ಬಳ್ಳಾರಿ / ಕಂಪ್ಲಿ : ಕಂಪ್ಲಿ ತಾಲ್ಲೂಕಿನಲ್ಲಿ ಬಾಲ್ಯ ವಿವಾಹಗಳನ್ನು ತಡೆಯುವ ನಿಟ್ಟಿನಲ್ಲಿ ತಾಲ್ಲೂಕಿನ ಎಲ್ಲಾ ಶಾಲೆಗಳ ಮುಖ್ಯಗುರುಗಳು, ಗ್ರಾ.ಪಂ ಅಭಿವೃದ್ಧಿ ಅಧಿಕಾರಿಗಳು ಹಾಗೂ ಗ್ರಾಮಾಡಳಿತಾಧಿಕಾರಿಗಳಿಗೆ ತರಬೇತಿಯನ್ನು ನೀಡಲಾಗುವುದು ಎಂದು ಬಳ್ಳಾರಿ ರೀಡ್ಸ್ ಸಂಸ್ಥೆಯ ನಿರ್ದೇಶಕ ತಿಪ್ಪೇಶಪ್ಪ ತಿಳಿಸಿದರು.
ಅವರು ಪಟ್ಟಣದ ತಹಸಿಲ್ದಾರ್ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಬಾಲ್ಯ ವಿವಾಹಗಳನ್ನು ತಡೆಯುವ ತಾಲ್ಲೂಕು ಮಟ್ಟದ ಸಮನ್ವಯ ಮತ್ತು ಪರಿಶೀಲನಾ ಸಮಿತಿ ಹಾಗೂ ತಾಲ್ಲೂಕು ಮಟ್ಟದ ಮಹಿಳೆಯರ ಮತ್ತು ಮಕ್ಕಳ ರಕ್ಷಣಾ ಕಾವಲು ಸಮಿತಿಯ ಅಧ್ಯಕ್ಷರು ಹಾಗೂ ಸರ್ವ ಸದಸ್ಯರ ಸಭೆಯಲ್ಲಿ ಮಾತನಾಡಿ ಜಿಲ್ಲೆಯಲ್ಲಿ ಅಪ್ರಾಪ್ತ ಗರ್ಭಿಣಿಯರ ಸಂಖ್ಯೆ ಅಧಿಕವಾಗುತ್ತಿರುವುದು ಅತ್ಯಂತ ಕಳವಳಕಾರಿ ಸಂಗತಿಯಾಗಿದೆ. ಶಾಲೆ ಬಿಡುವವರ ಸಂಖ್ಯೆಯೂ ಕಂಡು ಬರುತ್ತಿದ್ದು, ಈ ಹಿನ್ನೆಲೆಯಲ್ಲಿ ತಾಲ್ಲೂಕಿನ ಎಲ್ಲಾ ಮುಖ್ಯ ಗುರುಗಳಿಗೆ, ಪಿಡಿಒಗಳಿಗೆ, ವಿಎಒಗಳಿಗೆ ತರಬೇತಿ ನೀಡಲಾಗುವುದು, ಶಾಲೆಗಳಲ್ಲಿ ಪ್ರತಿ ತಿಂಗಳು ಮುಖ್ಯ ಶಿಕ್ಷಕರು ಶಾಲೆಗೆ ನಿರಂತರವಾಗಿ ಗೈರು ಹಾಜರಾಗುವವರ ಮಾಹಿತಿಯನ್ನು ಕಡ್ಡಾಯವಾಗಿ ಒದಗಿಸಬೇಕೆಂದರು.
ಮಕ್ಕಳ ರಕ್ಷಣಾ ಸಂಸ್ಥೆಯ ಚನ್ನಬಸಪ್ಪ ಪಾಟೀಲ್ ಮಾತನಾಡಿ ಏ. 30ಕ್ಕೆ ಅಕ್ಷಯ ತೃತೀಯವಿದ್ದು, ಅಂದು ಬಹಳಷ್ಟು ಕಡೆ ಸಾಮೂಹಿಕ ವಿವಾಹಗಳು ನಡೆಯುತ್ತಿರುವುದರಿಂದ ಬಾಲ್ಯ ವಿವಾಹಗಳ ಬಗ್ಗೆ ವಿಶೇಷ ಗಮನ ಹರಿಸಬೇಕಾಗಿದ್ದು, ತಾಲ್ಲೂಕು ಮಟ್ಟದ ಸಮಿತಿ ಎಲ್ಲಾ ಪದಾಧಿಕಾರಿಗಳು ವಿಶೇಷ ಕಾಳಜಿ ವಹಿಸಬೇಕು ಶಾಲೆಗಳಿಗೆ ರಜೆ ಇರುವುದರಿಂದ ಮಕ್ಕಳು ಕೆರೆ, ಹೊಂಡಗಳ ಬಳಿ ತೆರಳುತ್ತಿದ್ದು ಕೆರೆ,ಹೊಂಡಗಳ ಹತ್ತಿರ ರಕ್ಷಣೆ ಒದಗಿಸಬೇಕು ಎಂದರು.
ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ನಿಗಾ ಕೇಂದ್ರದ ಎನ್.ಜಿ.ಒ. ಸಂಸ್ಥೆಯ ಸದಸ್ಯ ಎಚ್.ಸಿ.ರಾಘವೇಂದ್ರ ಮಾತನಾಡಿ ದೇಶದಲ್ಲಿ 1929ರಲ್ಲಿ ಬಾಲ್ಯ ವಿವಾಹ ನಿಷೇಧ ಕಾಯ್ದೆ ಜಾರಿಗೆ ಬಂದಿದ್ದರೂ ಸಹಿತ ಇಂದಿಗೂ ಬಾಲ್ಯ ವಿವಾಹಗಳು ನಡೆಯುತ್ತಿರುವುದು ಅತ್ಯಂತ ಖೇದಕರ ಸಂಗತಿಯಾಗಿದ್ದು, ಈ ನಿಟ್ಟಿನಲ್ಲಿ ಅವರಿವರನ್ನು ದೂಷಿಸದೇ ಜವ್ದಾರಿಯುತ ಎಲ್ಲಾ ನಾಗರೀಕರು ಈ ಪಿಡುಗನ್ನು ನಿರ್ಮೂಲನೆ ಮಾಡಲು ಶ್ರಮಿಸಬೇಕು ವಿಶೇಷವಾಗಿ ತಾಲ್ಲೂಕು ಮಟ್ಟದ ಸಮಿತಿಯ ಪದಾಧಿಕಾರಿಗಳು ಹಾಗೂ ಶಿಕ್ಷಕರು,ಅಂಗನವಾಡಿ ಕಾರ್ಯಕರ್ತೆಯರು ಗಮನ ಹರಿಸಬೇಕು ಎಂದರು.
ತಾಲ್ಲೂಕು ಸಮಿತಿ ಅಧ್ಯಕ್ಷರು ಹಾಗೂ ತಹಸಿಲ್ದಾರರಾದ ಶಿವರಾಜ ಶಿವಪುರ ಮಾತನಾಡಿ ಬಾಲ್ಯ ವಿವಾಹಗಳನ್ನು ತಡೆಯುವಲ್ಲಿ ಮತ್ತು ಮಹಿಳೆಯರ ಹಾಗೂ ಮಕ್ಕಳ ರಕ್ಷಣಾ ವಿಷಯದಲ್ಲಿ ಪ್ರತಿಯೊಬ್ಬರೂ ಜಾಗ್ರತೆಯಿಂದ ಕಾರ್ಯನಿರ್ವಹಿಸಬೇಕು. ಸಮಿತಿಯ ಎಲ್ಲಾ ಸದಸ್ಯರು ತಮ್ಮ ತಮ್ಮ ವ್ಯಾಪ್ತಿಯಲ್ಲಿ ಕಂಡು ಬರುವ ಬಾಲ್ಯ ವಿವಾಹಗಳ ಬಗ್ಗೆ ಕೂಡಲೇ ಮಾಹಿತಿ ನೀಡಬೇಕು. ಕಂದಾಯ, ಪೊಲೀಸ್,ಶಿಶು ಅಭಿವೃದ್ಧಿ ಮತ್ತು ಪಿಡಿಒಗಳೊಂದಿಗೆ ಸಮನ್ವಯತೆಯನ್ನು ಸಾಧಿಸಿ ಈ ಪಿಡುಗನ್ನು ಬುಡ ಸಮೇತ ಕಿತ್ತೊಗೆಯಬೇಕೆಂದು ಸೂಚಿಸಿದರು. ವಿಶೇಷವಾಗಿ ತಾಲ್ಲೂಕಿನ ಎಲ್ಲಾ ಶಾಲೆಗಳ ಮುಖ್ಯ ಶಿಕ್ಷಕರು ತಮ್ಮ ಶಾಲೆಗಳಲ್ಲಿ ನಿರಂತರವಾಗಿ ಗೈರಾಗುವ ಮಕ್ಕಳ ಮಾಹಿತಿಯನ್ನು ಸಮಿತಿಗೆ ಕಡ್ಡಾಯವಾಗಿ ಒದಗಿಸಬೇಕೆಂದರು.
ಸಭೆಯಲ್ಲಿ ತಾ.ಪಂ.ಇಒ ಆರ್.ಕೆ.ಶ್ರೀಕುಮಾರ್, ಪಿಐ ಕೆ.ಬಿ.ವಾಸುಕುಮಾರ್, ಸಿಡಿಪಿಒ ಪ್ರದೀಪ್, ಪ್ರಭಾರಿ ವೈದ್ಯಾಧಿಕಾರಿ ಡಾ. ಅರುಣಕುಮಾರ್, ಸಮಾಜ ಕಲ್ಯಾಣ ಇಲಾಖೆಯ ಗಾದಿಲಿಂಗಪ್ಪ, ಪುರಸಭೆಯ ಪರಿಸರ ಅಭಿಯಂತರ ಶರಣಪ್ಪ, ಶಿಕ್ಷಣ ಇಲಾಖೆಯ ಇಸಿಒ ರೇವಣ್ಣ, ಸಿರ‍್ಪಿ ಈರೇಶ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್.
