ಬೀದರ್ /ಬಸವಕಲ್ಯಾಣ: ಮಾಹಿತಿ ಹಕ್ಕಿನ ಅಡಿ ಕೇಳಲಾದ ವಿಷಯದ ಬಗ್ಗೆ ಮಾಹಿತಿ ನೀಡದ ಸಿಡಿಪಿಓಗೆ 25 ಸಾವಿರ ರೂ. ದಂಡ ವಿಧಿಸಿ ಕರ್ನಾಟಕ ಮಾಹಿತಿ ಆಯೋಗದ ಕಲಬುರ್ಗಿ ಪೀಠ ಆದೇಶ ಹೊರಡಿಸಿದೆ. ನಗರದ ಬನಶಂಕರಿಗಲ್ಲಿ ನಿವಾಸಿ ರೇವಣಸಿದ್ದಯ್ಯ ಎನ್ನುವರು ತಮ್ಮ ತಾಯಿ ನಿಧನ ಹಿನ್ನೆಲೆಯಲ್ಲಿ ತಮಗೆ ಸಿಡಿಪಿಓ ಕಚೇರಿಯಿಂದ ಸಿಗಬೇಕಿದ್ದ ಪರಿಹಾರ ಧನವನ್ನು ತಮ್ಮ ಸಹಿ ನಕಲು ಮಾಡಿ ತಮ್ಮ ಸಹೋದರರು ವಂಚನೆ ಮಾಡಿದ್ದಾರೆ. ತಾವು ವಿದೇಶದಲ್ಲಿ ಇದ್ದರೂ ಸಹ ತಮ್ಮ ಸಹಿ ನಕಲು ಮಾಡಿ ಪರಿಹಾರದ ಹಣ ಲಪಟಾಯಿಸಲಾಗಿದೆ ಎಂದು ನಗರ ಠಾಣೆಗೆ ದೂರು ಸಲ್ಲಿಸಿದ್ದಾರೆ. ಈ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ 3-9-2022ರಲ್ಲಿ ರೇವಣಸಿದ್ದಯ್ಯ ನವರು ಸಿಡಿಪಿಓ ಕಚೇರಿಯಿಂದ ಮಾಹಿತಿ ಹಕ್ಕಿನ ಅಡಿಯಲ್ಲಿ ದಾಖಲೆಗಳನ್ನು ಕೇಳಿ ಅರ್ಜಿ ಸಲ್ಲಿಸಿದ್ದರು. ಆದರೆ ದಾಖಲೆಗಳನ್ನು ನೀಡದೆ ತಮಗೆ ಸಿಡಿಪಿಓ ಕಚೇರಿಯಿಂದ ಉಡಾಫೆ ಉತ್ತರ ನೀಡಲಾಗಿದೆ ಎಂದು ಕರ್ನಾಟಕ ಮಾಹಿತಿ ಆಯೋಗದ ಕಲಬುರ್ಗಿ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದರು. ಪ್ರಕರಣ ಕುರಿತು ಕುಲಂಕುಶವಾಗಿ ಪರಿಶೀಲಿಸಿ, ವಿಚಾರಣೆ ನಡೆಸಿದ ಮಾಹಿತಿ ಆಯೋಗವು, ಮಾಹಿತಿ ನೀಡಲು ವಿಫಲವಾದ ಬಸವಕಲ್ಯಾಣ ಸಿಡಿಪಿಓ ಗೌತಮ ಶಿಂಧೆ ಅವರಿಗೆ 25 ಸಾವಿರ ರೂ. ದಂಡ ವಿಧಿಸಿ ಆದೇಶ ಹೋರಡಿಸಿದೆ. ದಂಡದ ಮೋತ್ತ ಭರಿಸಲು ನಿರ್ಲಕ್ಷ್ಯ ವಹಿಸಿದಲ್ಲಿ ಸೂಕ್ತ ಕ್ರಮಕ್ಕಾಗಿ ಶಿಫಾರಸ್ಸು ಮಾಡಲಾಗುವುದು ಎಂದು ರಾಜ್ಯ ಮಾಹಿತಿ ಆಯುಕ್ತರಾದ ರವೀಂದ್ರ ಗುರುನಾಥ ದಾಕಪ್ಪ ಅವರು ಆದೇಶ ಹೊರಡಿಸಿದ್ದಾರೆ ಎಂದು ನ್ಯಾಯವಾದಿ ಸಿ.ಪಿ. ಸಿಗೇದಾರ ತಿಳಿಸಿದ್ದಾರೆ.
