ಬಳ್ಳಾರಿ / ಕಂಪ್ಲಿ : ರಾಜ್ಯ ಸರ್ಕಾರದ 2ನೇ ವರ್ಷದ ಸಾಧನೆ ಅಂಗವಾಗಿ ಮೇ 20ರಂದು ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ನಡೆಯಲಿರುವ ‘ಪ್ರಗತಿಯತ್ತ ಕರ್ನಾಟಕ – ಸಮರ್ಪಣೆ ಸಂಕಲ್ಪ’ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಬಳ್ಳಾರಿ ವಿಭಾಗದಿಂದ 225 ಬಸ್ಸುಗಳನ್ನು ಕಾರ್ಯಕ್ರಮಕ್ಕೆ ನಿಯೋಜಿಸಲಾಗಿದೆ. ಜಿಲ್ಲಾಡಳಿತದ ಆದೇಶದಂತೆ ಈ ಬಸ್ಗಳನ್ನು ತಾತ್ಕಾಲಿಕ ಒಪ್ಪಂದದ ಆಧಾರದಲ್ಲಿ ಉಪಯೋಗಿಸಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಮೇ 20ರಂದು ಬಳ್ಳಾರಿ, ಸಿರುಗುಪ್ಪ, ತೆಕ್ಕಲಕೋಟೆ, ಕುರುಗೋಡು, ಕುಡತಿನಿ, ಕಂಪ್ಲಿ ಹಾಗೂ ಸಂಡೂರು ಪ್ರದೇಶಗಳಿಂದ ಪ್ರತಿ ದಿನ ನಿರ್ವಹಿಸಲಾಗುವ ಕೆಲವೊಂದು ಬಸ್ ಸಂಚಾರದಲ್ಲಿ ವ್ಯತ್ಯಯ ಸಂಭವಿಸುವ ಸಾಧ್ಯತೆ ಇದೆ.
ರಾಜ್ಯದ ಮುಖ್ಯಮಂತ್ರಿ ಭಾಗವಹಿಸಲಿರುವ ಈ ಸಮಾರಂಭದಲ್ಲಿ ವಿವಿಧ ಹಕ್ಕುಪತ್ರಗಳು ಹಾಗೂ ಸವಲತ್ತುಗಳ ವಿತರಣೆ ನಡೆಯಲಿದೆ. ಜಿಲ್ಲೆಯ ಎಲ್ಲಾ ತಾಲ್ಲೂಕುಗಳಿಂದ ಫಲಾನುಭವಿಗಳನ್ನು ಈ ಕಾರ್ಯಕ್ರಮಕ್ಕೆ ಕರೆ ತರಲಾಗುತ್ತಿದೆ.
ಸಾರ್ವಜನಿಕರು ಈ ತಾತ್ಕಾಲಿಕ ಅಸೌಕರ್ಯಕ್ಕೆ ಸಹಕಾರ ನೀಡಬೇಕು ಎಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ : ಜಿಲಾನಸಾಬ್ ಬಡಿಗೇರ್
