ಸುರಪುರ ಸುದ್ದಿ : ತೀವ್ರ ಬರಗಾಲದಿಂದ ಮನನೊಂದು ಸಾಲ ಬಾಧೆ ತಾಳಲಾರದೆ ಬೆಳೆಗಳ ಕೀಟನಾಶಕ ಸೇವಿಸಿ ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಯಾದಗಿರಿ ಜಿಲ್ಲೆಯ ಹುಣಸಗಿ ತಾಲ್ಲೂಕಿನಲ್ಲಿ ವರದಿಯಾಗಿದೆ.
ಯಡಹಳ್ಳಿ ಗ್ರಾಮದ ದೇವಿಂದ್ರಪ್ಪ ತಂದೆ ಕೃಷ್ಣಪ್ಪ ಟೇಲರ್ (46) ಆತ್ಮಹತ್ಯೆ ಮಾಡಿಕೊಂಡಿರುವ ದುರ್ದೈವಿಯಾಗಿದ್ದು, ಸುರಪುರದ ಕರ್ನಾಟಕ ಬ್ಯಾಂಕ್ ನಲ್ಲಿ 10 ಲಕ್ಷ ಸಾಲ, ಖಾಸಗಿ ವ್ಯಕ್ತಿಗಳ ಹತ್ತಿರ 10 ಲಕ್ಷ ರೂ. ಕೈ ಸಾಲ ಮಾಡಿಕೊಂಡಿದ್ದನೆಂದು ತಿಳಿದು ಬಂದಿದೆ.
ಸಮಯಕ್ಕೆ ಸರಿಯಾಗಿ ಮಳೆ ಬಾರದೆ ತೀವ್ರ ಬರ ಆವರಿಸಿರುವ ಹಿನ್ನೆಲೆಯಲ್ಲಿ ಬಿತ್ತಿದ ಬೆಳೆ ಸರಿಯಾಗಿ ಕೈ ಸೇರದೆ ಮೈ ತುಂಬಾ ಸಾಲ ಮಾಡಿಕೊಂಡು ದಿಕ್ಕು ತೋಚದಾಗಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದ್ದು ಹೆಂಡತಿ ಮತ್ತು 03 ಜನ ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.




















