ಬಳ್ಳಾರಿ / ಕಂಪ್ಲಿ : ತಾಲೂಕು ಸಮೀಪದ ದೇವಸಮುದ್ರ ಗ್ರಾಮದಲ್ಲಿ ಡಾ.ಬಿ. ಆರ್. ಅಂಬೇಡ್ಕರ್ ಅವರ ಜನ್ಮದಿನೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಭಾವಚಿತ್ರ ಮೆರವಣಿಗೆ ಅದ್ಧೂರಿಯಾಗಿ ಜರುಗಿತು. ಕರ್ನಾಟಕ ದಲಿತ ಸಂಘರ್ಷ ಸಮಿತಿಯ ತಾಲೂಕು ಮುಖಂಡ ಹೆಚ್.ಗುಂಡಪ್ಪ ಮಾತನಾಡಿ, ಡಾ.ಬಿ.ಆರ್. ಅಂಬೇಡ್ಕರ್ ಅವರ ತತ್ವ ವಿಚಾರಧಾರೆಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು, ಡಾ.ಬಿ.ಆರ್. ಅಂಬೇಡ್ಕರ್ಅವರು ಶೋಷಣೆಯನ್ನು ಸಹಿಸಿ, ಸಮಾಜ ಪರಿವರ್ತನೆಗಾಗಿ ಜೀವನದ ಉದ್ದಕ್ಕೂ ಹೋರಾಟದ ಬದುಕು ನಡೆಸಿ ಶೋಷಿತ ಸಮಾಜಗಳಿಗೆ ಬೆಳಕಿನ ಹಣತೆಯಾಗಿದ್ದಾರೆ. ನಾವೆಲ್ಲರೂ ಸಂವಿಧಾನದ ಹಕ್ಕು ಮತ್ತು ಕರ್ತವ್ಯಗಳನ್ನು ಅರಿತು ಅವರು ಹಾಕಿಕೊಟ್ಟ ದಾರಿಯಲ್ಲಿ ನಡೆಯಬೇಕು ಎಂದರು. ದೇವಸಮುದ್ರ ಗ್ರಾಮದಲ್ಲಿ ಕೆಂಚಮ್ಮ ಗುಡಿಯಿಂದ ಸಹಿಪ್ರಾ ಶಾಲೆತನಕ ಅಂಬೇಡ್ಕರ್ ಭಾವಚಿತ್ರ ಮೆರವಣಿಗೆ ನಡೆಯಿತು. ಯುವತಿಯರು ಆರತಿ ತಟ್ಟೆಗಳನ್ನು ಹಿಡಿದು ಪಾಲ್ಗೊಂಡಿದ್ದರು. ಪ್ರಮುಖರಾದ ಕಡೆಮನಿ ಮಂಜುನಾಥ, ಎನ್.ಹೊನ್ನೂರಪ್ಪ, ಕುರುಬರ ಬಸವರಾಜ, ನಾಯಕರ ವೆಂಕೋಬಿ, ಎಚ್.ವೀರೇಶ, ಗ್ರಾಮ ಸಂಚಾಲಕ ಎಚ್.ರುದ್ರಪ್ಪ, ಎಚ್.ದುರ್ಗೇಶ, ಬಾಳಾಪುರ ಮಂಜುನಾಥ, ಎಚ್.ಪ್ರಭು ಇತರರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್.
