ಜಂಬೂ ದ್ವೀಪದಲ್ಲೇ ಮೊದಲ ಬಾರಿಗೆ ಮಾಧ್ಯಮ ಎಂಬ ಪರಿಕಲ್ಪನೆ ಆರಂಭಿಸಿದ ಕೀರ್ತಿ ಮೌರ್ಯ ಸಾಮ್ರಾಟ ಅಶೋಕ ಚಕ್ರವರ್ತಿಗೆ ಸಲ್ಲುತ್ತದೆ ಹಾಗೂ ಪ್ರಾಚೀನ ಕಾಲದಲ್ಲಿ ಮೊದಲ ಬಾರಿಗೆ ವಿಶಾಲ ಸಾಮ್ರಾಜ್ಯದಲ್ಲಿ ಆಳ್ವಿಕೆ ಮಾಡಿದ ಕೀರ್ತಿಯೂ ರಾಜ ಅಶೋಕನಿಗೆ ಸಲ್ಲುತ್ತದೆ, ಅವತ್ತಿನ ವಿಶಾಲ ಸಾಮ್ರಾಜ್ಯದಲ್ಲಿ ಉತ್ತಮ ಸಂದೇಶ ಹಾಗೂ ಕಾಯಿದೆಗಳನ್ನು ಪ್ರಜೆಗಳಿಗೆ ಮನವರಿಕೆ ಮಾಡಲು ಬಂಡೆಗಲ್ಲು, ಸ್ಥಂಭಗಳ ಮೇಲೆ ಕಾಯಿದೆಗಳನ್ನು ಬರೆಸುವ ಪ್ರಕ್ರಿಯೆ ಆರಂಭಿಸಿದನು, ಅದನ್ನು ಶಾಸನ ಎಂದು ಕರೆಯಲಾಗಿದೆ. ಅಶೋಕ ತನ್ನ ಕಾಲಘಟ್ಟದಲ್ಲಿ ಪ್ರಜಾಹಿತ ಕಾರ್ಯಕ್ಕೆ ಮುಡಿಪಾಗಿದ್ದ ಮಾದರಿ ಅರಸನಾಗಿದ್ಧನು. ಅಶೋಕ ಎಂದರೆ ಶೋಕವಿಲ್ಲದವನು ಎಂದರ್ಥ. ದಯೆ,ದಾನ,ಧರ್ಮ,ಸೋದರತೆ,ತಾಳ್ಮೆ,ಅನುಕಂಪ,ಪ್ರೀತಿ,ಸರಳತೆ,ಸಹಿಷ್ಣತೆಯಂತಹ ಉದಾತ್ತತೆಯ ಹೊಂದಿದ್ದ ಮಾನವೀಯ ಮೌಲ್ಯದ ಪ್ರತಿಪಾದಕ ಹಾಗೂ ಗರಿಷ್ಠ ಪ್ರಜಾಹಿತ ಚಿಂತಕನಾಗಿ ಹಾಗೂ ಅಹಿಂಸೆಯ ಪರಿಪಾಲಕನಾಗಿ, ಪ್ರಾಣಿ ಬಲಿ ಮತ್ತು ಬೇಟೆಯನ್ನು ನಿಷೇಧ ಮಾಡಿದನು,
ಅಶೋಕನು ಹೊರಡಿಸಿದ 6ನೇ ಬಂಡೆಗಲ್ಲು ಶಾಸನದಲ್ಲಿ “ನಾನು ಎಲ್ಲೇ ಇರಲಿ ಯಾವುದೇ ಸಮಯದಲ್ಲಾದರೂ ಪ್ರಜೆಗಳು ತಮ್ಮ ಕುಂದುಕೊರೆತೆಗಳನ್ನು ತನ್ನ ಬಳಿ ತಿಳಿಸಬಹುದು ಅದನ್ನು ಪರಿಹರಿಸಲು ಸದಾ ಸಿದ್ದ” ಎಂದು ಬರೆಸಿದ್ದನು, ರಸ್ತೆಗಳು ಅದರ ಇಕ್ಕೆಲಗಳಲ್ಲಿ ಸಾಲು ಮರಗಳು, ಕುಡಿಯುವ ನೀರು, ಪಶು ಆಸ್ಪತ್ರೆಗಳು, ತಂಗುದಾಣ, ವಿದೇಶಿ ವ್ಯಾಪಾರ,ಕೃಷಿಕರು ಹಾಗೂ ದೀನ- ದುರ್ಬಲರಿಗೆ ನೆರವು ಮತ್ತಿತರ ಜನೋಪಕಾರಿ ಕಾರ್ಯಕ್ರಮಗಳಿಗಾಗಿ ಅವಿರತವಾಗಿ ಶ್ರಮಿಸಿದನು.
ಪ್ರಾಚೀನ ಕಾಲದಲ್ಲಿಯೇ ಗಿಳಿ,ಮೈನಾ,ಹಂಸ,
ಚಕ್ರವಾಕ ಪಕ್ಷಿ,ಆಮೆ, ಮುಳ್ಳುಹಂದಿ, ಅಳಿಲು, ಜಿಂಕೆ, ಗೂಳಿ, ಗರ್ಭಿಣಿ ಅಥವಾ ಹಾಲುಣಿಸುವ ಆಡು,ಕುರಿ ಹಾಗೂ ಹಂದಿ(ಮತ್ತು ಅವುಗಳ 6 ತಿಂಗಳೊಳಗಿನ ಮರಿಗಳು) ಕೊಲ್ಲಬಾರದೆಂದು ಆಜ್ಞೆ ಮಾಡಿದ್ದನು.
ಯುದ್ದಗಳಿಂದ ದೂರ ಉಳಿದು ಶಾಂತಿ,ಸಹನೆಯಿಂದ ದೇಶ ಕಟ್ಟಿದ ಏಕೈಕ ಚಕ್ರವರ್ತಿ ಅಶೋಕ ಅವನು ಮಾದರಿ ರಾಜ್ಯ ರೂಪಿಸಿ,ಯುದ್ಧ ಮನುಕುಲಕ್ಕೆ ಮಾರಕ ಎಂಬ ಸಂದೇಶವನ್ನು ಜಗತ್ತಿಗೆ ಸಾರಿದ ಮೊಟ್ಟ ಮೊದಲಿಗ ಇವೆಲ್ಲವೂ ಅವನು ಹೊರಡಿಸಿದ ಮಾಧ್ಯಮದಿಂದ ಇಂದಿಗೂ ಜೀವಂತವಿದೆ, ಅಶೋಕನ ಅಂದಿನ ಮಾಧ್ಯಮಕ್ಕೂ ಇವತ್ತಿನ ದ್ರಶ್ಯ ಮತ್ತು ಮುದ್ರಣ ಮಾಧ್ಯಮಕ್ಕೂ ಅಜಗಜಾಂತರ ವ್ಯತ್ಯಾಸವಿದೆ,
ಇವತ್ತಿನ ಕೆಲ ದೃಶ್ಯ ಮಾಧ್ಯಮಗಳು ತಮಗೆ ಅನುಕೂಲಕರವಾಗಿ ಭಿತ್ತರಿಸುತ್ತಿವೆ,
ಇವುಗಳನ್ನು ವೀಕ್ಷಿಸಿ ಗಲ್ಫ್ ರಾಷ್ಟ್ರಗಳಲ್ಲಿ ನೆಲೆಸಿರುವ ಪರಿಚಿತ ಅನಿವಾಸಿ ಭಾರತೀಯರನ್ನು ವಿದೇಶಗಳಲ್ಲಿ ಯುದ್ಧ ಹೇಗಿದೆ ಎಂದು ಕೇಳಿದರೆ ಇಲ್ಲಿನ ಕೆಲ ಮಾಧ್ಯಮಗಳಲ್ಲಿ ಭಿತ್ತರಿಸುವ ರೀತಿಯಲ್ಲಿ ದೊಡ್ಡ ಮಟ್ಟದ ಭೀಕರತೆ ಏನೂ ಇಲ್ಲ ಎನ್ನುತ್ತಾರೆ,
ನಾಲ್ಕನೇ ಅಂಗವಾಗಿರುವ ಮಾಧ್ಯಮಗಳು
ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಆಶಯಗಳಿಗೆ ಸ್ಪಂದಿಸುವ ಅಗತ್ಯವಿದೆ, ಬಡವರು,ಕಾರ್ಮಿಕರು,ನಿರ್ಗತಿಕರು,ಅಲೆಮಾರಿಗಳು,ಹಕ್ಕಿಪಿಕ್ಕಿಗಳು, ಬುಡಕಟ್ಟು ಆದಿವಾಸಿಗಳು,ಬೀದಿ ಬದಿಯ ವ್ಯಾಪಾರಿಗಳು, ಮಹಿಳೆಯರು, ರೈತರು, ವಿಧ್ಯಾರ್ಥಿಗಳ ಸಮಸ್ಯೆಗಳು ಬೆಟ್ಟದಷ್ಟಿದೆ, ಅಲ್ಲದೆ ಬಡತನ,ನಿರುದ್ಯೋಗ, ರೋಗರುಜಿನಗಳಿಗೆ ಸಿಲುಕಿ ಸಾಮಾನ್ಯ ಜನರು ನರುಳುತ್ತಿದ್ಧಾರೆ, ದಿನ ಬಳಕೆ ಅಗತ್ಯ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಬೆಲೆ ಗಗನಕ್ಕೇರುತ್ತಿದೆ,ಹೀಗೆ ಸಾಕಷ್ಟು ಸಮಸ್ಯೆಗಳು ದೇಶವನ್ನು ಬಾಧಿಸುತ್ತಿವೆ, ಅವುಗಳ ಬಗ್ಗೆ ಹೆಚ್ಚಿನ ಗಮನ ಹರಿಸಿ ಸಂಬಂಧಪಟ್ಟ ಇಲಾಖೆಗಳು ಸ್ಪಂದಿಸುವ ರೀತಿಯಲ್ಲಿ ಮಾಧ್ಯಮಗಳು ಗಮನ ಸೆಳೆಯಬೇಕು.
ಯಾವುದು ಒಂದು ರಾಜಕೀಯ ಪಕ್ಷದ ಮಧ್ಯವರ್ತಿಗಳಾಗಿ ಮಾಧ್ಯಮಗಳು ಕಾರ್ಯ ನಿರ್ವಹಿಸಬಾರದು. ಉತ್ತಮ ರಾಷ್ಟ್ರವನ್ನು ರೂಪಿಸುವಲ್ಲಿ ಮಾಧ್ಯಮಗಳ ಪಾತ್ರವೂ ಸಾಕಷ್ಟಿದೆ. ಶೇ 80% ಜನತೆ ದೃಶ್ಯ ಮಾಧ್ಯಮದಲ್ಲಿ ಭಿತ್ತರವಾಗುವ ಸುದ್ದಿಗಳನ್ನೇ ಸತ್ಯವೆಂದು ಭಾವಿಸುತ್ತಾರೆ.ಆಗಾಗಿ ಕೋಮು ಸಾಮರಸ್ಯ, ಭ್ರಾತೃತ್ವ, ಸಹನೆ, ಸಹಬಾಳ್ವೆ, ಸಮಾಜಕ್ಕೆ ಪೂರಕವಾಗಿರಬೇಕು ನಮ್ಮ ಮಾಧ್ಯಮಗಳು.
– ಡಾ.ಸುರೇಶ್ ಎಸ್. ವಡಗಲಪುರ.
ಸಮಾಜಮುಖಿ ಚಿಂತಕರು.




















