ಸುಳ್ಯ: ಜೇನು ಕೃಷಿ ಕ್ಷೇತ್ರಕ್ಕೆ ಆಧುನಿಕ ರೂಪ ನೀಡಿ ಜೇನು ಕೃಷಿಯನ್ನು ಲಾಭದಾಯಕವಾಗಿ ಮಾಡುವ ಜೇನು ವ್ಯವಸಾಯಗಾರರ ಸಹಕಾರಿ ಸಂಘದ ಕಾರ್ಯ ಶ್ಲಾಘನೀಯ ಎಂದು ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ, ಸಹಕಾರಿ ರತ್ನ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕೇಂದ್ರ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ, ಕೃಷಿ ಸುಸ್ಥಿರವಾಗಿರಲು ಮತ್ತು ಲಾಭದಾಯಕವಾಗಿಸಲು ರೈತರು ಒಂದೇ ರೀತಿಯ ಕೃಷಿಯನ್ನು ಅವಲಂಬಿಸದೆ ಮಿಶ್ರ ಹಾಗೂ ಪೂರಕ ಕೃಷಿಗೆ ಒತ್ತು ನೀಡಬೇಕು ಎಂದು ಹೇಳಿದರು.
ದೇಶದ 50 ಕೋಟಿ ಜನ ಕೃಷಿ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ದೇಶದ ಜಿಡಿಪಿಗೆ ಶೇ.30ರಷ್ಟನ್ನು ನೀಡುವ ಕೃಷಿ ಕ್ಷೇತ್ರ ಅತೀ ಹೆಚ್ಚು ಉದ್ಯೋಗವನ್ನೂ ನೀಡುತ್ತಿದೆ. 26 ಕೋಟಿ ಜನ ತೊಡಗಿಸಿಕೊಂಡಿರುವ ಸಣ್ಣ ಮತ್ತು ಸೂಕ್ಷ್ಮ ಕೈಗಾರಿಕಾ ಕ್ಷೇತ್ರ ಜಿಡಿಪಿಗೆ ಶೇ.18ನ್ನು ನೀಡುತ್ತಿದೆ. ಕೃಷಿಯಲ್ಲಿ ಗುಣಮಟ್ಟದ ಉತ್ಪಾದನೆಗೆ ಒತ್ತು ನೀಡಬೇಕು. ಆಗ ಉತ್ತಮ ಮಾರುಕಟ್ಟೆ ಮತ್ತು ದರ ದೊರೆಯಲು ಸಾಧ್ಯ. ನಾವು ಉತ್ಪಾದಿಸುವ ಆಹಾರ ವಸ್ತುಗಳು ವಿದೇಶಕ್ಕೆ ರಫ್ತಾಗುವ ಗುಣಮಟ್ಟದ್ದಾಗಿರಬೇಕು ಎಂದ ಅವರು ದಕ್ಷಿಣ ಕನ್ನಡ ಜಿಲ್ಲೆಗೆ ಆಹಾರ ಪರೀಕ್ಷಾ ಪ್ರಯೋಗಾಲಯ ಆಗಬೇಕು. ಇದರಿಂದ ಆಹಾರ ಉತ್ಪಾದನೆಯ ಗುಣಮಟ್ಟ ಹೆಚ್ಚಾಗಲು ಮತ್ತು ಆರೋಗ್ಯ ಸಂರಕ್ಷಣೆಗೆ ಸಹಾಯಕ ಎಂದು ಅವರು ಹೇಳಿದರು. ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಪೂರಕವಾಗಿ ಕೃಷಿ ಕ್ಷೇತ್ರದಲ್ಲಿ ಗುಣಮಟ್ಟದ ಉತ್ಪನ್ನಗಳನ್ನು ಉತ್ಪಾದಿಸಲು ಆದ್ಯತೆ ನೀಡಬೇಕು. ಜೇನು ವ್ಯವಸಾಯ ಕ್ಷೇತ್ರದಲ್ಲಿ ವಿಫುಲ ಅವಕಾಶಗಳು ಇವೆ, ಆದುದರಿಂದ ಗ್ರಾಮೀಣ ಭಾಗದಲ್ಲಿ ಗುಣಮಟ್ಟದ ಜೇನು ಉತ್ಪಾದಿಸಲು ಒತ್ತು ನೀಡಿ ಎಂದು ಹೇಳಿದರು. ಪ್ರಮುಖ ಬೆಳೆಯ ಜೊತೆಗೆ ಜೇನು ಕೃಷಿಯಂತೆ ಇತರ ಹಲವು ಪೂರಕ ಹಾಗೂ ಮಿಶ್ರ ಬೆಳೆಯನ್ನು ಬೆಳೆಸಿ ಎಂದ ಅವರು ಮಿಶ್ರ ಕೃಷಿಯಿಂದ ಮಾತ್ರ ಯಶಸ್ಸು ಪಡೆಯಲು ಸಾಧ್ಯ ಎಂದರು.
ವರದಿ : ಕೊಡಕ್ಕಲ್ ಶಿವಪ್ರಸಾದ್ , ಶಿವಮೊಗ್ಗ
