
ಕಲಬುರಗಿ /ಜೇವರ್ಗಿ : ತಾಲೂಕಿನ ಪ್ರತಿಷ್ಠಿತ ಜ್ಞಾನ ಜ್ಯೋತಿ ಶಿಕ್ಷಣ ಸಂಸ್ಥೆಯು 2024 – 25 ನೇ ಸಾಲಿನ ಎಂಟನೇ ತರಗತಿ ವಿದ್ಯಾರ್ಥಿಗಳಿಗೆ ಅದ್ದೂರಿಯಾಗಿ ಬೀಳ್ಕೊಡುಗೆ ಕಾರ್ಯಕ್ರಮವು ಬಹಳ ಸಂಕ್ಷಿಪ್ತ ಹಾಗೂ ಅರ್ಥಪೂರ್ಣವಾಗಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಸಂಸ್ಥೆಯ ಖಜಾಂಚಿ ಮತ್ತು ಸದಸ್ಯರಾದ ಶ್ರೀ ಬಸಣ್ಣಗೌಡ ಪಾಟೀಲ್ ದಳಪತಿ ಹಾಗೂ ಶರಣಗೌಡ ಪಾಟೀಲ್ ರವರು ಜ್ಯೋತಿ ಬೆಳಗಿಸುವುದರ ಮುಖೇನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದ ಘನ ಅಧ್ಯಕ್ಷ ಸ್ಥಾನ ವಹಿಸಿದ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಹಣಮಂತ್ರಾಯಗೌಡ ಪಾಟೀಲ್ ರವರು ಸಂಸ್ಥೆಯು ನಡೆದ ಬಂದ ದಾರಿ, ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆ ಹಾಗೂ ಇನ್ನೂ ಹಲವಾರು ಮೌಲ್ಯಯುಕ್ತವಾದ ನುಡಿಗಳನ್ನಾಡಿದರು.
ಕಾರ್ಯಕ್ರಮದ ಮಧ್ಯದಲ್ಲಿ ಶಾಲೆಯ ವಿದ್ಯಾರ್ಥಿ/ನಿಯರು ಅದ್ದೂರಿಯಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳಾದ ನೃತ್ಯ, ಹಾಡು ಹಾಗೂ ಅನಿಸಿಕೆಗಳನ್ನು ಹೇಳುತ್ತಾ ಹಲವಾರು ವಿದ್ಯಾರ್ಥಿಗಳು ಸಂಸ್ಥೆ ಮತ್ತು ಶಿಕ್ಷಕರನ್ನು ಹೇಗೆ ಬಿಟ್ಟು ಹೋಗಬೇಕು ಎಂದು ಗಳ-ಗಳ ಕಣ್ಣೀರಿಟ್ಟರು.ನಂತರ ಕಾರ್ಯಕ್ರಮದ ಎರಡನೇ ಘಟ್ಟವಾದ ಜ್ಯೋತಿ ಬೆಳಗಿಸುವದರ ಮೂಲಕ ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀ ಚಂದ್ರಶೇಖರ ಪಾಟೀಲ್ ರವರು ಜ್ಯೋತಿ ಬೆಳಗಿಸಿ ವಿದ್ಯಾರ್ಥಿಗಳ ಮುಂದಿನ ಭವಿಷ್ಯಗಳ ಕುರಿತು ಷಟ್ವರ್ಗಗಳಾದ ತಾಯಿ, ತಂದೆ, ಗುರು, ಶ್ರದ್ದೆ, ಪ್ರಾಮಾಣಿಕತೆ, ಗೌರವ ಈ ಆರು ರತ್ನಗಳ ಬಗ್ಗೆ ಸವಿವರವಾಗಿ ಉದಾಹರಣೆಗಳೊಂದಿಗೆ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ತದನಂತರ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ ಶ್ರೀ ಸಂಗಮೇಶ ಸಂಕಾಲಿಯವರು ದೇಶ ಕಾಯುವ ಯೋಧರು ಮತ್ತು ಜಗತ್ತಿಗೆ ಅನ್ನ ಹಾಕುವ ರೈತರಿಂದ ಕೂಡಿದ ವೇದಿಕೆಯನ್ನು ನೋಡಿ ಅತೀವ ಸಂತೋಷವಾಯಿತು ಎಂದು ನುಡಿದರು. ನಂತರ ಶಾಲೆಯ ಮುಖ್ಯ ಗುರುಗಳಾದ ಶ್ರೀಮತಿ ಮಹಾಲಕ್ಷ್ಮಿ ಹೆಚ್ ಪಾಟೀಲ್ ರವರು ವಿದ್ಯಾರ್ಥಿಗಳ ಬದುಕಿನ ಏಳಿಗೆಗಾಗಿ ನಾವು ಹಲವಾರು ಬಾರಿ ತಿದ್ದಿ, ಬುದ್ದಿ ಮತ್ತು ಬೈದು ಹೇಳಿದ್ದು ಯಾರಿಗಾದರೂ ಮನಸ್ಸಿಗೆ ನೋವಾದರೆ ಕ್ಷಮೆ ಇರಲಿ ಎಂದು ಹೇಳಿದರು ಮತ್ತು ಕಾರ್ಯಕ್ರಮದುದ್ದಕ್ಕೂ ಶ್ರೀಮತಿ ಸಿದ್ದಮ್ಮ ಉಳ್ಳೆ ಸಹ ಶಿಕ್ಷಕಿಯವರು ಸ್ವಾಗತ ಕೋರಿ ನಿರೂಪಿಸಿ ,ಕಾರ್ಯಕ್ರಮಕ್ಕೆ ವಂದನಾರ್ಪಣೆಯನ್ನು ಸಲ್ಲಿಸಿದರು.
ಈ ಕಾರ್ಯಕ್ರಮದಲ್ಲಿ ಜ್ಞಾನ ಜ್ಯೋತಿ ಶಿಕ್ಷಣ ಸಂಸ್ಥೆಯ ಇನ್ನೋರ್ವ ಸದಸ್ಯರಾದ ಕುಮಾರ ಉಮೇಶ ಪಾಟೀಲ್ ,ಶಿಕ್ಷಕಯರಾದ ಶ್ರೀಮತಿ ಭುವನೇಶ್ವರಿ, ದೀಪಾ ಪಾಟೀಲ್ ಭಾಗ್ಯಶ್ರೀ,ಶಿಕ್ಷಕರಾದ ದೊಡ್ಡಪ್ಪ ಹರವಾಳ, ವಿವೇಕಾನಂದ ಹಾಗೂ ಇನ್ನಿತರ ಹಲವಾರು ಶಿಕ್ಷಕರು ಮತ್ತು ವಿದ್ಯಾರ್ಥಿಗಳು, ಪಾಲಕ- ಪೋಷಕ ಬಂಧುಗಳು ಪಾಲ್ಗೊಂಡಿದ್ದರು.
- ಕರುನಾಡ ಕಂದ