
ರಾಯಚೂರು/ ಸಿಂಧನೂರು :
ವಿದ್ಯಾರ್ಥಿಗಳು ಶೈಕ್ಷಣಿಕ ಪ್ರವಾಸಗಳನ್ನು ಕೈಗೊಳ್ಳುವುದರಿಂದ ಅವರಲ್ಲಿರುವ ಜ್ಞಾನ ಇನ್ನಷ್ಟು ಗಟ್ಟಿಯಾಗುತ್ತದೆ ಎಂದು ಆರ್.ಡಿ.ಸಿ.ಸಿ ಬ್ಯಾಂಕ್ ನ ನಿರ್ದೇಶಕರಾದ ಸೋಮನಗೌಡ ಬಾದರ್ಲಿ ಹೇಳಿದರು.
ಅವರು ಶುಕ್ರವಾರದಂದು ನಗರದ ಟಿ.ಬಿ.ಪಿ ಕ್ಯಾಂಪಿನ ಆದರ್ಶ ವಿದ್ಯಾಲಯ ಆವರಣದಲ್ಲಿ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಹಾಗೂ ಶಿಕ್ಷಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ 2024-25ನೇ ಸಾಲಿನ ‘ಕರ್ನಾಟಕ ದರ್ಶನ’ ಶೈಕ್ಷಣಿಕ ಪ್ರವಾಸ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಾ, ರಾಜ್ಯದ ಮುಖ್ಯಮಂತ್ರಿಗಳಾದ ಮಾನ್ಯ ಸಿದ್ದರಾಮಯ್ಯ ನವರ ನೇತೃತ್ವದಲ್ಲಿ ಅನೇಕ ಅಭಿವೃದ್ಧಿಪರ ಯೋಜನೆಗಳು, ಕಾರ್ಯಕ್ರಮಗಳು ಜಾರಿಯಾಗುತ್ತಿವೆ. ನಾಡಿನ ಜನರು, ವಿದ್ಯಾರ್ಥಿ-ಯುವಕರು ಮತ್ತು ಸಮಾಜದ ಎಲ್ಲಾ ವಲಯಗಳ ಜನತೆ ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದರು.
ಜಿಲ್ಲಾ ಪಂಚಾಯಿತ್ ಮಾಜಿ ಸದಸ್ಯರಾದ ಬಾಬುಗೌಡ ಬಾದರ್ಲಿ ಮಾತನಾಡಿ ರಾಜ್ಯ ಸರ್ಕಾರ ಶಿಕ್ಷಣ ಇಲಾಖೆಗೆ ಕೊಡಮಾಡಿರುವ ಎಲ್ಲಾ ಯೋಜನೆಗಳನ್ನು ಸಮರ್ಪವಾಗಿ ಬಳಸಿಕೊಳ್ಳಬೇಕು ಎಂದರು.
ತಾಲೂಕಾ ಬಿ.ಆರ್.ಸಿ ಕೇಂದ್ರದ ಕ್ಷೇತ್ರ ಸಮನ್ವಯಾಧಿಕಾರಿಗಳಾದ ಬಸಲಿಂಗಪ್ಪ ಅವರು ಮಾತನಾಡಿ, ಬಹಳ ಹಿಂದಿನಿಂದಲೂ ಪ್ರಚಲಿತದಲ್ಲಿರುವ ‘ದೇಶ ಸುತ್ತ ಕೋಶ ಓದು’ ಎನ್ನುವ ಮಾತು ಎಲ್ಲಾ ಕಾಲಕ್ಕೂ ಸತ್ಯವಾಗಿದೆ. ವಿದ್ಯಾರ್ಥಿಗಳು ತರಗತಿ ಕೋಣೆಗಳಲ್ಲಿ ಕಲಿತಿರುವ ಜ್ಞಾನವನ್ನು ಐತಿಹಾಸಿಕ ಸ್ಥಳ, ವಸ್ತು ಸಂಗ್ರಹಾಲಯಗಳು ಹಾಗೂ ಇನ್ನಿತರ ಸ್ಥಳಗಳಿಗೆ ಭೇಟಿ ನೀಡುವುದರಿಂದ ಅವರು ಕಲಿತಿರುವ ಪಠ್ಯಾಂಶಗಳು ಅವರ ಮನಸ್ಸಿನಲ್ಲಿ ಉಳಿದುಕೊಳ್ಳುತ್ತವೆ ಎಂದರು.
ಈ ಸಂದರ್ಭದಲ್ಲಿ ಕಾರ್ಯಕ್ರಮ ನೋಡಲ್ ಅಧಿಕಾರಿ ಹಾಗೂ ಶಿಕ್ಷಣ ಸಂಯೋಜಕರಾದ ಹನುಮಂತಪ್ಪ ನಾಯ್ಕರ್, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಮಲ್ಲಪ್ಪ, ಮುಖ್ಯಗುರುಗಳಾದ ಜಿ. ಸಮತ ಶರ್ಮಾ, ರಮಾದೇವಿ ಶಂಭೋಜಿ, ಚಂದ್ರಮೌಳೇಶ್ವರಸ್ವಾಮಿ, ಸುವರ್ಣ, ರೇಖಾ ತದ್ದೇವಾಡಿ, ದಿನೇಶ ಕೆಪಿ, ಹೊಳಿಯಪ್ಪ, ಭೀಮರೆಡ್ಡಿ, ಪ್ರೌಢಶಾಲಾ ಶಿಕ್ಷಕರ ಸಂಘದ ರವೀಂದ್ರಗೌಡ, ರಾಮದಾಸ, ವೀರೇಶ ಗೋನವಾರ, ಚೆನ್ನಬಸವ, ಪ್ರವಾಸೋದ್ಯಮ ಇಲಾಖೆಯ ಗಿರೀಶ, ಲಿಂಗೇಗೌಡ, ದೈಹಿಕ ಶಿಕ್ಷಕರಾದ ಶಾಂತಮೂರ್ತಿ, ಅನಿತಾ, ಶಕುಂತಲಾ, ಶರಣಬಸವ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಚಾಲನೆ : ಹಸಿರು ನಿನಾಶೆ ತೋರಿಸುವುದರೊಂದಿಗೆ ಸ್ವತಃ ಬಸ್ಸುಗಳನ್ನು ಚಾಲನೆ ಮಾಡುವ ಮೂಲಕ ಸೋಮನಗೌಡ ಬಾದರ್ಲಿ ಮತ್ತು ಬಾಬುಗೌಡ ಬಾದರ್ಲಿ ಕರ್ನಾಟಕ ದರ್ಶನ ಪ್ರವಾಸಕ್ಕೆ ಚಾಲನೆ ನೀಡಿದರು.
ಭಾಗಿ : ಪ್ರಸ್ತುತ ಸಾಲಿನ ಕರ್ನಾಟಕ ದರ್ಶನ ಶೈಕ್ಷಣಿಕ ಪ್ರವಾಸದಲ್ಲಿ ತಾಲೂಕಿನ ಎಲ್ಲಾ ಪ್ರೌಢಶಾಲೆಗಳ ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡಗಳ ಆಯ್ದ 145ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮೂರು ಬಸ್ಸುಗಳಲ್ಲಿ ತೆರಳಿದರು.
- ಕರುನಾಡ ಕಂದ