ಬಳ್ಳಾರಿ / ಕಂಪ್ಲಿ : ಪೌರ ನೌಕರರು ಕರ್ತವ್ಯಕ್ಕೆ ಗೈರಾಗಿ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ, ಕರ್ನಾಟಕ ರಾಜ್ಯ ನೌಕರರ ಸಂಘದ ಕಂಪ್ಲಿ ಶಾಖೆಯಿಂದ ಪಟ್ಟಣದ ಪುರಸಭೆ ಆವರಣದಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ಮಂಗಳವಾರ ನಡೆಸಿದರು.
ನಂತರ ಕಂಪ್ಲಿ ಶಾಖೆ ಅಧ್ಯಕ್ಷ ಪ್ರಕಾಶಬಾಬು ಮಾತನಾಡಿ, ರಾಜ್ಯದ ಎಲ್ಲಾ ನಗರ ಸ್ಥಳೀಯ ಸಂಸ್ಥೆ ನೌಕರರನ್ನು ರಾಜ್ಯ ಸರ್ಕಾರಿರೆಂದು ಪರಿಗಣಿಸಿ ಜ್ಯೋತಿ ಸಂಜೀವಿನಿ ಕೆಜಿಐಡಿ ಸೇರಿದಂತೆ ಸರ್ಕಾರಿ ನೌಕರ ಪಡೆಯುವ ಎಲ್ಲಾ ಸೌಲಭ್ಯಗಳನ್ನು ನೀಡಬೇಕು, ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಹೊರಗುತ್ತಿಗೆ ಅಡಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ನೀರು ಸರಬರಾಜು ಸಹಾಯಕರು, ಚಾಲಕರು, ಲೋಡರ್ಸ್, ಕ್ಲೀನರ್ಸ್, ಗಾರ್ಡನರ್, ಸ್ಯಾನಿಟರಿ ಸೂಪರ್ ವೈಸರ್, ಯುಜಿಡಿ ಸಹಾಯಕರು ಸೇರಿದಂತೆ ವಿವಿಧ ವೃಂದದ ಹೊರಗುತ್ತಿಗೆ ನೌಕರರನ್ನು ನೇರ ಪಾವತಿಗೆ ಒಳಪಡಿಸುವುದು. ದಿನಗೂಲಿ ಕ್ಷೇಮಾಭಿವೃದ್ಧಿ ಸಮಾನ ಕೆಲಸಕ್ಕೆ ಸಮಾನ ವೇತನ ನೌಕರರನ್ನು ಖಾಯಂ ಮಾಡುವುದು. ಎಲ್ಲಾ ನೌಕರರಿಗೆ ಎಸ್‌ಎಫ್‌ಸಿ ಮುಕ್ತ ನಿಧಿಯಿಂದ ವೇತನ ನೀಡುವುದು.
ಈ ಎಲ್ಲಾ ಬೇಡಿಕೆಗಳನ್ನು ಈಡೇರುವವರೆಗೂ ಮುಷ್ಕರ ಮುಂದುವರೆಯಲಿದೆ ಎಂದರು.
ಈ ಸಂದರ್ಭದಲ್ಲಿ ಗೌರವಾಧ್ಯಕ್ಷ ನಾಗಭೂಷಣ(ಆರ್‌ಒ), ಉಪಾಧ್ಯಕ್ಷ ಎನ್. ಓಬಳೇಶ, ಕಾರ್ಯದರ್ಶಿ ರಮೇಶ ಬೆಳಂಕರ್, ಉಪ ಕಾರ್ಯದರ್ಶಿ ವೆಂಕಟೇಶ, ಇಂಜಿನಿಯರ್ ಮೇಘನಾ, ಸಿಬ್ಬಂದಿ ವರ್ಗದವರಾದ ವಿಜಯಲಕ್ಷ್ಮಿ, ಮಹಮ್ಮದ ಗೌಸ್, ಸುಧಾಕರ, ಮೌನೇಶ, ಶಾಹಿದಾ, ಆಂಜಿನೇಯ, ಭರಮಪ್ಪ ಸೇರಿದಂತೆ ಪೌರ ಕಾರ್ಮಿಕರು ಇದ್ದರು.
ವರದಿ : ಜಿಲಾನಸಾಬ್ ಬಡಿಗೇರ್
