ಪ್ರಿಯ ಜನಪ್ರತಿನಿಧಿಗಳೇ/ ಸರ್ಕಾರಿ ನೌಕರರೇ…
ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಹಿರೇಮೂಳಕೂರಿನ ಮಲಪ್ರಭಾ ನದಿ ದಡದಲ್ಲಿ ಎಲ್ಲಾ ಕಡೆ ಕಸ ಹಾಗೂ ಪ್ಲಾಸ್ಟಿಕ್ ತುಂಬಿಕೊಂಡಿದ್ದು ಜಿಲ್ಲೆಯ ಬಹುತೇಕ ಪಾಲು ಕುಡಿಯುವ ನೀರಿನ ಆಸರೆಯಾದ ನದಿಯ ಬಗ್ಗೆ ಸ್ಥಳೀಯ ಆಡಳಿತವಾಗಲಿ , ಶಾಸಕರಾಗಲಿ ಗಮನ ಹರಿಸದಿರುವುದು ವಿಪರ್ಯಾಸ.
ಸ್ಥಳೀಯ ಸಂಘ ಸಂಸ್ಥೆಗಳು, ಹೋರಾಟಗಾರರು, ಸಾಮಾಜಿಕ ಕಾರ್ಯಕರ್ತರು ಈ ಬಗ್ಗೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತಂದಿದ್ದರೂ ಸಹ ಕಟ್ಟುವುದು -ಕೆಡುವುದನ್ನೇ ಅಭಿವೃದ್ಧಿ ಎಂದುಕೊಂಡ ಅವರುಗಳಿಗೆ ನದಿಯ ಕಡೆ ಗಮನ ಹರಿಸಲು ಸಮಯವೇ ಸಿಗುತ್ತಿಲ್ಲ ಅನಿಸುತ್ತದೆ.
ಇನ್ನಾದರೂ ಈ ಕಡೆ ಒಮ್ಮೆ ಬಿಡುವು ಮಾಡಿಕೊಂಡು ಬಂದು ಯಾವುದಾದರೂ ಅನುದಾನದಲ್ಲಾಗಲೀ ಅಥವಾ ಸ್ಥಳೀಯ ಸಂಸ್ಥೆಗಳ ನೆರವಿನೊಂದಿಗೆ ಆದರೂ ಆಗಲಿ ಸ್ವಚ್ಛಗೊಳಿಸಿ ಇಂದಲ್ಲ ನಾಳೆ ನೀವೇನೋ ಮಾಡಿ ಬಿಡುತ್ತೀರಾ ಎಂದು ಕಾಯುವ ಸಾರ್ವಜನಿಕರ ನಂಬಿಕೆ ಉಳಿಸಿ.
ಇದುವರೆಗೆ ಜನ ಜಾನುವಾರುಗಳ ಜೀವಜಲವಾದ ಮಲಪ್ರಭಾ ನದಿಯನ್ನು ಸ್ವಚ್ಛಗೊಳಿಸಿ ಎಂದು ಕೇಳಲು ಬಂದವರನ್ನು ದಾರಿ ತಪ್ಪಿಸಲು ಯತ್ನಿಸಿದ್ದು ಸಾಕು ಇನ್ನಾದರೂ ಸ್ವಲ್ಪವೇ ಸ್ವಲ್ಪ ಇಚ್ಚಾ ಶಕ್ತಿಯಿಂದ ದೊಡ್ಡ ಮನಸು ಮಾಡಿ ಈ ಜನೋಪಕಾರಿ ಕೆಲಸ ಮಾಡಲು ತಮ್ಮ ಶಕ್ತಿ, ಯುಕ್ತಿಯನ್ನು ಬಳಸಿ ಸರ್ಕಾರದ ಹಣದಲ್ಲಿ ಇದೊಂದು ಪುಣ್ಯದ ಕೆಲಸ ಮಾಡಿ ನಿಮ್ಮನ್ನು ನಂಬಿರುವ ಜನತೆಯ ನಂಬಿಕೆ ಉಳಿಸಿಕೊಳ್ಳಿ.
ಇದ್ಯಾವುದೂ ಆಗುವುದಿಲ್ಲ, ಈ ಕೆಲಸ ಮಾಡಲು ಸಮಯವೂ ಇಲ್ಲ ,ಈ ನದಿ ನಿಮಗೆ ಸಂಬಂಧ ಪಡುವುದಿಲ್ಲ ಎನ್ನುವುದಾದರೆ ಈ ಮೊದಲು ನೀವೇ ಗುಂಡಿ ತೋಡಿ ನೆಟ್ಟ ಯಾವುದಾದರೂ ಒಂದು ಅರ್ಧಕ್ಕೆ ನಿಂತ ಕಾಮಗಾರಿಯ ಬೋರ್ಡ್ ಒಂದನ್ನು ಕಿತ್ತುಕೊಂಡು ತಂದು ನದಿಯ ಈ ಭಾಗದಲ್ಲಿ ಎಲ್ಲಿಯಾದರೂ ಒಂದು ಕಡೆ ನೆಟ್ಟು ಈ ನದಿಯ ಸ್ವಚ್ಚತೆ ನಮ್ಮ ಜವಾಬ್ದಾರಿ ಅಲ್ಲ ಎಂದು ತಮ್ಮ ಮುದ್ದಾದ, ಮುಗ್ಧ ಮುಖ ಹೊಂದಿರುವ ಒಂದು ಫೋಟೋ ಜೊತೆಗೆ ತಮ್ಮ ಹೆಸರು ಹುದ್ದೆಯನ್ನು ಈ ಬೋರ್ಡ್ ನಲ್ಲಿ ಕೆತ್ತಿ ಬಿಡಿ ನಿಮ್ಮನ್ನು ಗೆಲ್ಲಿಸಿ ನಾಯಕನ ಪಟ್ಟ ಅಥವಾ ಸಂಬಳ ಕೊಟ್ಟು ಕೆಲಸಕ್ಕೆ ಇಟ್ಟ “ಆ” ಹಾಗೂ ಇದನ್ನು ಓದುತ್ತಿರುವ “ಈ” ಅಸಾಮಾನ್ಯನಿಗೆ ಈ ನದಿ ಸ್ವಚ್ಛಗೊಳಿಸುವುದು ದೊಡ್ಡ ಕೆಲಸವೇನಲ್ಲ.
ನೀವು ಇದನ್ನು ಮಾಡಿ ಮುಗಿಸುವಿರೆಂದು ನಂಬಿ
ಮುಂಗಡ ಧನ್ಯವಾದಗಳೊಂದಿಗೆ…
ಇಂತಿ /-
ನಿಮ್ಮ ವಿಶ್ವಾಸಿ
- ಕರುನಾಡ ಕಂದ
