ಬಳ್ಳಾರಿ / ಕಂಪ್ಲಿ : ಮೇ.20ರಂದು ಹೊಸಪೇಟೆ ನಗರದಲ್ಲಿ ನಡೆಯಲಿರುವ ಕಾಂಗ್ರೆಸ್ ಸರ್ಕಾರದ ಎರಡು ವರ್ಷದ ಸಾಧನಾ ಸಮಾವೇಶದಲ್ಲಿ ಕಂಪ್ಲಿ ಕ್ಷೇತ್ರದಿಂದ ಸುಮಾರು 25 ಸಾವಿರ ಜನಸಂಖ್ಯೆ ಸೇರಿಸುವ ನಿರೀಕ್ಷೆ ಇದೆ ಎಂದು ಬ್ಯಾಡಗಿ ಶಾಸಕ ಹಾಗೂ ಕಂಪ್ಲಿ ಕ್ಷೇತ್ರದ ಉಸ್ತವಾರಿ ಬಸವರಾಜ ಶಿವಣ್ಣನವರ್ ತಿಳಿಸಿದರು.
ಅವರು ಶನಿವಾರ ಪಟ್ಟಣದ ಶಾಸಕರ ಕಛೇರಿ ಸಭಾಂಗಣದಲ್ಲಿ ಸಾಧನಾ ಸಮಾವೇಶದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಐದು ಪಂಚ ಯೋಜನೆಗಳಿಗೆ ಸುಮಾರು 52 ಸಾವಿರ ಕೋಟಿ ಕೊಟ್ಟಿದ್ದೇವೆ. ಕಳೆದ ಎರಡು ವರ್ಷದಲ್ಲಿ ಸರ್ಕಾರ ಸಾಕಷ್ಟು ಕಾರ್ಯಕ್ರಮ ಮೂಲಕ ಜನಪರ ಯೋಜನೆಗಳನ್ನು ಜನರ ಮನೆ ಬಾಗಿಲಿಗೆ ಮುಟ್ಟಿಸುವಂತಹ ಕೆಲಸ ಮಾಡಿದೆ. ಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷರ ನಿರ್ದೇಶನದ ಮೇರೆಗೆ ಮೇ.20ರಂದು ಹೊಸಪೇಟೆಯಲ್ಲಿ ಸರ್ಕಾರದ ಸಮರ್ಪಣಾ ಸಾಧನಾ ಸಮಾವೇಶ ನಡೆಯಲಿದ್ದು, ಈ ಸಮಾವೇಶದಲ್ಲಿ ಭಾಗವಹಿಸಲು, ಕಂಪ್ಲಿ ಕ್ಷೇತ್ರದಿಂದ 25 ಸಾವಿರ ಜನಸಂಖ್ಯೆ ಕರೆತರುವುದಕ್ಕಾಗಿ 300 ಬಸ್, 750 ಕ್ರೂಜರ್ ವ್ಯವಸ್ಥೆ ಮಾಡಲಾಗಿದೆ. ಕ್ಷೇತ್ರದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಸಮಾವೇಶದ ಯಶಸ್ವಿಗೆ ಕಾರಣೀಬೂತರಾಗುವ ಜತೆಗೆ ಶಾಸಕರಿಗೆ ಶಕ್ತಿ ತುಂಬಬೇಕು ಎಂದರು.
ಈ ಸಂದರ್ಭದಲ್ಲಿ ಎಪಿಎಂಸಿ ಅಧ್ಯಕ್ಷ ಹಬೀಬ್ ರೆಹಮಾನ್, ಪುರಸಭೆ ಅಧ್ಯಕ್ಷ ಭಟ್ಟ ಪ್ರಸಾದ್, ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಉಸ್ಮಾನ್, ಸದಸ್ಯ ಸಿ.ಆರ್.ಹನುಮಂತ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೆ.ಶ್ರೀನಿವಾಸರಾವ್, ಚನ್ನಬಸವರಾಜ, ಪ್ರಧಾನ ಕಾರ್ಯದರ್ಶಿ ವಾಲ್ಮೀಕಿ ರಘು, ಮುಖಂಡರಾದ ಕೆ.ಷಣ್ಮುಖಪ್ಪ, ಎಂ.ಸುಧೀರ್, ಸೈಯದ್ ಉಸ್ಮಾನ್, ಗೋಪಾಲಕೃಷ್ಣ, ಜಾಫರ್, ಸುಧಾಕರ, ಶಶಿಕುಮಾರ, ವಿರೇಶ, ಖಾಜಾ, ರಿಯಾಜ್ ಸೇರಿದಂತೆ ಕಾರ್ಯಕರ್ತರು ಪಾಲ್ಗೊಂಡಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್
