ಭಾರತೀಯ ಸಂಗೀತ ಲೋಕದ ದಿಗ್ಗಜ ಗಾಯಕಿ ಹಾಗೂ ‘ಗಾನ ಕೋಗಿಲೆ’ ಲತಾ ಮಂಗೇಶ್ಕರ್ ಅವರ ಸಹೋದರಿ ಆಶಾ ಭೋಸಲೆ (92) ಅವರು ಇಂದು ಮುಂಬೈನ ಬ್ರೀಚ್ ಕ್ಯಾನ್ಡಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರಿಗೆ ನೀಡಿದ ಚಿಕಿತ್ಸೆ ಫಲಿಸದೆ ಇಂದು ಅಗಲಿದ್ದಾರೆ. ಅವರ ಅಗಲಿಕೆಯಿಂದ ಚಿತ್ರರಂಗದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದ್ದು, ಲಕ್ಷಾಂತರ ಅಭಿಮಾನಿಗಳು ದುಃಖದಲ್ಲಿ ಮುಳುಗಿದ್ದಾರೆ.
ಆಶಾ ಭೋಸಲೆ ಅವರು ಹಿಂದಿ ಮಾತ್ರವಲ್ಲದೆ ಕನ್ನಡ ಸೇರಿ 20ಕ್ಕೂ ಹೆಚ್ಚು ಭಾಷೆಗಳಲ್ಲಿ ಸಾವಿರಾರು ಹಾಡುಗಳಿಗೆ ಕಂಠ ನೀಡಿದ್ದಾರೆ.
ಕನ್ನಡದ ‘ಸಂಗೊಳ್ಳಿ ರಾಯಣ್ಣ’ (1967) ಸೇರಿದಂತೆ ಅನೇಕ ಚಿತ್ರಗಳಲ್ಲಿ ಅವರ ಧ್ವನಿ ಮೊಳಗಿದೆ. ವೈವಿಧ್ಯಮಯ ಗಾಯನ ಶೈಲಿಯಿಂದ ಗಿನ್ನೆಸ್ ದಾಖಲೆ ಪಡೆದ ಅವರು, ದಾದಾಸಾಹೇಬ್ ಫಾಲ್ಕೆ ಮತ್ತು ಪದ್ಮಭೂಷಣ ಸೇರಿದಂತೆ ಅನೇಕ ಗೌರವಗಳಿಗೆ ಪಾತ್ರರಾಗಿದ್ದರು.
ಅವರ ನಿಧನದಿಂದ ಭಾರತೀಯ ಸಂಗೀತ ಕ್ಷೇತ್ರ ಒಂದು ಮಹತ್ವದ ಅಧ್ಯಾಯವನ್ನು ಕಳೆದುಕೊಂಡಂತಾಗಿದೆ. ಸೋಮವಾರ ಸಂಜೆ ಮುಂಬೈನ ಶಿವಾಜಿ ಪಾರ್ಕ್ನಲ್ಲಿ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ.
ವರದಿ ವಿಠ್ಠಲ ಖೋಕಾಟೆ




















