ಬಳ್ಳಾರಿ / ಕಂಪ್ಲಿ : ಸ್ಥಳೀಯ ಬಿಎಸ್‌ವಿ ಶಾಲಾ ಆವರಣದಲ್ಲಿ ತಾಲೂಕು ಆಡಳಿತ, ತಾ.ಪಂ, ಸಮಾಜ ಕಲ್ಯಾಣ ಇಲಾಖೆ ಮತ್ತು ಪುರಸಭೆ ಸಂಯುಕ್ತಾಶ್ರಯದಲ್ಲಿ ಸೋಮವಾರ ಆಯೋಜಿಸಿದ್ದ ಭಾರತ ರತ್ನ, ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತ್ಯೋತ್ಸವ ಕಾರ್ಯಕ್ರಮ ಸಂಭ್ರಮದಿಂದ ಜರುಗಿತು.
ಉಪನ್ಯಾಸಕ ಸಿದ್ದಣ್ಣ ಪರಮೇಶ್ವರ ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ಪುಸ್ತಕ ಬಿಟ್ಟು, ಮೊಬೈಲ್ ಕಡೆಗೆ ವಾಲಿದ್ದಾರೆ. ಈ ದೇಶದ ಅಖಂಡತೆ ಉಳಿಬೇಕೆಂದರೆ, ನಮ್ಮ ಸಂವಿಧಾನದ ಆಶಯಗಳನ್ನು ಪಾಲಿಸಬೇಕು. ಸಂವಿಧಾನ ಬದಲಾವಣೆ ಅಸಾಧ್ಯ. ಯುವಕರು ಸಂವಿಧಾನದ ಸಿದ್ದಾಂತಗಳನ್ನು ಮೈಗೂಡಿಸಿಕೊಂಡು, ಶಿಕ್ಷಣದೊಂದಿಗೆ ಬದಲಾವಣೆಯಾಗಬೇಕು ಎಂದರು.
ಪುರಸಭೆ ಅಧ್ಯಕ್ಷ ಭಟ್ಟ ಪ್ರಸಾದ್ ಉದ್ಘಾಟಿಸಿ ಮಾತನಾಡಿ, ಅಂಬೇಡ್ಕರ್ ಸಂವಿಧಾನದ ಮೂಲಕ ದೇಶದ ಜನರ ನೆಮ್ಮದಿಯ ಬದುಕಿಗೆ ಆಸರೆಯಾಗಿದ್ದಾರೆ. ಇವರ ಕೊಡುಗೆ ಅನನ್ಯವಾಗಿದೆ ಎಂದರು.
ತಹಶೀಲ್ದಾರ್ ಶಿವರಾಜ ಶಿವಪುರ ಇವರು ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು. ನಂತರದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಎಪಿಎಂಸಿ ಅಧ್ಯಕ್ಷ ಹಬೀಬ್ ರೆಹಮಾನ್, ತಾ.ಪಂ ಇಒ ಆರ್.ಕೆ.ಶ್ರೀಕುಮಾರ, ಎಡಿ ಮಲ್ಲನಗೌಡ, ಪುರಸಭೆ ಸದಸ್ಯ ಕೆ.ಎಸ್.ಚಾಂದ್ ಬಾಷಾ, ಮುಖ್ಯಾಧಿಕಾರಿ ಕೆ.ದುರುಗಣ್ಣ, ಪಿಐ ಕೆ.ಬಿ.ವಾಸುಕುಮಾರ, ನಿಲಯ ಪಾಲಕರಾದ ಕೆ.ವಿರುಪಾಕ್ಷಿ, ಅರುಣ್, , ಮುಖಂಡರಾದ ಕೆ.ಎಂ.ಹೇಮಯ್ಯಸ್ವಾಮಿ, ಡಾ.ಎ.ಸಿ.ದಾನಪ್ಪ, ಜಿ.ರಾಮಣ್ಣ, ಬಿ. ಸಿದ್ದಪ್ಪ, ವಿ.ಬಿ.ಗೌಡ, ಅಕ್ಕಿ ಜಿಲಾನ್, ಬಿ.ದೇವೇಂದ್ರ, ಕೆ ಲಕ್ಷ್ಮಣ, ಬಿ.ನಾಗೇಂದ್ರ, ಬಿ. ರಮೇಶ ಸೇರಿದಂತೆ ಅನೇಕರಿದ್ದರು.
ಮೆರವಣಿಗೆ: ಇಲ್ಲಿನ ಸಾಂಗಾತ್ರಯ ಸಂಸ್ಕೃತ ಪಾಠವಶಾಲೆಯಿಂದ ಮೆರವಣಿಗೆ ಆರಂಭಿಸಿ, ಪ್ರಮುಖ ರಸ್ತೆಗಳ ಮೂಲಕ ಅಂಬೇಡ್ಕರ್ ವೃತ್ತದಲ್ಲಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ತದನಂತರ ಶಾಲಾ ಆವರಣದಲ್ಲಿ ಸಮಾರೋಪ ಸಮಾರಂಭ ಜರುಗಿತು. ಮೆರವಣಿಗೆಯಲ್ಲಿ ತಾಷಾರಾಂಡೋಲ್, ಹಕ್ಕಿ ಪಿಕ್ಕಿ ಸಮುದಾಯದ ನೃತ್ಯ ಸೇರಿದಂತೆ ವಿವಿಧ ಕಲಾ ಪ್ರಕಾರಗಳು ಮೆರಗು ನೀಡಿದವು. ಶಾಸಕ ಜೆ.ಎನ್.ಗಣೇಶ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಈ ವೇಳೆ ಪುರಸಭೆ ಸದಸ್ಯ ಸಿ.ಆರ್.ಹನುಮಂತ, ಮುಖಂಡರು, ಕಂದಾಯ ಇಲಾಖೆ ಸಿಬ್ಬಂದಿ ಇದ್ದರು. ಶಿಕ್ಷಕ ವಸಂತ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ವರದಿ : ಜಿಲಾನ್ ಸಾಬ್ ಬಡಿಗೇರ.
