ಅದೊಂದು ಮುರಿದು ಹೋದ ಸಂಬಂಧ ಪತಿ-ಪತ್ನಿಯರಲ್ಲಿ ಯಾವುದೇ ರೀತಿಯ ಹೊಂದಾಣಿಕೆ
ಇರಲಿಲ್ಲ.ಸದಾ ಮನೆಯಲ್ಲಿ ಜಗಳ… ಪುಣ್ಯಕ್ಕೆ ಅವರಿಬ್ಬರಿಗೂ ಮಕ್ಕಳಾಗಿರಲಿಲ್ಲ. ಹಲವಾರು ತಿಂಗಳುಗಳ ಮನಸ್ತಾಪ, ಮುನಿಸು, ಜಗಳ ಕಿರಿಕಿರಿಯಿಂದ ಬೇಸತ್ತು ಹೋದ ದಂಪತಿಗಳು ಅಂತಿಮವಾಗಿ ವಿಚ್ಛೇದನದ ತೀರ್ಮಾನಕ್ಕೆ ಬಂದರು. ಪರಸ್ಪರ ಒಪ್ಪಿಗೆಯ ಮೇರೆಗೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿ ವಿಚ್ಛೇದನವನ್ನು ಪಡೆದುಕೊಂಡರು ಕೂಡಾ ಪತ್ನಿಗೆ ಬಹು ದೊಡ್ಡ ಮೊತ್ತದ ಜೀವನಾಂಶವನ್ನು ನೀಡಿದ ಪತಿಯ ಬಳಿ ಅಂತಿಮವಾಗಿ ಉಳಿದದ್ದು ಕೇವಲ 70 ಡಾಲರ್.
ಈಗಾಗಲೇ ಜೀವನದಿಂದ ಬೇಸತ್ತಿದ್ದ ಆತ ಈ 70 ಡಾಲರ್ ನಲ್ಲಿ ಏನು ಮಾಡಲು ಸಾಧ್ಯ ನಾನು ಕೂಡಾ ಸತ್ತು ಹೋಗಿಬಿಡಬೇಕು ಎಂದು ಮನಸ್ಸಿನಲ್ಲಿಯೇ ನಿಶ್ಚಯಿಸಿದ. ಜೇಬಿನಲ್ಲಿ 70 ಡಾಲರ್ ಹಣವನ್ನು ಇಟ್ಟುಕೊಂಡು ಹಾಗೆಯೇ ರಸ್ತೆಗುಂಟ ನಡೆದು ಯಾವ ರೀತಿ ಸಾಯಬೇಕು ಎಂದು ಯೋಚಿಸುತ್ತಾ ಬರುತ್ತಿರುವಾಗ ಆತನಿಗೆ ಹೇಗೂ ಎಪ್ಪತ್ತು ಡಾಲರ್ ಹಣ ಇದೆ ಇದೆಲ್ಲವನ್ನು ಮಜಾ ಮಾಡಿ ಉಡಾಯಿಸಿಬಿಡಬೇಕು ಎಂಬ ಯೋಜನೆ ಹೊಳೆಯಿತು. ಕೂಡಲೇ ಹತ್ತಿರದಲ್ಲಿಯೇ ಇದ್ದ ಕೆಸಿನೋ ಒಂದನ್ನು ಹೊಕ್ಕನಾತ ಅಪಾರ ಜನ ಜಂಗುಳಿಯನ್ನು ಹೊಂದಿದ್ದ ಕೆಸಿನೋದಲ್ಲಿ ಎಲ್ಲೆಡೆ ಪಾಳಿಯಲ್ಲಿ ಆಡುವ ಅವಕಾಶ.
ಪೋಕರ್ ಆಡಿದರಾಯ್ತು ಎಂದು ಅಲ್ಲಿ ಹೋಗಿ ಪಾಳಿಯಲ್ಲಿ ನಿಂತ ಆತ ತನ್ನ ಪಾಳಿ ಬರುವವರೆಗೆ
ಅಲ್ಲಿಯೇ ಇದ್ದ ವರ್ತಮಾನ ಪತ್ರಿಕೆಯನ್ನು ಹಿಡಿದು ಓದತೊಡಗಿದ. ವರ್ತಮಾನ ಪತ್ರಿಕೆಯ ಕೊನೆಯ ಪುಟದ ಕೆಳಭಾಗದ ಮೂಲೆಯಲ್ಲಿ ಪ್ರಕಟವಾದ ಒಂದು ವಿಷಯ ಆತನ ಗಮನ ಸೆಳೆಯಿತು. ಅಲ್ಲಿಯೇ 200 ಮೀಟರ್ ದೂರದಲ್ಲಿರುವ ಒಂದು ದೊಡ್ಡದಾದ ಬಯಲು ಪ್ರದೇಶದಲ್ಲಿ ನಡೆಯುತ್ತಿದ್ದ ಚಿನ್ನದ ಗಣಿಗಾರಿಕೆಯ ಆ ಪ್ರದೇಶವನ್ನು ಲಿಲಾವು ಮಾಡಲಾಗುತ್ತಿತ್ತು. ಈಗಾಗಲೇ ಸಾಕಷ್ಟು ಪ್ರದೇಶವನ್ನು ಅಗಿದಿದ್ದರೂ ಚಿನ್ನದ ಒಂದು ನಿಕ್ಷೇಪವು ದೊರೆಯದೆ ಹೋದದ್ದು ಸರ್ಕಾರದ ಬೇಸರಕ್ಕೆ ಕಾರಣವಾಗಿದ್ದು ಇದೀಗ ಊರ ಹೊರಗಿನ ಆ ಬಯಲು ಪ್ರದೇಶವನ್ನು ಲಿಲಾವಿನ ಮೂಲಕ ಮಾರಾಟ ಮಾಡಿ ಸರಕಾರದ ಬೊಕ್ಕಸಕ್ಕೆ ಉಂಟಾದ ನಷ್ಟವನ್ನು ತುಂಬಿಕೊಳ್ಳಲು ಸರ್ಕಾರದ ಪ್ರತಿನಿಧಿಗಳು ಬಯಸಿದ್ದರು. ಅದರ ಪರಿಣಾಮವೇ ಈ ಲಿಲಾವು.
ನನ್ನದೇ ಬಯಲು ಪ್ರದೇಶದಲ್ಲಿ ನಾನು ಆತ್ಮಹತ್ಯೆ ಮಾಡಿಕೊಂಡು ಸಾಯಬೇಕು ಎಂದು ಯೋಚಿಸಿದ ಆ ವ್ಯಕ್ತಿ ತನ್ನ 70 ಡಾಲರ್ ಹಣವನ್ನು ಹಿಡಿದುಕೊಂಡು ಹತ್ತಿರದಲ್ಲಿಯೇ ಇದ್ದ ಆ ಬಯಲು ಪ್ರದೇಶಕ್ಕೆ ನಡೆದುಹೋದನು. ಈಗಾಗಲೇ ಲಿಲಾಾವಿನ ಸಮಯ ಆರಂಭವಾಗಿದ್ದು ಈ ವ್ಯಕ್ತಿಯನ್ನು ಹೊರತುಪಡಿಸಿ ಅಲ್ಲಿ ಒಬ್ಬೇ ಒಬ್ಬ ವ್ಯಾಪಾರಿಯೂ ಕೂಡ ಆ ಜಾಗವನ್ನು ಖರೀದಿಸಲು ಬಂದಿರಲಿಲ್ಲ. ಸರ್ಕಾರದ ಪ್ರತಿನಿಧಿಯು ಎಲ್ಲಾ ವಿಧಿ ನಿಯಮಗಳನ್ನು ಓದಿದ ನಂತರ ಭೂಮಿಯನ್ನು ಹರಾಜು ಕೂಗಲಾಯಿತು. ತನ್ನ ಬಳಿ ಇದ್ದ ಕೇವಲ 70 ಡಾಲರ್ ಹಣವನ್ನು ಆ ಭೂಮಿಗೆ ತಾನು ನೀಡಬಹುದು ಎಂದು ಆತ ಹರಾಜಿನಲ್ಲಿ ತನ್ನ ಮೊತ್ತವನ್ನು ದಾಖಲಿಸಿದ. ಅದಕ್ಕೂ ಹೆಚ್ಚು ಹಣವನ್ನು ಕೂಗಲು ಅಲ್ಲಿ ಯಾರೂ ಇರಲಿಲ್ಲ. ಅಂತಿಮವಾಗಿ ಆತನ 70 ಡಾಲರ್ ಹಣಕ್ಕೆ ಆ ಜಾಗ ಆತನದೆಂದು ಉಳಿದ ಕಾಗದ ಪತ್ರಗಳನ್ನು ಒಂದು ತಿಂಗಳೊಳಗೆ ಮಾಡಿಸಿಕೊಳ್ಳಬೇಕೆಂದು ಅಧಿಕಾರಿಗಳು ಆತನಿಗೆ ತಾಕೀತು ಮಾಡಿ ಅಲ್ಲಿಂದ ಹೊರಟು ಹೋದರು.
ಆ ಜಾಗದ ಯಾವ ಭಾಗದಲ್ಲಿ ತಾನು ಹೋಗಿ ಸಾಯಬೇಕು ಎಂದು ಆತ ಪರಿಶೀಲಿಸುತ್ತಿದ್ದನಷ್ಟೇ ಆದರೆ ಆತನ ದುರದೃಷ್ಟಕ್ಕೆ ಈಗಾಗಲೇ ಅಲ್ಲಿ ನೆಲವನ್ನು ಅಗಿಯುತ್ತಿದ್ದ ಕೆಲಸಗಾರರು ಬಂದು ಆತನನ್ನು ಸುತ್ತುವರೆದು ಇಂದಿನ ದಿನದ ಕೂಲಿ ಹಣ ನಮಗೆ ಸಂದಾಯವಾಗಿದೆ. ಆದರೆ ಈ ದಿನ ಮುಗಿಯಲು ಇನ್ನೂ ಮೂರು ಗಂಟೆಗಳ ಸಮಯವಿದ್ದು ನೀವು ಒಪ್ಪಿದರೆ ನಾವು ನಮ್ಮ ಕೆಲಸವನ್ನು ಮುಂದುವರಿಸುತ್ತೇವೆ. ಬೇಡವೆಂದರೆ ಮರಳಿ ಹೋಗುತ್ತೇವೆ ಏನು ಮಾಡೋಣ? ಎಂದು ಆತನನ್ನು ಪ್ರಶ್ನಿಸಿದರು.
ಇಂದಿನ ದಿನದ ಕೂಲಿ ನಿಮಗೆ ಸಂದಾಯವಾಗಿದ್ದರೆ ನೀವು ನಿಮ್ಮ ಕೆಲಸವನ್ನು ಮುಂದುವರಿಸಿ” ಎಂದು ಆತನು ಹೇಳಲು ಹಾಗಾದರೆ ಈ ಜಾಗ ಯಾವ ಭಾಗವನ್ನು ನಾವು ಅಗಿಯಬೇಕು ಎಂದು ಅವರು ಪ್ರಶ್ನಿಸಿದರು. ತುಸು ಬೇಸರದಿಂದ ಆತ ಇದುವರೆಗೂ ನೀವು ಎಲ್ಲಿ ಅಗಿಯುತ್ತಿದ್ದಿರೋ ಅಲ್ಲಿಯೇ ಅಗಿಯಿರಿ ಎಂದು ಕೈ ಮಾಡಿ ತೋರಿ ತಾನು ಅಲ್ಲಿಯೇ ಕುಳಿತುಕೊಂಡನು.
ಆಯ್ತು ಎಂದು ತಲೆ ಆಡಿಸಿದ ಕೆಲಸದವರು ಮತ್ತೆ ತಮ್ಮ ಕೆಲಸವನ್ನು ಮುಂದುವರೆಸಿದರು. ಮುಂದಿನ ಒಂದುವರೆ ಗಂಟೆ ಕಾಲದ ಅಗಿಯುವಿಕೆಯ ನಂತರ
ಅವರಿಗೆ ಚಿನ್ನದ ನಿಕ್ಷೇಪ ದೊರಕಿತು. ಕೂಡಲೇ ಆತನ ಬಳಿ ಓಡಿ ಬಂದ ಕೆಲಸದವರು ಈ ವಿಷಯವನ್ನು ಆತನಿಗೆ ಅರುಹಿದರು. ಮಿಂಚಿನಂತೆ ಈ ಸುದ್ದಿ ಎಲ್ಲೆಡೆ ತಲುಪಿತು. ಮುಂದಿನ ಕೆಲವೇ ದಿನಗಳಲ್ಲಿ ಆತನೋರ್ವ ಕೋಟ್ಯಾಧೀಶ ಉದ್ಯಮಿಯಾಗಿ, ಚಿನ್ನದ ಗಣಿಯ ಮಾಲೀಕನಾಗಿ ರೂಪಾಂತರಗೊಂಡಿದ್ದ.
ಪತ್ರಕರ್ತರು ಆತನನ್ನು ಕುರಿತು ಸೋಲು ಮತ್ತು ಗೆಲುವು ಇವುಗಳ ನಡುವಿನ ಅಂತರ ಎಷ್ಟು ಎಂದು ಪ್ರಶ್ನಿಸಿದಾಗ ಕೇವಲ ಮೂರು ಅಡಿ ಎಂದು ಆತ ಹೇಳಿದ….. ಯಾವ ಮೂರು ಅಡಿ ಆಳದ ತಗ್ಗಿನಲ್ಲಿ ಬಿದ್ದು ಆತ ಆತ್ಮಹತ್ಯೆ ಮಾಡಿಕೊಳ್ಳಬೇಕೆಂದು ಬಯಸಿದ್ದನು ಅದೇ ಮೂರು ಅಡಿ ಆಳದ ತಗ್ಗು ಆತನಿಗೆ ಚಿನ್ನದ ನಿಕ್ಷೇಪವನ್ನು ನೀಡಿ ಜಾಗತಿಕ ಉದ್ಯಮಿಗಳ ಸಾಲಿನಲ್ಲಿ ತಂದು ನಿಲ್ಲಿಸಿತು.
ಈ ಕತೆ ನಿಜವೇ? ಸುಳ್ಳೇ? ಎಂಬ ಕುತೂಹಲ ನಿಮ್ಮನ್ನು ಕಾಡಬಹುದು… ಕಥೆಯ ಸತ್ಯಾಸತ್ಯತೆಗಳು ಏನೇ ಇರಲಿ ಆದರೆ ಕಥೆ ಕೊಡುವ ಮಾರ್ಮಿಕವಾದ ಪಾಠ ನಮ್ಮ ಬದುಕಿನ ದಾರಿಯನ್ನು ನೇರಗೊಳಿಸುತ್ತದೆ. ಬದುಕಿಗೊಂದು ಭರವಸೆಯನ್ನು ನೀಡಿ ಮನಸ್ಸನ್ನು ನಿರುಮ್ಮಳವಾಗಿಸುತ್ತದೆ.
ಪ್ರತಿ ಅಂಧಕಾರವು ತನ್ನೊಂದಿಗೆ ಬೆಳಕನ್ನು ಹೊತ್ತು ತರುತ್ತದೆ ಪ್ರತಿ ಸೂರ್ಯಾಸ್ತವು ತನ್ನೊಂದಿಗೆ ಸೂರ್ಯೋದಯವನ್ನು. ಇಡೀ ಜಗತ್ತು ಕತ್ತಲೆಯಲ್ಲಿ ಮುಳುಗಿರುವಾಗ ಕಿರು ಹಣತೆಯ ಬೆಳಕು ನಾವಿರುವ ಜಾಗದ ಕತ್ತಲನ್ನು ಹೊಡೆದೋಡಿಸುತ್ತದೆ ಅಂತೆಯೇ ಇಡೀ ಬದುಕು ಕತ್ತಲಾಗಿದೆ ಎಂದು ನಾವು ಭಾವಿಸಿಕೊಂಡಾಗ ಎಲ್ಲವೂ ಸರಿ ಹೋಗುತ್ತದೆ ಎಂಬ ಭರವಸೆಯ ಪುಟ್ಟ ದೀಪ ನಮ್ಮ ಬದುಕಿನ ಕತ್ತಲನ್ನು ಹೋಗಲಾಡಿಸುತ್ತದೆ.
ಅಂತಹದೊಂದು ಭರವಸೆಯನ್ನು ನಮ್ಮ ಬದುಕಿನಲ್ಲಿ ನಾವು ಇಟ್ಟುಕೊಳ್ಳೋಣ. ಬದುಕು ಒಡ್ಡುವ ಎಲ್ಲಾ ಸವಾಲುಗಳನ್ನು ಸ್ವೀಕರಿಸಿ, ತಕ್ಕ ಉತ್ತರ ನೀಡುವ ಮೂಲಕ ಬದುಕನ್ನು ಮತ್ತಷ್ಟು ಆಸ್ತೆಯಿಂದ ಬದುಕೋಣ ಎಲ್ಲರನ್ನೂ ಪ್ರೀತಿಸಿ , ಎಲ್ಲರನ್ನೂ ಹುರಿದುಂಬಿಸಿ. ಎಲ್ಲರೊಂದಿಗೆ ಒಗ್ಗೂಡಿ ಬಾಳೋಣ ಎಂಬ ಭರವಸೆಯೊಂದಿಗೆ …
- ವೀಣಾ ಹೇಮಂತ್ ಗೌಡ ಪಾಟೀಲ್, ಮುಂಡರಗಿ ಗದಗ
