸಾಧಕರಿಗೂ ದಾರಿ ದೀಪವಾಗಿದ್ದಾರೆ ಅವರು ಹಾಕಿಕೊಟ್ಟ ದಾರಿಯಲ್ಲಿ ಎಲ್ಲರೂ ಸಾಗೋಣ ಎಂದರು.
- ಕರುನಾಡ ಕಂದ