ಕಣ್ಣು ಮುಚ್ಚಿ ಕುಳಿತಿರುವ ಗ್ರಾಮ ಪಂಚಾಯತಿ ಅಧಿಕಾರಿಗಳು – ಮಾಧವ್ ರೆಡ್ಡಿ ಉಲ್ಲಿ
ಗುರುಮಠಕಲ್/ ಚಂಡರೀಕಿ: ಗ್ರಾಮದ ನೀರಿನ ಟ್ಯಾಂಕ್ ಮೂಲಕ ಮನೆ ಮನೆಗೆ ನೀರು ಪೂರೈಕೆ ಆಗುತ್ತಿದೆ ಆದರೆ ನೀರು ಕುಡಿಯಲು ಯೋಗ್ಯವಾಗಿದೆಯೇ ಎಂದು ಇಲ್ಲಿನ ಗ್ರಾಮಸ್ಥರನ್ನು ಕೇಳಿದಾಗ ಸಿಗುವ ಉತ್ತರ ಮಾತ್ರ ಬೇರೇನೆ ಹೇಳುತ್ತದೆ.
ಯಾದಗಿರಿ ಜಿಲ್ಲೆ ತೀವ್ರ ಕುಡಿಯುವ ನೀರಿನ ಸಂಕಷ್ಟವನ್ನು ಎದುರಿಸುತ್ತಿದೆ. ಜಿಲ್ಲೆಯ 56 ಗ್ರಾಮಗಳನ್ನು ಸಮಸ್ಯಾತ್ಮಕ ಗ್ರಾಮಗಳೆಂದು ಗುರುತಿಸಲಾಗಿದೆ. ಅನೇಕ ಗ್ರಾಮಗಳಲ್ಲಿನ ನೀರಿನ ಮೂಲಗಳು ಖಾಲಿಯಾಗಿವೆ, ಅಂತರ್ಜಲ ಕುಸಿತದಿಂದಾಗಿ, ಅನೇಕ ಕೊಳವೆಬಾವಿಗಳು ನಿಧಾನವಾಗಿ ಒಣಗುತ್ತಿವೆ. ಮಾಹಿತಿಯ ಪ್ರಕಾರ, ಸಮಸ್ಯಾತ್ಮಕವೆಂದು ಗುರುತಿಸಲಾದ 56 ಗ್ರಾಮಗಳಲ್ಲಿ 20 ಗ್ರಾಮಗಳು ಗುರುಮಠಕಲ್ ವಿಧಾನಸಭಾ ಕ್ಷೇತ್ರದಲ್ಲಿವೆ.
ಚಂಡರೀಕಿ ಗ್ರಾಮ ನೀರಿನ ಸಮಸ್ಯೆಗಿಂತ ಹೆಚ್ಚಾಗಿ ಗ್ರಾಮ ಪಂಚಾಯತಿ ಅಧಿಕಾರಿಗಳ ಬೇಜವಾಬ್ದಾರಿ ತನದಿಂದ ಸ್ವಚ್ಚತೆ ಕಾಣದೆ ಇಲ್ಲಿನ ಗ್ರಾಮಸ್ಥರಿಗೆ ಉಚಿತವಾಗಿ ರೋಗಗಳಿಗೆ ಆಹ್ವಾನ ಕೊಡುವಂತಿದೆ, ನೀರಿನ ಟ್ಯಾಂಕ್ ಕೆಳಗೆ ಮಲ ಮೂತ್ರ ವಿಸರ್ಜನೆ, ನೀರಿನ ಸರಬರಾಜು ಮಾಡುವ ಪೈಪ್ ವಾಲ್ ಸುತ್ತ ಮುತ್ತ ಕಸ, ಪ್ಲಾಸ್ಟಿಕ್ ಮದ್ಯ ಬಾಟಲಿಯಿಂದ ಕೂಡಿರುವದು ನೋಡಿದರೆ ಗ್ರಾಮ ಪಂಚಾಯತಿ ಅಧಿಕಾರಿಗಳು ಕೆಲಸ ಮಾಡುತ್ತಿದ್ದರೋ ಇಲ್ಲವೋ ತಿಳಿಯದಾಗಿದೆ.
ಈ ಬಗ್ಗೆ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ಶ್ರೀಮತಿ ಗೀತಾ ಅವರನ್ನು ಸಾಕಷ್ಟು ಬಾರಿ ತಿಳಿಸಿದರೂ ಪ್ರಯೋಜನವಾಗಿಲ್ಲ, ಇವರು ಸ್ವಚ್ಛತೆಗಾಗಿ ಬ್ಲೀಚಿಂಗ್ ಪೌಡರ್ ಸಿಂಪಡಣೆ ಮಾಡುವುದಿಲ್ಲ ಎಂದು ಸ್ಥಳೀಯರಾದ ಮಾಧವರೆಡ್ಡಿ ಉಲ್ಲಿ ಸಮಾಜ ಸೇವಕರು ಪತ್ರಿಕೆಗೆ ತಿಳಿಸಿದ್ದಾರೆ.
ಜನರ ಆರೋಗ್ಯದ ಕುರಿತು ಕಾಳಜಿ ವಹಿಸದ ಗ್ರಾಮ ಪಂಚಾಯತಿ ಸದಸ್ಯರು ಮತ್ತು ಅಧಿಕಾರಿಗಳು ಬೇಜವಾಬ್ದಾರಿತನ ತೋರದೆ ನೀರಿನ ಟ್ಯಾಂಕ್ ಹಾಗೂ ಸುತ್ತ ಮುತ್ತಲಿನ ಆವರಣ ಸ್ವಚ್ಛತೆಗೊಳಿಸಿ ಕುಡಿಯಲು ಯೋಗ್ಯ ನೀರನ್ನು ಸಾರ್ವಜನಿಕರಿಗೆ ನೀಡಬೇಕು ಮತ್ತು ರೋಗಗಳು ಬಾರದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಲು ಗ್ರಾಮಸ್ಥರಾದ ಅಂಜಪ್ಪ ಗದ್ವಾಲ, ಭೀಮಪ್ಪ ವಡ್ಲಾ ಆಗ್ರಹ ವ್ಯಕ್ತ ಪಡಿಸಿದ್ದಾರೆ.
ವರದಿ: ಜಗದೀಶ್ ಕುಮಾರ್ ಭೂಮಾ
