ಬಾಗಲಕೋಟೆ :ಮೇ 01 ರಂದು ರಬಕವಿ ನಗರದ ಶ್ರೀ ಶಿವದಾಸಿಮಯ್ಯ ಸಮುದಾಯ ಭವನದಲ್ಲಿ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ವತಿಯಿಂದ ರಾಜ್ಯ ಮಟ್ಟದ ಕಾಯಕ ಯೋಗಿ ದಿನಾಚರಣೆಯನ್ನು ಆಯೋಜಿಸಲಾಗಿದೆ ಎಂದು ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಚಿರಂಜೀವಿ ರೋಡಕರ್ ಅವರು ಪೂರ್ಣಪ್ರಜ್ಞ ಶಿಕ್ಷಣ ಸಂಸ್ಥೆಯಲ್ಲಿ ಕರೆದ ಸಭೆಯಲ್ಲಿ ಪತ್ರಿಕೆಗೆ ತಿಳಿಸಿದರು. ಶರಣರ ಕಾಯಕ ತತ್ವ ಆಧಾರಿಸಿ ರಾಜ್ಯದ ಆಯಾ ಜಿಲ್ಲೆಗನುಗುಣವಾಗಿ ಒಬ್ಬರನ್ನು ಕಾಯಕ ಯೋಗಿ ಎಂದು ಗುರುತಿಸಿ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿ ಸನ್ಮಾನಿಸಲಾಗುವುದು ಎಂದು ತಿಳಿಸಿದರು.
ಇದೇ ಕಾರ್ಯಕ್ರಮದಲ್ಲಿ ರಬಕವಿ -ಬನಹಟ್ಟಿ, ಜಮಖಂಡಿ, ಮುಧೋಳ ಸಮಿತಿಗಳ ಪದಗ್ರಹಣ, ಪುಸ್ತಕ ಬಿಡುಗಡೆ, ಮತ್ತು ಪವಾಡ ಬಯಲು ಕಾರ್ಯಕ್ರಮಗಳು ಸಹ ಇರುತ್ತವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ ರಾಜಮಾನೆ, ತಾಲೂಕು ಅಧ್ಯಕ್ಷ ಅಶೋಕ ಬಾಗೇನ್ನವರ, ಪ್ರಧಾನ ಕಾರ್ಯದರ್ಶಿ ಮೂಕೇಶ ತೇಲಿ, ಜಿಲ್ಲಾ ಉಪಾಧ್ಯಕ್ಷರಾದ ಜಿ ಐ ಹತ್ತಳ್ಳಿ, ರೇಖಾ ಕುಳ್ಳೋಳ್ಳಿ, ಆರ್ ಬಿ ಹೊಟ್ಕರ, ಪಿ ಬಿ ಆಲಗೂರು, ಮಹಾಲಿಂಗಪ್ಪ ತೇಲಿ, ಶೈಲಾ ಮಿರ್ಜಿ, ನಿರ್ಮಲಾ ಬೀಳಗಿ, ಕೀರ್ತಿ ಹೊಸಮನಿ, ಪ್ರಶಾಂತ ಒಡೆಯರ್, ಬಿ ಡಿ ನೇಮಗೌಡ ಹಾಗೂ ಸಮಿತಿ ಸದಸ್ಯರು ಇತರೆ ಸಂಘಟನೆಗಳ ಅಧ್ಯಕ್ಷರು, ಸದಸ್ಯರು ಇದ್ದರು.
- ಕರುನಾಡ ಕಂದ
