ಬೆಂಗಳೂರು : ರಾಜ್ಯದಲ್ಲಿ ಡೀಸೆಲ್ ಬೆಲೆ, ಟೋಲ್ ದರ ಹೆಚ್ಚಳ ವಿರೋಧಿಸಿ 3 ದಿನಗಳಿಂದ ಹಾಗೂ ವಿವಿಧ ಬೇಡಿಕೆ ಈಡೇರಿಸುವಂತೆ 3 ದಿನಗಳಿಂದ ಲಾರಿ ಮಾಲೀಕರ ಸಂಘ ನಡೆಸುತ್ತಿದ್ದ ಅನಿರ್ದಿಷ್ಟಾವಧಿ ಮುಷ್ಕರ ಅಂತ್ಯವಾಗಿದೆ. ಏ. 14ರಿಂದ ರಾಜ್ಯದಲ್ಲಿ ಮುಷ್ಕರ ನಡೆಸುತ್ತಿದ್ದ ಲಾರಿ ಮಾಲೀಕರೊಂದಿಗೆ ಸಚಿವ ರಾಮಲಿಂಗಾ ರೆಡ್ಡಿ ಗುರುವಾರ (ಏ. 17) ನಡೆಸಿದ ಸಂಧಾನ ಸಭೆ ಯಶಸ್ವಿಯಾಗಿದೆ.
ಲಾರಿ ಮಾಲೀಕರೊಂದಿಗೆ ಸಚಿವ ರಾಮಲಿಂಗಾ ರೆಡ್ಡಿ ನಡೆಸಿದ ಸಂಧಾನ ಸಭೆ ಯಶಸ್ವಿಯಾಗಿದೆ. ಇದರಿಂದ ರಾಜ್ಯಾದ್ಯಂತ ಸರಕು ಸಾಗಾಣಿಕೆಯಲ್ಲಿ ವ್ಯತ್ಯಯವಾಗಿ, ಬೆಲೆ ಏರಿಕೆಯಾಗುತ್ತದೆ ಎನ್ನುವ ಆತಂಕ ಸದ್ಯಕ್ಕೆ ದೂರವಾಗಿದೆ.
ಲಾರಿ ಮಾಲೀಕರ ಬೇಡಿಕೆ ಈಡೇರಿಸಲು ಮುಂದಾಗುವುದಾಗಿ ಸಚಿವ ಸಚಿವ ರಾಮಲಿಂಗಾ ರೆಡ್ಡಿ ಭರವಸೆ ನೀಡಿದ ಹಿನ್ನಲೆಯಲ್ಲಿ ಲಾರಿ ಮುಷ್ಕರ ವಾಪಾಸ್ಸು ಪಡೆಯುವುದಾಗಿ ಪದಾಧಿಕಾರಿಗಳು ಘೋಷಿಸಿದರು. ಮುಷ್ಕರ ಆರಂಭವಾದಾಗಿನಿಂದ ನಡೆದ 3ನೇ ಸಂಧಾನ ಸಭೆ ಇದಾಗಿದೆ. ಈ ಹಿಂದನ 2 ಸಭೆಗಳು ವಿಫಲವಾಗಿದ್ದವು. ಗುರುವಾರ ವಿಧಾನಸೌಧದಲ್ಲಿನ ರಾಮಲಿಂಗಾರೆಡ್ಡಿ ಅವರ ಕಚೇರಿಯಲ್ಲಿ ಲಾರಿ ಮಾಲೀಕರ ಸಂಘದೊಂದಿಗೆ ನಡೆಸಿದ 3ನೇ ಬಾರಿ ಸಭೆಯಲ್ಲಿ ಸಂಘದ ಪದಾಧಿಕಾರಿಗಳೊಂದಿಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಂಧಾನ ಸಭೆ ನಡೆಸಿದರು. ಡೀಸೆಲ್ ಬೆಲೆ ಇಳಿಸುವ, ಟೋಲ್ ರದ್ದು ಮಾಡುವ ಬೇಡಿಕೆಗಳನ್ನು ಹೊರತುಪಡಿಸಿ, ಉಳಿದ ಬೇಡಿಕೆಗಳನ್ನು ಈಡೇರಿಸುವುದಾಗಿ ಸಚಿವರು ಭರವಸೆ ನೀಡಿದ್ದರಿಂದ ಮುಷ್ಕರ ಅಂತ್ಯಗೊಂಡಿದೆ.
ಮುಷ್ಕರ ಹಿಂಪಡೆದ ಹಿನ್ನಲೆಯಲ್ಲಿ ರಾಜ್ಯಾದ್ಯಂತ ಲಾರಿಗಳ ಓಡಾಟ ಆರಂಭವಾಗಿದೆ. ರಾಜ್ಯ ಲಾರಿ ಮಾಲೀಕರ ಹಾಗೂ ಏಜೆಂಟರ ಸಂಘ ಅಧ್ಯಕ್ಷ ಜಿ.ಆರ್. ಷಣ್ಮುಖಪ್ಪ ಪ್ರತಿಕ್ರಿಯಿಸಿ, ‘ಗಡಿ ತನಿಖಾ ಠಾಣೆ ಸಮಸ್ಯೆಯನ್ನು ಮೂರು ತಿಂಗಳಲ್ಲಿ ಬಗೆಹರಿಸುವ ಭರವಸೆ ನೀಡಿದ್ದಾರೆ. ಡೀಸೆಲ್ ದರವನ್ನು ಹಿಂದಿನ ಸರ್ಕಾರ 2023ಕ್ಕಿಂತ ಮೊದಲು ಯದ್ವಾತದ್ವಾ ಏರಿಕೆ ಮಾಡಿತ್ತು. ಆ ಬಗ್ಗೆ ಅಧ್ಯಯನ ಮಾಡುವುದಾಗಿ ಹೇಳಿದ್ದಾರೆ. ನಗರಗಳಿಗೆ ಸರಕು ವಾಹನಗಳ ಪ್ರವೇಶಕ್ಕೆ ಕೇವಲ 5 ಗಂಟೆ ಅವಕಾಶ ನೀಡಿರುವ ಬಗ್ಗೆ ಗಮನ ಹರಿಸುವುದಾಗಿ ತಿಳಿಸಿದ್ದಾರೆ. ವಾಹನಗಳ ಸಾಮರ್ಥ್ಯ ಅರ್ಹತಾ ಪತ್ರ (ಎಫ್‌ಸಿ) ನವೀಕರಣಕ್ಕೆ ₹13 ಸಾವಿರ ಶುಲ್ಕ ವಿಧಿಸುವ ಕೇಂದ್ರ ಸರ್ಕಾರದ ಪ್ರಸ್ತಾವವನ್ನು ಒಪ್ಪಿಕೊಳ್ಳದೇ ಕಡಿಮೆ ಮಾಡಲು ಪತ್ರ ಬರೆಯುವುದಾಗಿ ಹೇಳಿದ್ದಾರೆ. ಪೊಲೀಸರ ಕಿರುಕುಳ ತಪ್ಪಿಸಲು ಹೇಳಿದ್ದೇವೆ’ ಎಂದು ತಿಳಿಸಿದರು.
ಲಾರಿ ಮುಷ್ಕರದಿಂದಾಗಿ ದಿನಕ್ಕೆ ₹4,500 ಕೋಟಿ ನಷ್ಟವಾಗಿದೆ. ನಮ್ಮ ಬೇಡಿಕೆಗಳಿಗೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿರುವುದರಿಂದ ಮುಷ್ಕರ ಕೊನೆಗೊಳಿಸಿದ್ದೇವೆ’ ಎಂದು ಮಾಹಿತಿ ನೀಡಿದರು.
ವರದಿ : ಜಿಲಾನಸಾಬ್ ಬಡಿಗೇರ್.
