ಬಳ್ಳಾರಿ / ಕಂಪ್ಲಿ : ರೈತರ ಹಿತದೃಷ್ಠಿಯಲ್ಲಿ ಕಾನೂನು ತೊಡಕುಗಳು ನಿವಾರಣೆಯಾದರೆ, ರೈತರ ಜೀವನಾಡಿ ಕಂಪ್ಲಿ ಸಕ್ಕರೆ ಕಾರ್ಖಾನೆ ಆರಂಭಿಸಲಾಗುವುದು ಎಂದು ಶಾಸಕ ಜೆ.ಎನ್.ಗಣೇಶ ಹೇಳಿದರು.
ಸ್ಥಳೀಯ ತಹಶೀಲ್ದಾರ್ ಕಛೇರಿ ಬಳಿಯ ರೈತ ಸಂಪರ್ಕ ಕೇಂದ್ರದ ಮುಂಭಾಗದಲ್ಲಿ ಗುರುವಾರ ಆಯೋಜಿಸಿದ್ದ ಕೃಷಿ ಸಲಕರಣೆ ವಿತರಣೆ ಕಾರ್ಯಕ್ರಮದಲ್ಲಿ ರೈತರಿಗೆ ಕೃಷಿ ಪರಿಕರಗಳನ್ನು ವಿತರಿಸಿ ಮಾತನಾಡಿ, ರೈತರ ಅನುಕೂಲಕ್ಕಾಗಿ ಸರ್ಕಾರ ಸಾಕಷ್ಟು ಕೃಷಿ ಯೋಜನೆಗಳನ್ನು ಜಾರಿಗೊಳಿಸಿ, ಸಹಾಯಧನದ ಮೂಲಕ ಯೋಜನೆಗಳನ್ನು ತಲುಪಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಇನ್ನೂ ಹೆಚ್ಚುವರಿಯಾಗಿ ಸಲಕರಣೆಗಳ ಅವಶ್ಯಕತೆ ಇದ್ದರೆ, ಒದಗಿಸಲಾಗುವುದು. ಕಂಪ್ಲಿಯಲ್ಲಿ 176 ಎಕರೆ ಭೂಮಿಯಲ್ಲಿ ಸಕ್ಕರೆ ಕಾರ್ಖಾನೆ ಇದ್ದು, ಆರಂಭಕ್ಕೆ ಕಾನೂನು ತೊಡಕುಗಳು ಬರುತ್ತಿದ್ದು, ಈ ಸಮಸ್ಯೆಗಳಿಗೆ ಮುಕ್ತಿ ಸಿಕ್ಕರೆ ಕಾರ್ಖಾನೆ ಆರಂಭಿಸುವುದು ಶತಸಿದ್ಧ, ಸರ್ಕಾರದ ಪ್ರತಿಯೊಂದು ಯೋಜನೆಗಳ ಸದುಪಯೋಗಪಡಿಸಿಕೊಂಡು, ಆರ್ಥಿಕವಾಗಿ ರೈತರು ಸಬಲರಾಗಬೇಕು ಎಂದರು.
ಕೃಷಿ ಇಲಾಖೆಯ ಬಳ್ಳಾರಿ ಜಿಲ್ಲಾ ಜಂಟಿ ನಿರ್ದೇಶಕ ಕೆ.ಸೋಮ್ ಸುಂದರ್ ಮಾತನಾಡಿ, 40 ಜನ ರೈತರಿಗೆ ಕೃಷಿ ಯಂತ್ರೋಪಕರಣಗಳನ್ನು ವಿತರಿಸಲಾಗಿದ್ದು, ಸರ್ಕಾರದ ಪ್ರತಿಯೊಂದು ಯೋಜನೆಗಳನ್ನು ಸದ್ಭಳಕೆ ಮಾಡಿಕೊಳ್ಳಬೇಕು. ಕೃಷಿ ಭಾಗ್ಯ ಮತ್ತು ಯಾಂತ್ರಿಕಯೋಜನೆಯಡಿಯಲ್ಲಿ 5 ಡೀಸೈಲ್, ಇಂಜಿನ್, 30 ಕೃಷಿ ಉಪಕರಣಗಳು, 6 ತುಂತೂರು ನೀರಿನ ಘಟಕ, 1 ತಾಡಪಲ್ ವಿತರಿಸಲಾಯಿತು. ರೈತರ ಶ್ರೇಯೋಭಿವೃದ್ಧಿಗಾಗಿ ಹತ್ತಾರು ಯೋಜನೆಗಳನ್ನು ಕೃಷಿ ಇಲಾಖೆ ನೀಡುತ್ತಿದೆ. ಕೃಷಿಗೆ ಪೂರಕವಾದ ಯಂತ್ರೋಪಕರಣಗಳನ್ನು ಸಹಾಯಧನದಲ್ಲಿ ವಿತರಿಸಲಾಗುತ್ತಿದೆ ಎಂದರು. ನಂತರ ರೈತ ಮಹಿಳೆ ವಿ.ಟಿ.ನೇತ್ರಾವತಿ ನಾಗರಾಜ ಇವರಿಗೆ ಕೃಷಿ ಹೊಂಡ ಪರಿಕರ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಎಪಿಎಂಸಿ ಅಧ್ಯಕ್ಷ ಹಬೀಬ್ ರೆಹಮಾನ್, ತಹಶೀಲ್ದಾರ್ ಶಿವರಾಜ ಶಿವಪುರ, ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕ (ಎಡಿ) ಎಸ್.ಬಿ.ಪಾಟೀಲ್, ಉಪ ಕೃಷಿ ನಿರ್ದೇಶಕ ಮಂಜುನಾಥ, ಕೃಷಿ ಅಧಿಕಾರಿ ಕೆ.ಸೋಮಶೇಖರ, ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕಿ ಡಾ.ಅಭಿಲಾಷ, ಕೃಷಿ ಅಧಿಕಾರಿ ವಿದ್ಯಾವತಿ, ರೈತ ಮುಖಂಡರಾದ ಶ್ರೀನಿವಾಸರಾವ್, ಬಿ.ವಿ.ಗೌಡ, ತಿಮ್ಮಪ್ಪನಾಯಕ, ವಿ.ಟಿ.ನಾಗರಾಜ, ಡಾ.ಎ.ಸಿ.ದಾನಪ್ಪ, ಆದೋನಿ ರಂಗಪ್ಪ, ಕೃಷಿ ಇಲಾಖೆ ಸಿಬ್ಬಂದಿಗಳಾದ ರೇಣುಕಾರಾಧ್ಯ, ಸೋಮಪ್ಪ, ಎನ್.ಸುರೇಶ, ನಾಗರಾಜ, ಟಿ.ಸುರೇಶ ಸೇರಿದಂತೆ ರೈತರು ಭಾಗವಹಿಸಿದ್ದರು.
ವರದಿ : ಜಿಲಾನ್ ಸಾಬ್ ಬಡಿಗೇರ.
