ಬೆಂಗಳೂರು : ಕನ್ನಡ ಮ್ಯೂಸಿಕಲ್ ರಿಯಾಲಿಟಿ ಶೋ ಸರಿಗಮಪ ಸೀಸನ್-21 ಇನ್ನೇನು ಫಿನಾಲೆಯ ಹೊಸ್ತಿಲಲ್ಲಿದೆ, ಜೀ ಕನ್ನಡ ವಾಹಿನಿಯಲ್ಲಿ ಮೂಡಿಬರುತ್ತಿರುವ ಸರಿಗಮಪ ಈ ಸೀಸನ್ ಸ್ಪರ್ಧಿಗಳ ಮಧ್ಯೆ ಭಾರೀ ಪೈಪೋಟಿ ಶುರುವಾಗಿದೆ. ಇತ್ತೀಚೆಗೆ ನಡೆದ ಟಿಕೆಟ್ ಟು ಫಿನಾಲೆ ರೌಂಡ್ನಲ್ಲಿ 13 ಸ್ಪರ್ಧಿಗಳ ಪೈಕಿ ಫಿನಾಲೆ ತಲುಪುವ ಸ್ಪರ್ಧಿ ಯಾರು ಅನ್ನೋ ಕುತೂಹಲಕ್ಕೆ ಉತ್ತರ ಕೊನೆಗೂ ಸಿಕ್ಕಿದೆ. ತಮ್ಮ ಹಾಡಿನ ಮೂಲಕವೇ ಈ ಸೀಸನ್ನ ಸ್ಪರ್ಧಿಯೊಬ್ಬರು ಇಡೀ ವೇದಿಕೆಯನ್ನು ಶೇಕ್ ಮಾಡಿದ್ದಾರೆ. ತೀರ್ಪುಗಾರರು, ಜ್ಯೂರಿಗಳು ಕೂಡಾ ಈ ಸ್ಪರ್ಧಿಗಳ ಗಾಯನಕ್ಕೆ ಮನಸೋತು “ಟಿಕೆಟ್ ಟು ಫಿನಾಲೆ”ಗೆ ಇಬ್ಬರನ್ನು ಆಯ್ಕೆ ಮಾಡಿದ್ದಾರೆ.
ಇತ್ತೀಚೆಗೆ ನಡೆದ ಟಿಕೆಟ್ ಟು ಫಿನಾಲೆ ರೌಂಡ್ನಲ್ಲಿ 13 ಸ್ಪರ್ಧಿಗಳಾದ ಬಾಳು ಬೆಳಗುಂದಿ, ಆರಾಧ್ಯ ರಾವ್, ಅಮೋಘ ವರ್ಷ, ರಶ್ಮಿ ಡಿ, ಸುಧೀಕ್ಷಾ, ದೀಪಕ್, ಭೂಮಿಕಾ, ದ್ಯಾಮೇಶ, ಕಾರ್ತಿಕ್, ಲಹರಿ, ಮನೋಜ್, ಆಗಮ ಶಾಸ್ತ್ರೀ, ಶಿವಾನಿ ನಡುವೆ ತೀವ್ರ ಹಣಾಹಣಿ ನಡೆದಿದೆ. ಈ ರೇಸ್ನಲ್ಲಿ ಗಾಯಕಿ ಆರಾಧ್ಯ ರಾವ್ ನೇರವಾಗಿ ಫಿನಾಲೆಗೆ ಟಿಕೆಟ್ ಪಡೆದು ಲಕ್ಕಿ ಸ್ಪರ್ಧಿ ಎನಿಸಿಕೊಂಡಿದ್ದಾರೆ. ಫಿನಾಲೆಗೆ ನೇರವಾಗಿ ಬೀದರ್ನ ಶಿವಾನಿ ಹಾಗೂ ಉಡುಪಿಯ ಆರಾಧ್ಯ ರಾವ್ ಆಯ್ಕೆಯಾಗಿದ್ದಾರೆ.
ಫಿನಾಲೆ ಹಂತ ತಲುಪಿರುವ ‘ಸರಿಗಮಪ’ ರಿಯಾಲಿಟಿ ಶೋನಲ್ಲಿ ಫಿನಾಲೆಗೆ ನೇರವಾಗಿ ಆಯ್ಕೆಯಾಗಲಿರುವ ಸ್ಪರ್ಧಿ ಯಾರು ಎನ್ನುವ ಕುತೂಹಲ ಎಲ್ಲರಲ್ಲೂ ಇತ್ತು. ಆರಾಧ್ಯ ರಾವ್ ಕೊನೆಗೂ ಫಿನಾಲೆ ಟಿಕೆಟ್ ಪಡೆದು ಸಾಧನೆಯ ಮೆಟ್ಟಿಲೇರಿದ್ದಾರೆ. ಆರಾಧ್ಯಗೂ ಅಪಾರ ಅಭಿಮಾನಿಗಳಿದ್ದು, ಈ ಬಾರಿ ಅವರೇ ಗೆಲ್ಲಬೇಕು ಎನ್ನುವ ಇಂಗಿತ ವ್ಯಕ್ತಪಡಿಸುತ್ತಿದ್ದಾರೆ. ಈ ರೌಂಡ್ನಲ್ಲಿ ಆರಾಧ್ಯ ಗಾಯನಕ್ಕೆ ಎಲ್ಲರೂ ಫಿದಾ ಆಗದ್ದಾರೆ.
ನಾದಮಯ ಹಾಡಿನ ಮೂಲಕ ಆರಾಧ್ಯ ರಾವ್ ಜ್ಯೂರಿ ಹಾಗೂ ಜಡ್ಜ್ಗಳನ್ನೆಲ್ಲರನ್ನೂ ಬೆರಗುಗೊಳಿಸಿದ್ದಾರೆ. ಇವರ ಗಾಯನಕ್ಕೆ ಅಲ್ಲಿದ್ದವರೆಲ್ಲ ಎದ್ದು ನಿಂತು ಗೌರವ ಸಲ್ಲಿಸಿದ್ದಾರೆ. ಸೀಸನ್ 10 ಫಿನಾಲೆಯಲ್ಲಿ ಇಂತಹ ಮೂವ್ಮೆಂಟ್ ನಡೆದಿತ್ತು ಮಗಳೇ ಎಂದು ತೀರ್ಪುಗಾರರಾಗಿದ್ದ ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ಕೂಡ ಕೊಂಡಾಡಿದ್ದಾರೆ. ಆಗ ಆ ಹಾಡು ಕೇಳಿ ಎಲ್ಲರ ಕಣ್ಣಲ್ಲೂ ನೀರು ತುಂಬಿತ್ತು. ಇವತ್ತು ಆರಾಧ್ಯ ಹಾಡು ಕೇಳಿ ನನಗೆ ಅದೇ ಅನುಭವ ಮತ್ತೆ ಆಯ್ತು ಎಂದಿದ್ದಾರೆ. ಹಲವು ಸೀಸನ್ ಕಳೆದ ಮೇಲೆ ಮತ್ತೊಬ್ಬ ಸ್ಪರ್ಧಿ ಆರಾಧ್ಯ ಆಗಿ ಬಂದಿದ್ದು ಎಂದು ಶ್ಲಾಘಿಸಿದ್ದಾರೆ.
ಉಡುಪಿ ಮೂಲಕ ಆರಾಧ್ಯ ಶ್ರೀಕೃಷ್ಣನ ಹಾಡು ಹಾಡಿಯೇ ಆಯ್ಕೆಯಾದವಳು. ಫೈನಲ್ಗೆ ಏರಿಸದೆ ಉಡುಪಿಯ ಶ್ರೀಕೃಷ್ಣ ಬಿಡುವನೆ ಎಂದು ಅವರ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡಿದ್ದಾರೆ. ಆರಾಧ್ಯ ಅವರದ್ದು ಯಾವುದೇ ಓವರ್ ಆಕ್ಟಿಂಗ್ ಇಲ್ಲ, ಯಾವುದೇ ನಾಟಕೀಯ ಇಲ್ಲ, ಈ ಸೀಸನ್ನಲ್ಲಿ ರಿಯಲ್ ಟ್ಯಾಲೆಂಟ್ ಈ ಮಗು ಎಂದಿದ್ದಾರೆ. ಸದ್ಯದಲ್ಲೇ ನಡೆಯಲಿರುವ ಫಿನಾಲೆಯಲ್ಲಿ ಈ ಬಾರಿ ಕಪ್ ಗೆಲ್ಲೋದು ಯಾರು ಅನ್ನೋದು ಗೊತ್ತಾಗಲಿದೆ.
ವರದಿ : ಜಿಲಾನಸಾಬ್ ಬಡಿಗೇರ್
