ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಕೆ. ಹೊಸಹಳ್ಳಿ ಗ್ರಾಮದ ಶ್ರೀ ಶರಣಬಸವೇಶ್ವರ 34ನೇ ವರ್ಷದ ಜಾತ್ರಾ ಮಹೋತ್ಸವ ಹಾಗೂ ರಥೋತ್ಸವ ಕಾರ್ಯಕ್ರಮ ಮಹಿಳೆಯರ ಕಳಸ, ಡೊಳ್ಳು ವಾದ್ಯಗಳೊಂದಿಗೆ ಸಾವಿರಾರು ಭಕ್ತ ಸಮೂಹದಲ್ಲಿ ಜಯಘೋಷಗಳೊಂದಿಗೆ ಅದ್ದೂರಿಯಾಗಿ ಜರುಗಿತು.
ಬುಧವಾರ ಬೆಳಗಿನಿಂದಲೇ ಶ್ರೀ ಶರಣಬಸವೇಶ್ವರ ಮೂರ್ತಿಗೆ ಸಂಕಲ್ಪ,ರುದ್ರಾಭಿಷೇಕ,ಸಹಸ್ರ ಬಿಲ್ವಾರ್ಚನೆ,ಕಳಸಾರೋಹಣ, ಪಂಚ ಪೀಠ ಧ್ವಜಾರೋಹಣ, ಪುಷ್ಪಲಂಕಾರ ಮಾಡಲಾಯಿತು. ಮಹಿಳೆಯರು ಉತ್ಸಾಹಭರಿತರಾಗಿ ಕುಂಭ ಕಳಸಗಳೊಂದಿಗೆ ಮೆರವಣಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ನಂತರ ಜಾತ್ರೆಯಲ್ಲಿ ಪಾಲ್ಗೊಂಡ ಎಲ್ಲಾ ಭಕ್ತಾಧಿಗಳಿಗೆ ಪ್ರಸಾದ ವ್ಯವಸ್ಥೆ ಮಾಡಲಾಯಿತು.
ಸಂಜೆ ಪೂಜ್ಯರ ಸಮ್ಮುಖದಲ್ಲಿ ರಥಕ್ಕೆ ಪುಷ್ಪಲಂಕಾರಗೊಳಿಸಿ ಪೂಜೆ ಮಾಡಿ, ಸಹಸ್ರಾರು ಸಂಖ್ಯೆಯ ಜನರ ಜಯಘೋಷಗಳೊಂದಿಗೆ ರಥೋತ್ಸವ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತು.
ಈ ಸಂದರ್ಭದಲ್ಲಿ ಪರಮ ಪೂಜ್ಯರು, ಶ್ರೀ ಶರಣಬಸವೇಶ್ವರ ಸೇವಾ ಸಮಿತಿ ಸದಸ್ಯರು, ಯುವಕ ಮಂಡಳಿ ಸದಸ್ಯರು, ಹಳೆಯ ವಿದ್ಯಾರ್ಥಿಗಳ ಸಂಘದ ಸದಸ್ಯರು, ಪೊಲೀಸ್ ಸಿಬ್ಬಂದಿಗಳು, ಜೆಸ್ಕಾಂ ಸಿಬ್ಬಂದಿಗಳು, ಊರಿನ ಹಿರಿಯರು, ಯುವಕರು, ಮಹಿಳೆಯರು ಸೇರಿದಂತೆ ಇನ್ನಿತರರು ಭಾಗಿಯಾಗಿದ್ದರು.
- ಕರುನಾಡ ಕಂದ
