
ಬೀದರ್ / ಬಸವಕಲ್ಯಾಣ : ಮುಡಬಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಬಗದುರಿ ಗ್ರಾಮದಲ್ಲಿ ರೈತರು ಬೆಳೆದ ಬೆಳೆಗಳನ್ನು ಮಂಗಗಳು ಸರ್ವನಾಶ ಮಾಡುತ್ತಿವೆ, ಸದ್ಯ ಗ್ರಾಮದಲ್ಲಿ ರೈತರು ತಮ್ಮ ತಮ್ಮ ಜಮೀನುಗಳಲ್ಲಿ ತಮ್ಮ ಉಪ ಜೀವನಕ್ಕಾಗಿ ಕೆಲವರು ಗೋಧಿ, ಖಪಲಿ, ಜೋಳ, ಶೇಂಗಾ, ಕಲ್ಲಂಗಡಿ ಸೇರಿದಂತೆ ಹತ್ತು ಹಲವು ತರಕಾರಿ ಬೆಳೆಗಳನ್ನು ಬೆಳೆದಿರುತ್ತಾರೆ. ಆದರೆ ರೈತರು ಬೆಳೆದ ಬೆಳೆ ಅವರುಗಳ ಕೈಗೆ ಸಿಗದಂತಾಗಿದೆ, ಏಕೆಂದರೆ ಸುಮಾರು 500 ರಿಂದ 1000 ಸಾವಿರ ಮಂಗಗಳು ತಲಾ 40 ರಿಂದ 50ರ ಗುಂಪುಗಳನ್ನಾಗಿ ಮಾಡಿಕೊಂಡು ರೈತರ ಜಮೀನುಗಳಿಗೆ ನುಗ್ಗಿ ಬೆಳೆ ಸರ್ವನಾಶ ಮಾಡುತ್ತಿರುವುದನ್ನು ಕಂಡು ರೈತರು ಬೇಸತ್ತು ಬಸವಕಲ್ಯಾಣ ನಗರದ ಉಪ ವಲಯ ಅರಣ್ಯಾಧಿಕಾರಿಗಳ ಕಛೇರಿಗೆ ಭೇಟಿ ಮಾಡಿ ಪತ್ರದ ಮುಖಾಂತರ ತಮ್ಮ ಅಳಲು ತೋಡಿಕೊಂಡಿದ್ದರು. ತದ ನಂತರ ಪುನಃ ಎರಡು ತಿಂಗಳಾದ ಮೇಲೆ ಮತ್ತೆ ಸುಮಾರು 40-50 ಜನ ರೈತರು ಬಸವಕಲ್ಯಾಣ ನಗರದ ಅರಣ್ಯಾಧಿಕಾರಿಗಳ ಕಛೇರಿಗೆ ಭೇಟಿ ಕೊಟ್ಟು ನಮ್ಮ ಸಮಸ್ಯೆ ಕುರಿತು ನೀಡಿದ ಮನವಿ ಏನಾಯಿತೆಂದು ಕೇಳಿದರೆ, ಅಲ್ಲಿನ ಅರಣ್ಯಾಧಿಕಾರಿಗಳು ಹೇಳುವುದೇನೆಂದರೆ, ತಮ್ಮ ಸಂಬಂಧಪಟ್ಟ ಗ್ರಾಮ ಪಂಚಾಯತಿ ಕಛೇರಿಗೆ ಸೂಚಿಸಿದ್ದೇವೆ ಪಂಚಾಯತ ಅಭಿವೃದ್ಧಿ ಅಧಿಕಾರಿಗಳಿಂದ ನಮಗೆ ಪತ್ರ ಬರಬೇಕು ಪತ್ರದಲ್ಲಿ ಮಂಗಗಳನ್ನು ಹಿಡಿಯುವವರನ್ನು ಕರೆಯಿಸಿ ನಾವು ನಮ್ಮ ಪಂಚಾಯತಿ ಕಡೆಯಿಂದ ಹಣ ಕೊಡಿಸುತ್ತೇವೆಂದು ಬರೆಸಿಕೊಂಡು ಬನ್ನಿ ‘ ನಾವು ಅಷ್ಟೊಂದು ಮಂಗಗಳನ್ನು ಹಿಡಿಯಲು ಸಾಧ್ಯವಿಲ್ಲ, ನಾವು ನಿಮಗೆ ಮಂಗಗಳನ್ನು ಹಿಡಿಯುವವರ ದೂರವಾಣಿ ಸಂಖ್ಯೆ ಕೊಡುತ್ತೇವೆ ನೀವೇ ಅವರೊಂದಿಗೆ ಮಾತನಾಡಿ ಕರೆಯಿಸಿಕೊಳ್ಳಬೇಕು, ಅದಲ್ಲದೇ ಅವರು ಬಂದ ಮೇಲೆ ಅವರ ಖರ್ಚು ವೆಚ್ಚ ನೀವೇ ಭರಿಸಬೇಕುʼ ಎಂದು ಅರಣ್ಯಾಧಿಕಾರಿಗಳು ರೈತರಿಗೆ ಉಚಿತ ಸಲಹೆಗಳನ್ನು ಹೇಳಿದಾಗ, ರೈತರು ಪುನಃ ಗ್ರಾಮ ಪಂಚಾಯತಿ ಕಛೇರಿಗೆ ಹೋಗಿ ಸಂಬಂಧಪಟ್ಟ ಅಧಿಕಾರಿಗಳಿಗೆ ಭೇಟಿಯಾಗಿ ಅಲ್ಲೂ ಸಹ ಪತ್ರ ಕೊಟ್ಟರು ಅವರುಗಳು ಸಹ ನಮ್ಮ ಕಡೆಯಿಂದ ಯಾವುದೇ ಅನುದಾನ ಇರುವುದಿಲ್ಲ, ಇದು ನಮಗೆ ಸಂಬಂಧ ಪಟ್ಟ ವಿಷಯ ಅಲ್ಲ ಎಂದು ಅಲ್ಲಿನ ಗ್ರಾಮ ಪಂಚಾಯತಿ ಅಧಿಕಾರಿಗಳು ಹೇಳಿದರು, ನಂತರ ಬಸವಕಲ್ಯಾಣ ತಾಲೂಕು ಕಾರ್ಯನಿವಾಹಕ ಅಧಿಕಾರಿಗಳು ಸಹ, ಇದು ನಮಗೆ ಸಂಬಂಧಪಟ್ಟಿದ್ದಲ್ಲ ಎಂದು ಹಾರಿಕೆಯ ಉತ್ತರ ಕೊಟ್ಟಿರುತ್ತಾರೆ.
ಇಷ್ಟಾದ ನಂತರ ಗ್ರಾಮದ ರೈತರುಗಳು ಬೇಸತ್ತು ಏನೂ ದಿಕ್ಕು ತೋಚದೆ ತಾಲೂಕು ದಂಡಾಧಿಕಾರಿಗಳ ಬಳಿ ಹೋಗೋಣ ಅಲ್ಲಿ ನಮ್ಮ ರೈತರ ಕಷ್ಟಕ್ಕೆ ಪರಿಹಾರ ದೊರಕುತ್ತದೆಂದು ತಾಲೂಕಿನ ದಂಡಾಧಿಕಾರಿಗಳಿಗೆ ನಂಬಿ ಹೋದರು ಆದರೇ ಅಲ್ಲಿಯೂ ಸಹ ರೈತರಿಗೆ ಮೋಸವಾಗುತ್ತದೆ. ಹಿರಿಯರು ಹೇಳುವ ಗಾದೆ ” ನೆಚ್ಚಿದ ಎಮ್ಮೆ ಕೋಣ ಈಯಿತು ” ಎನ್ನುವ ಹಾಗಾಯಿತು ರೈತರ ಸಮಸ್ಯೆ, ಅಲ್ಲಿನ ದಂಡಾಧಿಕಾರಿಗಳು ಸಹ ಇದು ನಮಗೆ ಸಂಬಂಧಪಟ್ಟದಲ್ಲ ನೀವು ಬೀದರಿಗೆ ಹೋಗಿ ಅರಣ್ಯ ಸಚಿವರಿಗೆ ಭೇಟಿ ಮಾಡಿ ಎನ್ನುವುದರ ಮೂಲಕ ಮೆತ್ತಗೆ ಮಾತನಾಡಿ ರೈತರ ಕಣ್ಣೀರು ಒರೆಸಿದಂತೆ ಮಾಡಿ ಸಾಗ ಹಾಕಿದರು.
ಹೀಗೆ ಗ್ರಾಮದ ರೈತರುಗಳು ಸಂಬಂಧಪಟ್ಟ ಅಧಿಕಾರಿಗಳ ಬೇಜವಾಬ್ದಾರಿತನದಿಂದ ಬೇಸತ್ತು ದಾರಿ ತೋಚದೆ ಪರದಾಡುವಂತಾಗಿದೆ ಎಂದು ಸ್ಥಳೀಯ ರೈತರುಗಳಾದ ಶ್ರೀ ಸೂರ್ಯಕಾಂತ ಬಿರಾದಾರ, ಶ್ರೀ ಧನಶೆಟ್ಟಿ ರಾಜೋಳೆ, ಶ್ರೀ ಶಿವಾನಂದ ಬಿರಾದಾರ, ಶ್ರೀ ಶಂಕರ ರಾಜೋಳೆ, ಶ್ರೀ ಜಗದೇವ ಪಾಟೀಲ ಶ್ರೀ, ಸುದೇವ ಮಹಾಗಾಂವ, ಶ್ರೀ ಶಾಂತಕುಮಾರ ಸಿಂಗ್ರೆ, ಶ್ರೀ ಮಹಾರುದ್ರ ಬಿರಾದಾರ, ಶ್ರೀ ಪರಮೇಶ್ವರ ಬಿರಾದಾರ, ಶ್ರೀ ಚಂದ್ರಕಾಂತ ಸ್ವಾಮಿ, ಶ್ರೀ ರವಿ ಮೂಲಗೆ, ಶ್ರೀ ಸಂಜುಕುಮಾರ ಎಸ್. ಬಿರಾದಾರ, ಶ್ರೀ ಭೀಮ ಬಿರಾದಾರ, ಶ್ರೀ ಪ್ರಶಾಂತ ಬಿರಾದಾರ, ಚನ್ನವೀರ ಮಹಾಗಾಂವ, ಶರಣಬಸಪ್ಪ ಬಿರಾದಾರ, ಗ್ರಾಮ ಪಂಚಾಯತ ಸದಸ್ಯರಾದ ಶ್ರೀ ವೆಂಕಟರಾವ ಬಿರಾದಾರ ಹಾಗೂ ಭೀಮಶಾ ಮಂದಿರಕ ಸೇರಿದಂತೆ ಮತ್ತಿತರರು ಪತ್ರಿಕಾ ಪ್ರಕಟಣೆಯಲ್ಲಿ ತಮ್ಮ ಸಮಸ್ಯೆಯನ್ನು ಹಂಚಿಕೊಂಡಿದ್ದಾರೆ.
ವರದಿ : ಶ್ರೀನಿವಾಸ ಬಿರಾದಾರ
