ಬಳ್ಳಾರಿ / ಕಂಪ್ಲಿ : ಕೇಂದ್ರ ಪುರಸ್ಕೃತ ಯೋಜನೆಗಳ ಪರಿಶೀಲನೆ ಮತ್ತು ಮೇಲುಸ್ತುವಾರಿಗಾಗಿ ರಚಿಸಿರುವ ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಕರ್ನಾಟಕ ರಾಜ್ಯ ಮಟ್ಟದ ದಿಶಾ ಸಮಿತಿಗೆ ರಾಜ್ಯ ಸದಸ್ಯರಾಗಿ ಎ.ಸಿ.ದಾನಪ್ಪರವರನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ ನಾಮನಿರ್ದೇಶನ ಮಾಡಿ ಆದೇಶಿಸಿದೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಕೇಂದ್ರ ಮತ್ತು ಕೇಂದ್ರ ಪುರಸ್ಕೃತ ಯೋಜನೆಗಳ ಉಸ್ತುವಾರಿಗೆ 2018ರಲ್ಲಿ ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಮಂತ್ರಾಲಯವು ದಿಶಾ ಸಮಿತಿಯನ್ನು ರಚಿಸಿರುತ್ತದೆ. ಗ್ರಾಮೀಣಾಭಿವೃದ್ಧಿ ಸಚಿವಾಲಯವು ಗ್ರಾಮೀಣ ಪ್ರದೇಶಗಳಲ್ಲಿನ ಹೆಚ್ಚಿನ ಕಲ್ಯಾಣ ಮತ್ತು ಅಭಿವೃದ್ಧಿ ಚಟುವಟಿಕೆಗಳಿಗೆ ಕಾರಣವಾಗಿದೆ. ಜೀವನೋಪಾಯದ ಅವಕಾಶಗಳನ್ನು ಹೆಚ್ಚಿಸುವ ಮೂಲಕ, ಸಾಮಾಜಿಕ ಸುರಕ್ಷತಾ ಜಾಲವನ್ನು ಒದಗಿಸುವ ಮೂಲಕ ಮತ್ತು ಬೆಳವಣಿಗೆಗೆ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುವ ಮೂಲಕ ಬಡತನ ನಿರ್ಮೂಲನೆಗಾಗಿ ಬಹುಮುಖಿ ಕಾರ್ಯತಂತ್ರದ ಮೂಲಕ ಗ್ರಾಮೀಣ ಭಾರತದ ಸುಸ್ಥಿರ ಮತ್ತು ಸಮಗ್ರ ಬೆಳವಣಿಗೆಯೇ ಸಚಿವಾಲಯದ ದೃಷ್ಟಿಕೋನ ಮತ್ತು ಧ್ಯೇಯವಾಗಿದೆ. ಪ್ರಮುಖ ಯೋಜನೆಗಳನ್ನು ಗ್ರಾಮೀಣಾಭಿವೃದ್ಧಿ ಸಚಿವಾಲಯವು ನಿರ್ವಹಿಸುತ್ತಿದೆ.
ಸದರಿ ಸಮಿತಿಯು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವರ ಉಪಾಧ್ಯಕ್ಷತೆಯ ರಾಜ್ಯ ಮಟ್ಟದ ದಿಶಾ ಸಮಿತಿಗೆ ಸದಸ್ಯರನ್ನಾಗಿ ಭಾರತೀಯ ದಲಿತ ಪ್ಯಾಂಥರ್ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಕಂಪ್ಲಿಯ ಎ.ಸಿ. ದಾನಪ್ಪರವರನ್ನು ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಯೋಜನೆ ಇಲಾಖೆಯು ನೇಮಕ ಮಾಡಿ ಆದೇಶಿಸಿರುತ್ತಾರೆ.
ವರದಿ : ಜಿಲಾನ್ ಸಾಬ್ ಬಡಿಗೇರ.
