
ರಾಯಚೂರು/ ಸಿಂಧನೂರು : ಫೆ.8 ಸಮಗ್ರ ಶಿಕ್ಷಣ ಕರ್ನಾಟಕ, ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘ, ಅಗಸ್ತ್ಯ ಅಂತರಾಷ್ಟ್ರೀಯ ಪ್ರತಿಷ್ಠಾನದ ಸಿಂಧನೂರಿನ ಮಿನಿ ವಿಜ್ಞಾನ ಕೇಂದ್ರದ ವತಿಯಿಂದ ಬಾಲಕರ ಸರ್ಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಆವಿಷ್ಕಾರ ಮೇಳ ಯಶಸ್ವಿಯಾಯಿತು.
ಆವಿಷ್ಕಾರ ಮೇಳ ಕಾರ್ಯಕ್ರಮವನ್ನು ಆರ್ ಡಿ ಸಿ ಸಿ ಬ್ಯಾಂಕ್ ನ ನಿರ್ದೇಶಕರಾದ ಸೋಮನಗೌಡ ಬಾದರ್ಲಿ ಚಾಲನೆ ನೀಡಿ, ದೈನಂದಿನ ಸಮಸ್ಯೆಗಳಿಗೆ ಪರಿಹಾರ ರೂಪದಲ್ಲಿರುವ ವಿವಿಧ ವಿಜ್ಞಾನ ಮಾದರಿಗಳ ಕುರಿತು ಮಕ್ಕಳಿಂದ ಮಾಹಿತಿ ಪಡೆದುಕೊಂಡು ಖುಷಿಪಟ್ಟು ಮಕ್ಕಳನ್ನು ಅಭಿನಂದಿಸಿದರು.
ಈ ಸಂದರ್ಭದಲ್ಲಿ ಕಲಮಂಗಿ ಪ್ರೌಢಶಾಲೆಯ ಆಂಗ್ಲ ಭಾಷಾ ಶಿಕ್ಷಕ ವೀರೇಶ ಗೋನವಾರ ಅವರು ಆವಿಷ್ಕಾರ ಮೇಳದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿ ಮಾತನಾಡಿ, ಇಂತಹ ವಿಜ್ಞಾನ ಮೇಳಗಳು ಮಕ್ಕಳಲ್ಲಿ ವಿಜ್ಞಾನದ ಬಗ್ಗೆ ಆಸಕ್ತಿಯನ್ನು ಮೂಡಿಸುವುದರ ಜೊತೆಗೆ ಈಗಿನಿಂದಲೇ ವಿಜ್ಞಾನಿಯಾಗುವ ಕನಸುಗಳನ್ನು ಕಾಣಲಿಕ್ಕೆ ಸಹಕಾರಿಯಾಗುತ್ತವೆ ಎಂದರು. ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಕೆ.ಮಲ್ಲಪ್ಪ ಆವಿಷ್ಕಾರ ಮೇಳದ ಕುರಿತು ಮಾತನಾಡಿದರು.
ಈ ಸಂದರ್ಭದಲ್ಲಿ ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯ ಅಧಿಕಾರಿಗಳಾದ ಬಸಲಿಂಗಪ್ಪ, ಬಾಲಕರ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಸಮತಾ ಶರ್ಮ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಕಾರ್ಯದರ್ಶಿಗಳಾದ ರವೀಂದ್ರ ಗೌಡ, ಪದಾಧಿಕಾರಿಗಳಾದ ರಾಮದಾಸ ನಾಯ್ಕ, ಮೌಲಾನಾ ಆಜಾದ್ ಶಾಲೆಯ ಮುಖ್ಯ ಗುರುಗಳಾದ ಬಸವರಾಜ್, ಮಿನಿ ವಿಜ್ಞಾನ ಕೇಂದ್ರದ ಸಂಚಾಲಕ ಶಿವಗೇನಪ್ಪ, ಶಿಕ್ಷಕರಾದ ವಾಸಂತಿ, ಅಂಜನಾದೇವಿ, ತುಳಸಿದಾಸ್, ವೀರೇಶಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.
ವೀಕ್ಷಣೆ: ಆವಿಷ್ಕಾರ ಮೇಳವನ್ನು ಸುತ್ತ ಮುತ್ತಲಿನ ಶಾಲೆಗಳಾದ ಶಾಸಕರ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಮೌಲಾನಾ ಆಜಾದ್ ಮಾದರಿ ಶಾಲೆ ಕಸ್ತೂರಬಾ ಗಾಂಧಿ ಬಾಲಕಿಯರ ವಸತಿ ಶಾಲೆ, ಸರ್ಕಾರಿ ಬಾಲಕರ ಪ್ರೌಢಶಾಲೆ ಹಾಗೂ ಸರ್ಕಾರಿ ಶಿಕ್ಷಕ ತರಬೇತಿ ಸಂಸ್ಥೆಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ವೀಕ್ಷಣೆ ಮಾಡಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
- ಕರುನಾಡ ಕಂದ