ಮಾತೆಯಾಗಿ, ಮಡದಿಯಾಗಿ,
ಮಗಳಾಗಿ ನಿಷ್ಠೆಯಿಂದ ನಿಭಾಯಿಸುತ್ತಿರುವೆ,
ನಿನಗೆ ದಕ್ಕಿದ ಪದವಿಯನ್ನು ಎಲ್ಲವೂ ಶಿವಲೀಲೆ ಎಂದು
ಹೆಣ್ಣೆಂದರೆ ದೀನಳಾಗಿ, ದಯೆಯಿಂದ, ಧರ್ಮಕ್ಕಾಗಿ ಅನೀತಿಯನ್ನು ಆಳಿಸಿ,
ತನ್ನೆಲ್ಲಾ ಭಾವನೆಗಳ ಬುತ್ತಿಯನ್ನು ಎದೆಯೊಳಗಿಟ್ಟು, ತನ್ನನ್ನೇ ಅರ್ಪಿತವಾಗಿ,
ಸದ್ಗುಣಗಳ ಬಿತ್ತರಿಸುವ ಸಂಜನಾಳಂತೆ
ಹೆಣ್ಣೆಂದರೆ ಜೀವನವೆಂಬ ಕೊಳಲಿನೊಳಗೆ ಇಂಪಾಗಿ ಉದಯಿಸುವ
ಮನಮೋಹಕ ಶ್ರುತಿಯಂತೆ,
ಬಂದು ಬಳಗದ ಜೊತೆ ಪ್ರೇಮದಿಂದ ಪಯಣಿಸುವ ಮಹಾ ಸಾದ್ವಿಯಂತೆ.
ಹೆಣ್ಣೆಂದರೆ ಶರಾವತಿ ಹಿನ್ನೀರಿನ ದಡದ ತಟದಲ್ಲಿ ಅಬ್ಬರಿಸುವ
ಅಲೆಗಳ ಮಂಜುಳಗಾನ ಆಲಿಸುತ್ತಾ,
ಮಂದಸ್ಮಿತವಾಗಿ ಬಂದ ಭಕ್ತರನ್ನು ಸಲಹುವ ಸಿಗಂದೂರ ಚೌಡೇಶ್ವರಿಯಂತೆ.
ಹೆಣ್ಣೆಂದರೆ ತ್ಯಾಗ, ಪ್ರೀತಿ, ಕರುಣೆ, ವಿಶ್ವಾಸವನ್ನು ಬೆಳ್ಳಿಯ ಕೊಡದಲ್ಲಿಟ್ಟು,
ತನ್ನ ಆಸೆ-ಆಕಾಂಕ್ಷೆ ಬಿಟ್ಟು, ಬಂಗಾರದ ಪಂಜರದಲ್ಲಿ ಬಂದಿಯಾದ ಬಂಗಾರದ ಜಿಂಕೆಯಂತೆ.
ಪ್ರೀತಿಗೆ ಅರ್ಥವಿಲ್ಲದೆ, ಭಾವನೆಗಳ ಬೇಸಿಗೆಯಿಲ್ಲದೆ,
ಗಂಡ ಮಕ್ಕಳನ್ನು ತ್ಯಜಿಸುವ ನಾರಿಯರು ಸಾವಿರಕ್ಕೊಬ್ಬರು.
ಹೆಣ್ಣೆಂದರೆ ಬರುವ ಐಶ್ವರ್ಯ, ಸುಖ, ನೆಮ್ಮದಿಗಾಗಿ ಕಾಯುವ ಶಾಲಿನಿಯಂತೆ,
ಮಳೆಗಾಗಿ ಕಾಯುತ್ತಿರುವ ಸಂಪೂರ್ಣ ಇಳೆಯಂತೆ.
ಬದುಕಿನ ಬೇಕು-ಬೇಡಗಳ ಬೆನ್ನಟ್ಟಿ ನಗುವನ್ನು ಅರಸಿ ಹೊರಟ ಹರಿಣಿಯಂತೆ,
ಮಂತ್ರ, ತಂತ್ರ, ಕುತಂತ್ರಗಳ ಅತಂತ್ರ ತೊರೆದು, ಜಗವನ್ನೆಲ್ಲ ಹರಸುವ ಗಾಯತ್ರಿ ಮಂತ್ರದಂತೆ.
ಹೆಣ್ಣೆಂದರೆ ಮಂಡಿಯೂರಿ ಮಮತೆಯಿಂದ ಕೈ ಮುಗಿಯುವುದು ಗೊತ್ತು,
ಅವಳಲ್ಲಿದೆ ಆಕಾಶದವರೆಗೂ ತಲೆಯೆತ್ತಿ ಅರ್ಭಟಿಸುವ ಸಿಂಹಿಣಿಯ ಗತ್ತು.
ತಂದೆ, ತಾಯಿ, ಗಂಡ, ಮಕ್ಕಳ ಜವಾಬ್ದಾರಿ ಹೊತ್ತು ಸಾಗುವ ಸಂಸಾರದ ಸಾರಥಿ,
ಭವ್ಯ ಭಾರತಾಂಬೆಯ ಮಡಿಲಲ್ಲಿ, ಕರುನಾಡ ಮಣ್ಣಲ್ಲಿ ಶತಶತಮಾನಗಳಿಂದಲೂ
ಶಿಲ್ಪಕಲೆಗಳ ಕಲರವ!
ಈ ಮಣ್ಣಿನಲ್ಲಿ ಹುಟ್ಟಿದ ಹೆಣ್ಣಿಗೆ ಸಿಗುವುದು ಅಪಾರ ಗೌರವ!
ಪೂರ್ಣಿಮೆಯ ಬೆಳಕಿನಂತೆ ಲೋಕವನ್ನೆಲ್ಲಾ ತಾಳ್ಮೆ, ತ್ಯಾಗ, ಪ್ರೀತಿಯಿಂದ ಬೆಳಗಿಸುವೆ,
ಶೋಭಾಯಮಾನವಾಗಿ ನೀ ಜಗದ ಅರ್ಥವನ್ನೇ ರೂಪಿಸುವೆ ದೇವತೆಯಾಗಿ !
- ವಿ.ಶ್ರೀನಿವಾಸ ವಾಣಿಗರಹಳ್ಳಿ.