ಬಳ್ಳಾರಿ / ಕಂಪ್ಲಿ : ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ಕಳೆದ ರಾತ್ರಿ ಗಾಳಿ ಸಹಿತ ಮಳೆಯಾಗಿದ್ದು, ಬೇಸಿಗೆ ಹಿನ್ನಲೆ ಭೂಮಿ ತಂಪೆರೆದರೂ, ಭತ್ತದ ಬೆಳೆ ಸಂರಕ್ಷಣೆಗೆ ರೈತರು ಹರಸಾಹಸಪಡುವಂತಾಗಿದೆ.
ಭಾನುವಾರ ಮಧ್ಯರಾತ್ರಿ 1:15 ಗಂಟೆ ಸುಮಾರಿಗೆ ಮೊದಲಿಗೆ ಗಾಳಿ ಆರಂಭದೊಂದಿಗೆ ಸಿಡಿಲಿನ ಮೂಲಕ ವರುಣನ ಸಿಂಚನವಾಯಿತು.
ಕಂಪ್ಲಿ, ನಂ.10 ಮುದ್ದಾಪುರ, ರಾಮಸಾಗರ, ದೇವಸಮುದ್ರ, ಮೆಟ್ರಿ, ಸಣಾಪುರ, ಕೊಟ್ಟಾಲ್, ಎಮ್ಮಿಗನೂರು ಸೇರಿದಂತಾ ತಾಲೂಕು ವ್ಯಾಪ್ತಿಯ ನಾನಾ ಕಡೆಗಳಲ್ಲಿ ಸಿಡಿಲು ಮತ್ತು ಗಾಳಿಯೊಂದಿಗೆ ಮಳೆ ಸುರಿಯಿತು.
ಮೊಡದಿಂದ ಬಂದಂತಹ ಮಳೆಯಿಂದಾಗಿ ರೈತರು ರಾತ್ರಿ ಸಮಯದಲ್ಲಿ ಕಟಾವು ಮಾಡಿ ಸಂಗ್ರಹಿಸಿಟ್ಟಿದ್ದ ಭತ್ತದ ಫಸಲನ್ನು ರಕ್ಷಿಸಿಕೊಳ್ಳಲು ಕಷ್ಟಪಡುವಂತಹ ಸ್ಥಿತಿ ನಿರ್ಮಾಣವಾಗಿತ್ತು. ಇಲ್ಲಿನ ಎಪಿಎಂಸಿ ಆವರಣದಲ್ಲಿ ಸಾಕಷ್ಟು ರೈತರು ಕಟಾವು ಮಾಡಿದ ಭತ್ತದ ರಾಶಿಯನ್ನು ಕೂಡಿಟ್ಟಿದ್ದರು ಮತ್ತು ಭತ್ತ ಒಣಗಿಸಲು ಆವರಣದಲ್ಲಿ ರಾಶಿ ಹಾಕಲಾಗಿತ್ತು. ವರುಣನ ಮುನ್ಸೂಚನೆ ಹಿನ್ನಲೆ ರೈತರು ತಾಡ್ಪಲ್ ಹೊದಿಸಿ, ಮುಚ್ಚಿಟ್ಟರು. ಆದರೂ, ಮಳೆಯ ಆರ್ಭಟಕ್ಕೆ ಕೆಲ ರೈತರ ರಾಶಿಗಳು ತೊಯ್ದಿವೆ. ಮತ್ತು ಇನ್ನೂ ಕೆಲವರು ಮಳೆಯಿಂದ ರಾಶಿ ತೊಯ್ಯದಂತೆ ರಕ್ಷಿಸಿಕೊಳ್ಳಲು ಇಡೀ ರಾತ್ರಿ ನಿದ್ದೆಗೆಟ್ಟಿರುವುದು ಕಂಡು ಬಂತು.
ಮಳೆ ಗಾಳಿಗೆ ಭತ್ತದ ಗದ್ದೆಗಳು ನೆಲಕ್ಕುರುಳಿ, ರೈತರನ್ನು ಸಂಕಷ್ಟಕ್ಕೆ ದೂಡುವಂತೆ ಮಾಡಿದೆ. ಕಂಪ್ಲಿ-ಕೋಟೆ ಮಾಗಣಿ, ರಾಮಸಾಗರ, ನಂ.ಮುದ್ದಾಪುರ, ಬುಕ್ಕಸಾಗರ ಭಾಗದಲ್ಲಿರುವ ಬಾಳೆ ಗಿಡಗಳು ಮಳೆ ಗಾಳಿಯ ಹೊಡೆತಕ್ಕೆ ನೆಲಕಚ್ಚುವಂತಾಗಿದೆ.
ಮುಂಗಾರು ಮಳೆ ಆರಂಭದ ಸಂತಸ ಒಂದು ಕಡೆಯಾದರೆ, ಮತ್ತೊಂದು ಕಡೆ ಐದಾರು ತಿಂಗಳು ಹಗಲು ರಾತ್ರಿ ಎನ್ನದೇ ಬೆಳೆದ ಭತ್ತದ ಫಸಲು ಕಟಾವು ಮಾಡುತ್ತಿದ್ದು, ಈ ಸಮಯದಲ್ಲಿ ಮಳೆ ಬಂದರೆ, ಕೈಯಿಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತೆ ರೈತರು ಬದುಕು ಮತ್ತಷ್ಟು ದ್ವಿಗುಡವಾಗಲಿದೆ. ಈಗಾಗಲೇ ಅರ್ಧ ಭಾಗದಷ್ಟು ಭತ್ತ ಕಟಾವು ಮಾಡಿದ್ದು, ಇನ್ನಷ್ಟು ಕಟಾವು ಮುಗಿದರೆ, ರೈತರು ಬದುಕು ಉತ್ತಮವಾಗಲಿದೆ. ಈಗ ಮಳೆಗಳು ಬಂದರೆ, ರೈತರು ಬೆಳೆ ನಷ್ಟಕ್ಕೆ ಸಿಲುಕಬೇಕಾಗುತ್ತದೆ. ಆದ್ದರಿಂದ ಭತ್ತ ಕಟಾವು ಮುಗಿದು, ರಾಶಿ ಕೊಟ್ಟ ಮೇಲೆ ಮಳೆ ಬರಲೆಂದು ರೈತರು ಜಪ ಮಾಡುವಂತಾಗಿದೆ.
ರಣ ಬಿಸಿಲಿನ ಹೊಡೆತಕ್ಕೆ ಜನರು ತತ್ತರಿಸಿದ್ದು, ಇದರ ನಡುವೆ ವರುಣ ಸ್ವಲ್ಪ ಮಟ್ಟಿಗೆ ಸಂಪೆರೆದರೂ, ಈಗ ಮಳೆ ಯಾಕೆ ಬರುತ್ತದೆ ಎಂಬಂತಾಗಿದೆ.
ವರದಿ : ಜಿಲಾನಸಾಬ್ ಬಡಿಗೇರ್.
