
ಬಳ್ಳಾರಿ / ಕಂಪ್ಲಿ : ಕಂಪ್ಲಿ ತಾಲ್ಲೂಕಿನ ಎಮ್ಮಿಗನೂರು ಗ್ರಾಮದಲ್ಲಿ ರಾಜ್ಯ ಹೆದ್ದಾರಿ 132ರಲ್ಲಿ ರಸ್ತೆ ವಿಸ್ತರಣೆಗಾಗಿ ರಸ್ತೆ ಅಕ್ಕಪಕ್ಕದ ಕಟ್ಟಡಗಳನ್ನು ಜೆಸಿಬಿ ಯಂತ್ರಗಳ ಮೂಲಕ ತೆರವುಗೊಳಿಸುವ ಕಾರ್ಯ ಆರಂಭವಾಗಿದ್ದು, ರಸ್ತೆ ಅಕ್ಕಪಕ್ಕದ ದೊಡ್ಡ ದೊಡ್ಡ ಕಟ್ಟಡಗಳು ಧರೆಗುರುಳುತ್ತಿವೆ.
ಅಕ್ರಮ ಕಟ್ಟಡಗಳಿಂದಾಗಿ ಎಮ್ಮಿಗನೂರು ಗ್ರಾಮದಲ್ಲಿ ವಾಹನ ಮತ್ತು ಸಾರ್ವಜನಿಕರ ಸಂಚಾರಕ್ಕೆ ತೀರಾ ಅಡಚಣೆಯಾಗಿರುವ ಹಿನ್ನೆಲೆಯಲ್ಲಿ ರಸ್ತೆ ಅಕ್ಕಪಕ್ಕದ ಅಕ್ರಮ ಕಟ್ಟಡಗಳ ತೆರವಿಗೆ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಕಳೆದ 5-6 ದಿನಗಳಿಂದ ರಸ್ತೆ ಅತೀಕ್ರಮಣ ಕಟ್ಟಡಗಳ ತೆರವು ಕಾರ್ಯಾಚರಣೆ ಭರದಿಂದ ಸಾಗಿದ್ದು, ಸ್ಥಳೀಯರ ವಿರೋಧದ ನಡುವೆಯೇ ಗ್ರಾಮಾಡಳಿತ ಪೊಲೀಸ್ ಸರ್ಪಗಾವಲಿನಲ್ಲಿ ತೆರವು ಕಾರ್ಯವನ್ನು ಕೈಗೆತ್ತಿಕೊಂಡಿದ್ದಾರೆ. ಗ್ರಾಮದ ಕಂಪ್ಲಿ ರಸ್ತೆಯ ಹಳ್ಳದಿಂದ ನಡುವಲ ಮಸೀದಿ, ಜಡೇಸಿದ್ದೇಶ್ವರ ಗದ್ಗಿಯಿಂದ ಕುರುಗೋಡು ರಸ್ತೆಯು ಅತ್ಯಂತ ಕಿರಿದಾಗಿದ್ದು, ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗಿತ್ತಲ್ಲದೆ ಕಿರಿದಾದ ರಸ್ತೆಯಿಂದಾಗಿ ಅನೇಕ ಅಪಘಾತಗಳು ಸಂಭವಿಸಿದ್ದವು. ಜೊತೆಗೆ ವಾಹನ ಸವಾರರು ಆಗಾಗ ಪರಸ್ಪರ ರಸ್ತೆಯ ಸೈಡ್ಗಾಗಿ ಜಗಳಗಳನ್ನು ಮಾಡುತ್ತಿದ್ದರು.
ಇದನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ ಗ್ರಾಮ ಪಂಚಾಯತಿಯವರು ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ಅತೀಕ್ರಮಣ ಕಟ್ಟಡಗಳ ತೆರವುಗೊಳಿಸಲು ತೀರ್ಮಾನಿಸಲಾಗಿತ್ತು. ಅಂತೆಯೇ ಸುಗಮ ಸಂಚಾರಕ್ಕಾಗಿ ರಸ್ತೆ ವಿಸ್ತರಣೆ ಅನಿವಾರ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಕಾನೂನು ಪ್ರಕಾರವೇ ಅಕ್ರಮ ಕಟ್ಟಡಗಳ ತೆರವುಗೊಳಿಸಲಾಗುತ್ತಿದೆ ಎಂದು ಗ್ರಾಮಾಡಳಿತ ಸ್ಪಷ್ಟಪಡಿಸಿದೆ.
ವರದಿ ಜಿಲಾನಸಾಬ್ ಬಡಿಗೇರ್.
