ಬೀದರ್/ ಚಿಟಗುಪ್ಪ : 12ನೇ ಶತಮಾನದ ಬಸವಾದಿ ಶರಣರು ಸಮಾಜದ ಎಲ್ಲಾ ಸ್ತರಗಳಲ್ಲಿನ ಬೇಧ, ಭಾವ, ಹೆಚ್ಚು ಕಡಿಮೆ, ಮೇಲು-ಕೀಳು ಮುಂತಾದ ತಾರತಮ್ಯ ಭಾವನೆಗಳನ್ನು ಹೊಡೆದು ಹಾಕಿ ಸಮಾನತೆ, ಸಹಬಾಳ್ವೆ, ಸಮಬಾಳು ತರುವ ಮೂಲಕ ಸಮ ಸಮಾಜದ ಕನಸು ಕಂಡಿದ್ದರು. ಅವರಂತೆ ತಾಲೂಕಿನ ಕಂದಗೋಳ ಗ್ರಾಮದಲ್ಲಿ ಜನ್ಮವೆತ್ತಿ ಬಸವಾದಿ ಶರಣರ ದಾರಿಯಲ್ಲಿ ಸಾಗಿ, ಅನೇಕ ಜನಪರ ಸೇವೆಗಳು ಗೈದು,ನಿಜ ಶರಣರಾಗಿ ಬಾಳಿ, ಇಂದಿಗೂ ಆದರ್ಶ ಚೇತನ ಮೂರ್ತಿಗಳಾಗಿ ಬೆಳಗುತ್ತಿರುವ ಶ್ರೀ ಪ್ರಭು ಮಡಿವಾಳೇಶ್ವರ ಸೇವಾ ಕೈಂಕರ್ಯಗಳು ಅನನ್ಯ ಮತ್ತು ಅಪಾರವಾಗಿವೆ. ಇಂತಹ ಶರಣರ ಸೇವೆಯಲ್ಲಿ ಇಂದು ಇಡೀ ಗ್ರಾಮವೇ ಸಾಗಿ ಬರುತ್ತಿರುವುದು ಹೆಮ್ಮೆ ಪಡುವ ಸಂಗತಿ. ಪ್ರಯುಕ್ತ ಶರಣರ ಜನ್ಮಸ್ಥಾನವಾದ ಕಂದಗೋಳ ಗ್ರಾಮದಲ್ಲಿ
ಪ್ರತಿವರ್ಷದಂತೆ ಈ ವರ್ಷವೂ ಶ್ರೀ ಗುರು ಶರಣ ಪ್ರಭು ಮಡಿವಾಳೇಶ್ವರ 89ನೇ ಜಾತ್ರಾ ಮಹೋತ್ಸವವೂ ಸಕಲ ರೀತಿಯ ಸಿದ್ಧತೆಯೊಂದಿಗೆ ಶೃಂಗಾರಗೊಂಡಿದೆ. ದಿ.13-03-2025 ರಿಂದ 26-03-2025 ರ ವರೆಗೆ ರಾತ್ರಿ 9 ಗಂಟೆಯಿಂದ ವಿಶೇಷವಾಗಿ ಸಂಗೀತ ಕಾರ್ಯಕ್ರಮ ಜರುಗಲಿದ್ದು. 21-03-2025 ರಿಂದ 25-03-2025 ರ ಸಾಯಂಕಾಲ 7 ರಿಂದ 8 ಗಂಟೆಯವರೆಗೆ ಶ್ರೀ ಶ್ರೀ ಶ್ರೀ ಷೋ.ಬ್ರ.ನಾಗಲಿಂಗ ಮಾಹಾಸ್ವಾಮಿಗಳು, ಪೀಠಾಧಿಪತಿ ಶ್ರೀ ಶಿವಾನಂದ ಕೈಲಾಸ ಆಶ್ರಮ ಬ್ಯಾಲಹಳ್ಳಿ (ಕೆ.) ಇವರಿಂದ ಪ್ರವಚನ ಕಾರ್ಯಕ್ರಮ ನಡೆಯಲಿದೆ.
ಬುಧವಾರ ದಿ.26-03-2025 ರಂದು ಮುಂಜಾನೆ 8 ಗಂಟೆಗೆ ಗ್ರಾಮದಲ್ಲಿ ಶರಣರ ಪಲ್ಲಕ್ಕಿ ಉತ್ಸವದೊಂದಿಗೆ ಭವ್ಯವಾದ ಮೆರವಣಿಗೆ ಹಾಗೂ ವಚನ ಸಂಗೀತ ಭಜನೆಗಳೊಂದಿಗೆ ಐತಿಹಾಸಿಕವಾದಂತ ಪಥ ಸಂಚಲನ ಜರುಗಲಿದೆ. ಅಂದು ಮುಂಜಾನೆ 11 ಗಂಟೆಯಿಂದ ಸಾಯಂಕಾಲದ ವರೆಗೆ ಮಹಾಪ್ರಸಾದ ವ್ಯವಸ್ಥೆ ಇರುತ್ತದೆ. ಸಾಯಂಕಾಲ 7 ಗಂಟೆಗೆ ದೇಶದ ಹೆಸರಾಂತ ಸಾಹಿತಿ,ಕವಿ, ಚಿಂತಕರು, ಯೋಗ ಗುರು, ಖ್ಯಾತ ಪ್ರವಚನಕಾರರಾದ ಪರಮ ಪೂಜ್ಯ ಶ್ರೀ ಡಾ.ಬಸವಲಿಂಗ ಅವಧೂತರು, ಪೀಠಾಧ್ಯಕ್ಷರು ಮಲ್ಲಯ್ಯಗಿರಿ ಹಾಗೂ ದೇಗಲಮಡಿ ಆಶ್ರಮ ಇವರಿಂದ ಪ್ರವಚನ ಕಾರ್ಯಕ್ರಮ ನಡೆಯಲಿದೆ.
ಕಾರಣ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸಮಯಕ್ಕೆ ಸರಿಯಾಗಿ ಆಗಮಿಸಿ ಪರಮ ಪೂಜ್ಯರ ಪ್ರವಚನ ಆಲಿಸಿ, ಆಶೀರ್ವಾದ ಪಡೆಯಬೇಕೆಂದು
ಸಮಿತಿ ಅಧ್ಯಕ್ಷ ಶಂಕ್ರಪ್ಪ ಶೇರಿ, ಕಾರ್ಯದರ್ಶಿ ರಾಜಶೇಖರ ದೇವಣಿ ತಿಳಿಸಿದ್ದಾರೆ.
ಶರಣ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ,ಶರಣರ ಕೃಪಾಶೀರ್ವಾದ ಪಡೆದು
ಪುನಿತರಾಗಿಬೇಕೆಂದು ಸಮಿತಿಯ ಪದಾಧಿಕಾರಿಗಳು ವಿನಂತಿಸಿದ್ದಾರೆ.
- ಕರುನಾಡ ಕಂದ