ಬಳ್ಳಾರಿ / ಕಂಪ್ಲಿ : ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಇಂದು ಕಂಪ್ಲಿ ತಾಲೂಕು ತಹಶೀಲ್ದಾರರ ಮೂಲಕ ಮಾನ್ಯ ಜಿಲ್ಲಾಧಿಕಾರಿಗಳಿಗೆ ಭತ್ತ ಖರೀದಿ ಕೇಂದ್ರ ತೆರೆಯಲು ಆಗ್ರಹಿಸಿ ರೈತರು ಮನವಿ ಪತ್ರವನ್ನು ನೀಡಿದರು. ಮನವಿ ಪತ್ರ ನೀಡಿ ಮಾತನಾಡಿದ ಜಿಲ್ಲಾಧ್ಯಕ್ಷ ಬಿ. ವಿ. ಗೌಡ ರೈತರು ಬೆಳೆದ ಬೆಳೆಗಳಿಗೆ ವರ್ಷದಿಂದ ವರ್ಷಕ್ಕೆ ಬೆಲೆ ಕಡಿಮೆಯಾಗುತ್ತಿದೆ. ರೈತ ಮಾಡಿದ ಸಾಲಗಳನ್ನು ತೀರಿಸಿದೆ ಸಾಲದ ಸುಳಿಯಲ್ಲಿ ಸಿಲುಕಿದ್ದಾನೆ. ಈಗ ಭತ್ತ ಕಟ್ಟಾವಿಗೆ ಬರುತ್ತಿದ್ದು ಹಲವಾರು ರೈತರು ಬೆಳೆ ಕಟಾವಿನಲ್ಲಿ ತೊಡಗಿದ್ದಾರೆ, ಆದರೆ ಬೆಳೆದ ಭತ್ತಕ್ಕೆ ಸರಿಯಾದ ಬೆಲೆ ಸಿಗದೆ ಒದ್ದಾಡುವಂಥ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಕಳೆದ ಮುಂಗಾರಿನಲ್ಲಿ ಖರೀದಿ ಕೇಂದ್ರಗಳನ್ನ ತೆರೆಯಲು ವಿಳಂಬವಾದ ಕಾರಣ ರೈತರು ತಮ್ಮ ಬೆಳೆಗಳನ್ನು ಬಹಳ ಕಡಿಮೆ ದರದಲ್ಲಿ ಅಂದರೆ ಎಂಎಸ್ ಪಿ ದರಕ್ಕಿಂತಲೂ ಕಡಿಮೆ ದರದಲ್ಲಿ ಮಾರಾಟ ಮಾಡಿಕೊಂಡಿದ್ದರು ಮತ್ತು ಎಕರೆಗೆ ಅಂದಾಜು 10 ರಿಂದ 15 ಸಾವಿರ ರೂಪಾಯಿಗಳಷ್ಟು ನಷ್ಟವನ್ನು ಅನುಭವಿಸಿದ್ದಾರೆ, ಈಗ ಭತ್ತವನ್ನು ಮಧ್ಯವರ್ತಿಗಳು ಕಡಿಮೆ ದರದಲ್ಲಿ ಖರೀದಿಸುತ್ತಿದ್ದಾರೆ, ಆದಕಾರಣ ಈ ಕೂಡಲೇ ಜಿಲ್ಲೆಯ ಭಾಗದ ರೈತರಿಗೆ ಅನುಕೂಲವಾಗುವಂತೆ ಭತ್ತ ಖರೀದಿ ಕೇಂದ್ರಗಳನ್ನು ತೆರೆಯಲು ಸಂಬಂಧಪಟ್ಟ ಅಧಿಕಾರಿಗಳಿಗೆ ಆದೇಶ ನೀಡಿ ಕೂಡಲೇ ಭತ್ತ ನೊಂದಣಿ ಮತ್ತು ಖರೀದಿ ಆರಂಭಿಸಬೇಕು ಹಾಗೂ ಷರತ್ ರಹಿತವಾಗಿ ಮತ್ತು ನಿರಂತರವಾಗಿ ಭತ್ತ ಖರೀದಿ ಮಾಡಬೇಕು. ಅನ್ನಭಾಗ್ಯ ಯೋಜನೆಗೆ ಬೇಕಾದ ಅಕ್ಕಿಯನ್ನು ಕಮೀಷನ್ ಗಾಗಿ ಬೇರೆ ರಾಜ್ಯದಿಂದ ಅಕ್ಕಿ ಆಮದು ಮಾಡುವುದನ್ನು ನಿಲ್ಲಿಸಿ, ನಮ್ಮ ರಾಜ್ಯದಲ್ಲಿಯೇ ಬೆಳೆದ ಭತ್ತವನ್ನು ಖರೀದಿಸಿ ಅನ್ನ ಭಾಗ್ಯ ಯೋಜನೆಗೆ ಬಳಕೆ ಮಾಡಬೇಕು ಅಥವಾ ರೈತರಿಂದ ನೇರವಾಗಿ ಅಕ್ಕಿಯನ್ನು ಖರೀದಿ ಮಾಡಿ ಅನ್ಯಭಾಗ್ಯ ಯೋಜನೆಗೆ ಬಳಕೆ ಮಾಡಬೇಕೆಂದು ತಿಳಿಸಿದ್ದರು.
ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷ ಆನಂದ ರೆಡ್ಡಿ, ತಾಲೂಕು ಅಧ್ಯಕ್ಷ ವಿರೇಶ, ತಾಲೂಕು ಕಾರ್ಯಧ್ಯಕ್ಷರಾದ ಡಿ. ಮುರಾರಿ, ನಗರ ಘಟಕ ಅಧ್ಯಕ್ಷ ತಿಮ್ಮಪ್ಪ ನಾಯಕ್, ರೈತ ಮುಖಂಡರಾದ ಪಿ. ನಾರಾಯಣರೆಡ್ಡಿ, ಪೋಲೂರು ಸತ್ಯಪ್ಪ, ಲಿಂಗಪ್ಪ, ಶ್ರೀನಿವಾಸ ಸೇರಿದಂತೆ ಇತರರು ಉಪಸ್ಥಿತರಿದ್ದರು.
ವರದಿ : ಜಿಲಾನ್ ಸಾಬ್ ಬಡಿಗೇರ
