
ಕೊಪ್ಪಳ : ವಿದ್ಯಾರ್ಥಿಗಳಿಗೆ ಸಾಂಸ್ಕೃತಿಕ ಪ್ರಜ್ಞೆ ಇರಬೇಕು ಮತ್ತು ನಮ್ಮ ಕಲೆ, ಸಂಸ್ಕೃತಿ ಇತಿಹಾಸ ಮತ್ತು ಬಾಷೆಗಳ ಕುರಿತು ಆಸಕ್ತಿ ಬೆಳೆಸಿಕೊಂಡು ಇವುಗಳ ಕುರಿತು ಅಧ್ಯಯನ ಮಾಡಬೇಕು ಎಂದು ಕೊಪ್ಪಳ ವಿಶ್ವ ವಿದ್ಯಾಲಯದ ಕನ್ನಡ ಉಪನ್ಯಾಸಕ ಡಾ. ಪ್ರವೀಣ ಪೊಲೀಸ ಪಾಟೀಲ ಹೇಳಿದರು.
ನಗರದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಮಂಗಳವಾರ ದಂದು ಹಮ್ಮಿಕೊಂಡಿದ್ದ 2024-25 ಶೈಕ್ಷಣಿಕ ಸಾಲಿನ ಸಾಂಸ್ಕೃತಿಕ, ಭಾರತ ಸ್ಕೌಟ್ಸ್ ಮತ್ತು ಗೈಡ್ಸ್, ಎನ್.ಎಸ್. ಎಸ್, ಕ್ರೀಡೆ, ರೆಡ್ ಕ್ರಾಸ್, ಪ್ಲೇಸ್ ಮೆಂಟ್ ಸೆಲ್, ಪ್ರೇರಣಾ, ಪರಂಪರ ಕೂಟ, ಐಕ್ಯೂಎಸಿ ಚಟುವಟಿಕೆಗಳ ಸಮಾರೋಪ ಮತ್ತು ಪದವಿ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ ಇಂದು ಜ್ಞಾನಕ್ಕೆ ಬಹಳ ಬೆಲೆ ಇದೆ. ನಾವು ತಂದೆ ತಾಯಿಯವರು ಶ್ರಮವನ್ನು ಅರ್ಥ ಮಾಡಿಕೊಂಡು ಜೀವನದಲ್ಲಿ ಸಾಧನೆ ಮಾಡಬೇಕು. ಕನ್ನಡ ಸಾಹಿತ್ಯ, ಬಾಷೆ ಮತ್ತು ಸಂಸ್ಕೃತಿ ಬಹಳ ಶ್ರೀಮಂತವಾಗಿದೆ. ವಿದ್ಯಾರ್ಥಿಗಳು ಓದುವುದರಲ್ಲಿ ಮತ್ತು ಅಧ್ಯಯನ ಮಾಡುವುದರಲ್ಲಿ ಗುರುಗಳನ್ನು ಮೀರಿಸಬೇಕು. ಸಾಹಿತ್ಯವು ಬದಕನ್ನು ರೂಪಿಸುತ್ತದೆ. ಆದ್ದರಿಂದ ಎಲ್ಲರೂ ಕನ್ನಡ ಸಾಹಿತ್ಯವನ್ನು ಅಧ್ಯಯನ ಮಾಡಿ.
ಅಕ್ಷರ ಜ್ಞಾನ ಬಂದಾಗ ನಮ್ಮ ಮನಸ್ಸು ಶುದ್ಧವಾಗುತ್ತದೆ.ವಚನ ಸಾಹಿತ್ಯ, ದಾಸ ಸಾಹಿತ್ಯ, ತತ್ವಪದ ಸಾಹಿತ್ಯವು ನಮ್ಮ ಕಲ್ಯಾಣ ಕರ್ನಾಟಕದ ಕೊಡುಗೆ ಆಗಿದೆ. ನಮ್ಮ ಪರಂಪರೆ ತಿಳಿದುಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿರುವ ಪ್ರೊ. ಅಲ್ಲಮ ಪ್ರಭು ಬೆಟ್ಟದೂರು ಅವರು ಮಾತನಾಡುತ್ತಾ ಗುರು ಮತ್ತು ಶಿಷ್ಯರು ಇಬ್ಬರು ಬೇರೆ ಬೇರೆ ಅಲ್ಲ. ಇಬ್ಬರ ಮುಖದ ರೀತಿ ಮತ್ತು ಭಾವ ಒಂದೇ ಇರುತ್ತದೆ. ನೀವು ಕಲೆ, ಸಾಹಿತ್ಯ, ಸಂಗೀತ ಮತ್ತು ಕ್ರೀಡೆಯಲ್ಲಿ ಪಾಲ್ಗೊಳ್ಳಬೇಕು. ನೀವು ಹೆಚ್ಚಿನ ಶಿಕ್ಷಣ ಪಡೆದು ಉನ್ನತವಾದ ಸಾಧನೆ ಮಾಡಿ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿರುವ ಶಿಕ್ಷಣ ಪ್ರೇಮಿ ಬಿ. ಜಿ ಕರಿಗಾರ ಅವರು ಮಾತನಾಡುತ್ತ ಸಾಧನೆಗಳನ್ನು ಮಾಡಿ ಕಾಲೇಜಿನ ಗೌರವ ತರಬೇಕು.ವಿದ್ಯಾರ್ಥಿಗಳು ಸಹಾಯ ಮಾಡುವ ಗುಣಗಳನ್ನು ಬೆಳಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ. ಗಣಪತಿ ಲಮಾಣಿಯವರು ಮಾತನಾಡುತ್ತಾ ವಿದ್ಯಾರ್ಥಿಗಳು ಪಾಠದ ಜೊತೆ ಪಠ್ಯತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು. ಸರಕಾರಿ ಕಾಲೇಜಿಗಳಲ್ಲಿ ಬಹಳ ಸೌಲಭ್ಯಗಳು ಇವೆ. ಪದವಿ ಮುಗಿದ ನಂತರ ಕೌಶಲ್ಯಗಳನ್ನು ಕಲಿತು ಉದ್ಯೋಗಗಳನ್ನು ಪಡೆಯಿರಿ ಎಂದು ಅಭಿಪ್ರಾಯ ಪಟ್ಟರು.
ಕಾರ್ಯಕ್ರಮದಲ್ಲಿ ಪತ್ರಿಕೋದ್ಯಮ ವಿಭಾಗದ ವತಿಯಿಂದ ಮಹಿಳಾ ಟೈಮ್ಸ್ ಪತ್ರಿಕೆಯನ್ನು ಬಿಡುಗಡೆ ಮಾಡಲಾಯಿತು. ವಿಶ್ವವಿದ್ಯಾಲಯ ಮತ್ತು ಕಾಲೇಜಿನಲ್ಲಿ ಆಯೋಜಿಸಿರುವ ಕ್ರೀಡೆಗಳಲ್ಲಿ ವಿಜೇತರಾದವರಿಗೆ ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು. ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಗುಲಾಬಿ ಹೂ ನೀಡುವುದರ ಮೂಲಕ ಬೀಳ್ಕೊಡಲಾಯಿತು. ಅಂತಿಮ ವರ್ಷದ ವಿದ್ಯಾರ್ಥಿಗಳು ಅನಿಸಿಕೆಗಳು ಅಂಚಿಕೊಂಡವರು.
ಕಾರ್ಯಕ್ರಮ ದಲ್ಲಿ ಕಾಲೇಜಿನ ಉಪನ್ಯಾಸಕರು ಡಾ. ಹುಲಿಗೆಮ್ಮ, ಡಾ. ಪ್ರದೀಪ್ ಕುಮಾರ, ಡಾ. ಮಲ್ಲಿಕಾರ್ಜುನ, ಡಾ. ನರಸಿಂಹ, ಡಾ. ಅಶೋಕ ಕುಮಾರ, ಶುಭ, ಶಿವಪ್ರಸಾದ್ ಹಾದಿಮನಿ ಹಾಗೂ ಕಾಲೇಜಿನ ಭೋದಕ ಭೋದಕೇತರ ಸಿಬ್ಬಂದಿಗಳು ಮತ್ತು ಕಾಲೇಜಿನ ಎಲ್ಲ ಅತಿಥಿ ಉಪನ್ಯಾಸಕರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಶ್ರೀದೇವಿ ನಿರೂಪಿಸಿದರು. ಭವ್ಯ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಮಧುಮತಿ ಸ್ವಾಗತಿಸಿದರು, ಭವಾನಿ ವಂದಿಸಿದರು.
- ಕರುನಾಡ ಕಂದ
