ಬೆಳಗಾವಿ/ ರಾಮದುರ್ಗ: ಹಿಂದೂ ಮುಸ್ಲಿಂ ಕ್ರಿಸ್ಚಿಯನ್ ಯುನೈಟೆಡ್ ಅಂತರಾಷ್ಟ್ರೀಯ ಸಂಸ್ಥೆ ಕೊಡಮಾಡುವ 16 ನೇ ಅಂತರರಾಷ್ಟ್ರೀಯ ಶಾಂತಿ ಪ್ರಶಸ್ತಿ ಮತ್ತು ಯುನೈಟೆಡ್ ಸ್ಟೇಟ್ಸ್ ಗ್ಲೋಬಲ್ ಎಕ್ಸಲೆನ್ಸ್ ಪ್ರಶಸ್ತಿ 2025 ರ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಇದೇ ಏಪ್ರಿಲ್ 5 ರಂದು ಮಲೇಷಿಯಾ ದೇಶದ ರಾಜಧಾನಿ ಕೌಲಾಲಂಪುರದಲ್ಲಿ ಅದ್ದೂರಿಯಾಗಿ ಜರುಗಿತು.
ಈ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹದಿನೇಳಕ್ಕಿಂತ ಹೆಚ್ಚು ದೇಶಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು. ಭಾರತ ಸೇರಿ ವಿವಿಧ ದೇಶಗಳ ಇಪ್ಪತ್ನಾಲ್ಕು ಮಂದಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಈ ಭಾರತ ಶಕ್ತಿ ಮತ್ತು ಯುನೈಟೆಡ್ ಸ್ಟೇಟ್ಸ್ ಗ್ಲೋಬಲ್ ಎಕ್ಸಲೆನ್ಸ್ ಶಾಂತಿ ಪ್ರಶಸ್ತಿಗೆ ಭಾರತದಿಂದ ಕೇವಲ ಒಬ್ಬರೆ ಆಯ್ಕೆಯಾದ ಎಂ ಕೆ ಯಾದವಾಡ ಅವರು ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ನಿವಾಸಿ, ಯಾದವಾಡ ಅವರು ರಾಮದುರ್ಗ ತಾಲೂಕಿನಲ್ಲಿ ಮೊಟ್ಟ ಮೊದಲ ಬಾರಿಗೆ ಸೋಷಿಯಲ್ ಮೀಡಿಯಾ ಸುದ್ದಿ ವಾಹಿನಿ ಪರಿಚಯಿಸಿದವರು, ತಾಲೂಕಿಗೆ ನೂತನ ರೈಲು ಮಾರ್ಗ ನಿರ್ಮಾಣಕ್ಕಾಗಿ ನಡೆಯುತ್ತಿರುವ ಹೋರಾಟದಲ್ಲಿ ಮುಂಚೂಣಿ ಪಾತ್ರ ವಹಿಸಿದವರು, ಭ್ರಷ್ಟಾಚಾರ ವಿರೋಧಿ, ಬಡವರ ಧ್ವನಿಯಾಗಿ ವಿವಿಧ ಸಂಘ-ಸಂಸ್ಥೆಗಳ ಜೊತೆ ಕೂಡಿ ಅನೇಕ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿದ್ದಾರೆ. ಎಲ್ಲಾ ಸಮುದಾಯಗಳ ನಡುವೆ ಉತ್ತಮ ಸೌಹಾರ್ದತೆಯನ್ನು ಬಲಗೊಳಿಸಲು ಶ್ರಮಿಸುತ್ತಿದ್ದಾರೆ.
ಇವರ ಸಾಮಾಜಿಕ ಕಳಕಳಿ ಮತ್ತು ಕಾರ್ಯಗಳನ್ನು ಗುರುತಿಸಿ ಮಲೇಷಿಯಾ ದೇಶದ ರಾಜಧಾನಿ ಕೌಲಾಲಂಪುರ್ ದಲ್ಲಿ ನಡೆದ ಹಿಂದೂ-ಮುಸ್ಲಿಮ್-ಕ್ರಿಸ್ಚಿಯನ್ ಯುನೈಟೆಡ್ ಸಂಸ್ಥೆಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಯಾದವಾಡ ಅವರಿಗೆ “ ಭಾರತ ಶಕ್ತಿ ಮತ್ತು ಯುನೈಟೆಡ್ ಸ್ಟೇಟ್ಸ್ ಗ್ಲೋಬಲ್ ಎಕ್ಸಲೆನ್ಸ್ ಶಾಂತಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಈ ವೇಳೆ HMC ಯುನೈಟೆಡ್ ಸಂಸ್ಥೆಯ ಸಂಸ್ಥಾಪಕ್ ಶಕೀಲ್ ಹಸನ ಅವರು ಯಾದವಾಡ ಅವರಿಗೆ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಪ್ರಶಸ್ತಿ ಸ್ವೀಕರಿಸಿದ ನಂತರ ಮಾತನಾಡಿದ ಎಂ ಕೆ ಯಾದವಾಡ ಅವರು “ಇಂದು ಅಂತರಾಷ್ಟ್ರೀಯ ಶಾಂತಿ ಪ್ರಶಸ್ತಿ ಪಡೆದಿದಕ್ಕಾಗಿ ನನಗೆ ತುಂಬಾ ಖುಷಿಯಾಗುತ್ತಿದೆ. ಈ ಪ್ರಶಸ್ತಿಯು ನನಗೆ ಬೆಂಬಲಿಸಿ ಪ್ರೋತ್ಸಾಹ ನೀಡಿದ ನಮ್ಮ ರಾಮದುರ್ಗ ತಾಲೂಕಿನ ಎಲ್ಲಾ ಜನತೆಗೆ ಸಲ್ಲುತ್ತದೆ. ಸಾಮಾಜಿಕ ಕಾರ್ಯಗಳನ್ನು ಮಾಡಲು ನನಗೆ ಪ್ರೊತ್ಸಾಹಿಸಿದ ನನ್ನ ತಾಲೂಕಿನ ಜನತೆ ಮತ್ತು ಪತ್ರಕರ್ತರು, ಮಾಧ್ಯಮ ಮಿತ್ರರು ಹಾಗೂ ಸ್ನೇಹಿತರು ಸಂಘ ಸಂಸ್ಥೆಯ ಮುಖಂಡರು, ರಾಜಕೀಯ ನಾಯಕರು ಹಿತೈಷಿಗಳು ಎಲ್ಲರಿಗೂ ಧನ್ಯವಾದಗಳು” ಎಂದು ಹೇಳಿದರು.
- ಕರುನಾಡ ಕಂದ
