ಮೇಡಂ ಎಂಬ ರೂಪ ಗೌರವಾನ್ವಿತ ರೀತಿಯಲ್ಲಿ ಮಹಿಳೆಯನ್ನು ಉದ್ದೇಶಿಸಿ ಬಳಸಲ್ಪಡುತ್ತದೆ ಪಾಶ್ಚಿಮಾತ್ಯರಲ್ಲಿ ಈ ರೂಪ ಅಮ್ಮ,ತಾಯಿ ಮತ್ತು ಶ್ರೀಮತಿ,ಮೇಡಂ,ಮ್ಯಾಮ್ ಎನ್ನುವ ಅರ್ಥದಲ್ಲಿ ಬಳಕೆಯಲ್ಲಿದೆ. ಪಾಶ್ಚಿಮಾತ್ಯರಿಂದ ಕನ್ನಡದಲ್ಲಿ ಸ್ವೀಕರಣಗೊಂಡ ಈ ಪದ ಸಾಮಾನ್ಯವಾಗಿ ಶಿಕ್ಷಿತ ಮತ್ತು ಅಶಿಕ್ಷಿತ ವರ್ಗಗಳೆರಡಲ್ಲೂ ಶಿಕ್ಷಕಿ ಮತ್ತು ವೃತ್ತಿಯಲ್ಲಿರುವವರನ್ನು ಕುರಿತು ಬಳಕೆಯಲ್ಲಿತ್ತು(ಅಶಿಕ್ಷಿತರಲ್ಲಿ ಈ ಮೇಡಂ ಎಂಬ ರೂಪ ಮೇಡಮ್ಮಾ ಆಗಿ ಬಳಕೆಗೊಳ್ಳುತ್ತಿದೆ) ಆದರೆ ಈ ರೂಪದ ಅರ್ಥ ಬಳಕೆಯ ನೆಲೆಯಲ್ಲಿ ಕಾಲಕ್ರಮೇಣವಾಗಿ ಪಲ್ಲಟವಾಗಿರುವುದು ಗಮನಾರ್ಹ ಈ ವಿಷಯವನ್ನು ಕುರಿತು ಚಳ್ಳಕೆರೆ ಪರಿಸರದ ಶಿಕ್ಷಿತ ಮತ್ತು ಅಶಿಕ್ಷಿತ ವರ್ಗಗಳೆರಡರಲ್ಲೂ ಬಳಕೆಯ ನೆಲೆಯಲ್ಲಿ ಅರ್ಥಪಲ್ಲಟಗೊಂಡಿರುವುದನ್ನು ಗಮನದಲ್ಲಿಟ್ಟುಕೊಂಡು ಈ ಟಿಪ್ಪಣಿಯನ್ನು ರಚಿಸಲಾಗಿದೆ ಪ್ರಾರಂಭದಲ್ಲಿ ಕಲಿಸುವ ವರ್ಗವನ್ನು ಕುರಿತು ಮಾತ್ರ ಮೇಡಂ ಎನ್ನುವ ರೂಪ ಬಳಕೆಯಲ್ಲಿತ್ತು.ಕ್ರೈಸ್ತ ಮಿಶನರಿಗಳ ಆಗಮನದಿಂದ ಶಾಲೆಗಳ ಆರಂಭವಾದ ನಂತರ ಶಿಕ್ಷಣವೆನ್ನುವುದು ಸಾರ್ವಜನಿಕವಾದ ಮೇಲೆ ಅವರಲ್ಲಿ ಸಾಮಾನ್ಯವಾಗಿ ಬಳಕೆಯಲ್ಲಿದ್ದಂತಹ ಈ ಮೇಡಂ ಎಂಬ ಪದಬಳಕೆ ಅಲ್ಲಿನ ಕಲಿಕಾರ್ಥಿಗಳಲ್ಲಿ ಬಳಕೆಗೊಳ್ಳಲು ಆರಂಭವಾಯಿತು ಇದು ಆನಂತರವು ಹಾಗೆಯೇ ಮುಂದುವರೆದರ ಪರಿಣಾಮ ಈ ಮೇಡಂ ಎಂಬ ಪದ ಬಳಕೆ.
ಉದಾಹರಣೆಗೆ:ನಂ ಮೇಡಂ ಹೊಂ ವರ್ಕ್ ಬರ್ಕೊಂಡ್ ಹೋಗ್ಲಿಲ್ಲ ಅಂದ್ರೆ ಹೊಡಿತಾರಪ್ಪ.
ಮೇಡಮ್ಮಾರೆ ನಂ ಮಗ ಚೆನ್ನಾಗಿ ಕಲಿತಿದಾನಾ?
ಹಾಗೆಯೇ ಮೇಡಂ ಎನ್ನುವುದು ಗೌರವಸೂಚಕ ಪದವೆಂದು ಸಾಮಾನ್ಯವಾಗಿ ಬಳಕೆ ಮಾಡಬಹುದಂತಹ ರೂಪವೆಂದು ಶಿಕ್ಷಿತ ವರ್ಗದಲ್ಲಿ ಬಳಕೆಯ ನೆಲೆಗೆ ಬಂತು.
ಉದಾಹರಣೆಗೆ:ಹೇಳಿ ಮೇಡಂ ಏನಾಗಬೇಕಿತ್ತು
ಮೇಡಂ ಒಂಚೂರು ದಾರಿಬಿಡಿ
ವ್ಯಾಪಾರ ವಹಿವಾಟುಗಳ ಸಂದರ್ಭದಲ್ಲಿ ಸಾಮಾನ್ಯವಾಗಿ ಅಶಿಕ್ಷಿತ ವರ್ಗದವರು ಸಹ ಮೇಡಂ ಎನ್ನುವ ರೂಪ ಬಳಸುತ್ತಾರೆ.
ಉದಾಹರಣೆಗೆ:ಮೇಡಮ್ಮೊರೆ ಸಾಹೇಬ್ರು ಎಷ್ಟೊತ್ತಿಗೆ ಬರ‍್ತಾರ‍್ರಿ
ಮೇಡಂ ವಸಿ ಟೈಮ್ ಎಷ್ಟಾಗೈತೆ ನೋಡ್ಹೇಳ್ರಿ
ನಂತರದಲ್ಲಿ ಮೂರನೇ ಹಂತದಲ್ಲಿ ಮೇಡಂ ಎನ್ನುವ ರೂಪ ಮನೆಯವರನ್ನು(ಹೆಂಡತಿ) ಕುರಿತು ಸಂಭೋದಿಸುವಂತಹ ನೆಲೆಯಲ್ಲಿ ಕಂಡು ಬರುತ್ತದೆ ಈ ಬಳಕೆ ಇತ್ತಿಚೀನ ದಿನಗಳಲ್ಲಿ ಕಂಡು ಬರುತ್ತಿದೆ ಅಂದರೆ, ಮೊದಲ ಮತ್ತು ಎರಡನೇ ಹಂತದಲ್ಲಿ ಹೇಳಿದಂತೆ ಕಲಿಸುವ ಮತ್ತು ವೃತ್ತಿ ಜೀವನದಲ್ಲಿ ತೊಡಗಿರುವವರನ್ನಷ್ಟೇ ಕುರಿತು ಬಳಕೆಯಲ್ಲಿದ್ದ ಮೇಡಂ ಎನ್ನುವ ಪದ ವೈಯಕ್ತಿಕ ನೆಲೆಯಲ್ಲಿ ಬಳಕೆಯಾಗುತ್ತಿದೆ.
ಪರಿಚಿತರೊಬ್ಬರ ಮನೆಯವರ ಬಗೆಗೆ ಹೇಳುವಾಗ ಆಗಲಿ ಅಥವಾ ಕೇಳುವಾಗ ಸರ್ವನಾಮದೊಂದಿಗೆ ಮೇಡಂ ಎಂಬ ರೂಪವನ್ನು ಬಳಸುತ್ತಾರೆ.
ಉದಾಹರಣೆಗೆ:ನಿಮ್ಮ ಮೇಡಂ ಹೇಗಿದಾರಪ್ಪ
ನಿಮ್ಮ ಮೇಡಂ ತುಂಬ ಒಳ್ಳೆಯವರು ಸರ್
ಏನಂತಾರಪ್ಪ ನಿಮ್ಮ ಮೇಡಂ
ಜೊತೆಗೆ ಗಂಡ ತನ್ನ ಹೆಂಡತಿಯ ಬಗೆಗೆ ಹೇಳುವಂತಹ ಸಮಯದಲ್ಲಿ ಸಹ ಈ ರೂಪವನ್ನು ಬಳಸುತ್ತಾರೆ.
ಉದಾಹರಣೆ:ನಂ ಮೇಡಂಗೆ ಅವೆಲ್ಲ ಇಷ್ಟ ಆಗಲ್ಲಪ್ಪ
ಮೇಡಂ ಹೇಳಿದ್ದಾರಪ್ಪ
ಕೆಲವು ಬಾರಿ ಗಂಡ ತನ್ನ ಹೆಂಡತಿಯನ್ನು ಕುರಿತು ಸಂಬೋಧಿಸುವಾಗಲೂ (ವೈಯಕ್ತಿಕ ನೆಲೆಯಲ್ಲಿ)ಈ ರೂಪವನ್ನು ಬಳಸುತ್ತಾನೆ. ನಗರಪ್ರದೇಶದಲ್ಲಿ ವಾಸವಾಗಿರುವವರಲ್ಲಿ ಮತ್ತು ಶಿಕ್ಷಿತರಲ್ಲಿ ಈ ಬಗೆಯ ಬಳಕೆ ಹೆಚ್ಚಾಗಿ ಕಂಡು ಬರುತ್ತದೆ.
ಉದಾಹರಣೆಗೆ:ಮೇಡಂ ಸ್ವಲ್ಪ ನಾವು ಹೇಳೋದು ಕೇಳಿ
ಏನಂತಿರ ಮೇಡಂ
ಸರಿ ಮೇಡಂ
ಹೀಗೆ ಪಾಶ್ಚಿಮಾತ್ಯರಿಂದ ಕನ್ನಡ ಪರಿಸರದಲ್ಲಿ ಸ್ವೀಕರಣಗೊಂಡು ಬಳಕೆಯಾಗುವ ಪ್ರೋಸೇಸ್‌ನಲ್ಲಿ ಗೌರವ ಸೂಚಕವಾಗಿ ವ್ಯಾಪಕವಾಗಿ ಬಳಕೆಗೆ ಬಂದ ಈ ರೂಪ ಕಾಲಕ್ರಮೇಣ ವೈಯಕ್ತಿಕ ನೆಲೆಯಲ್ಲಿ ಬಳಕೆಗೊಳ್ಳುವ ಮೂಲಕ ಸಂಕುಚಿತ ಅರ್ಥದ ನೆಲೆಯಲ್ಲಿ ಬಳಕೆಗೊಳ್ಳುತ್ತಿದೆ ಎಂಬುದು ಕೆಲವರ ಅಭಿಪ್ರಾಯ.
ಬರಹ:ಲೋಹಿತೇಶ್ವರಿ.ಎಸ್.ಪಿ.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.