
ಬಳ್ಳಾರಿಯ ಹೆಡ್ ಕಾನ್ಸ್ಟೇಬಲ್ ರಮೇಶ್ ಕುಮಾರ್ ಇಂದು ನಗರಕ್ಕೆ ವಾಪಸ್.
ಬಳ್ಳಾರಿ ಜಿಲ್ಲಾ ಪೊಲೀಸ್ ಇಲಾಖೆಯ ಹೆಡ್ ಕಾನ್ಸ್ಟೇಬಲ್ ಹಾಗೂ ಮಾಜಿ ರಾಜ್ಯಸಭಾ ಸದಸ್ಯ ಶ್ರೀ ಕೆ.ಸಿ. ಕೊಂಡಯ್ಯ ಅವರ ಅಂಗರಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀ ಎಂ. ರಮೇಶ್ ಕುಮಾರ್ ಅವರು ಹಿಮಾಲಯದ 5,289 ಮೀಟರ್ (17,352 ಅಡಿ) ಎತ್ತರದಲ್ಲಿರುವ ಫ್ರೆಂಡ್ಶಿಪ್ ಪೀಕ್ (Friendship Peak) ಶಿಖರವನ್ನು ಯಶಸ್ವಿಯಾಗಿ ಆರೋಹಣ ಮಾಡಿ ಇಂದು ಬಳ್ಳಾರಿ ನಗರಕ್ಕೆ ಆಗಮಿಸುತ್ತಿದ್ದಾರೆ.
ಸಾಹಸಮಯ ಹಾಗೂ ಕ್ರಿಯಾಶೀಲ ವ್ಯಕ್ತಿತ್ವದ ರಮೇಶ್ ಕುಮಾರ್ ಅವರು ಕಳೆದ ವರ್ಷ ಬಳ್ಳಾರಿಯಿಂದ ಲೇಹ್–ಲಡಾಖ್ವರೆಗೆ ಬೈಕ್ ರೈಡ್ ಮೂಲಕ ತೆರಳಿ ಹೆಲ್ಮೆಟ್ ಜಾಗೃತಿ ಅಭಿಯಾನ ನಡೆಸಿದ್ದರು. ಅವರ ಈ ಸಮಾಜಮುಖಿ ಹಾಗೂ ಸಾಹಸಮಯ ಕಾರ್ಯವನ್ನು ಗುರುತಿಸಿದ ಜಿಲ್ಲಾ ಆಡಳಿತವು ಅವರನ್ನು ಗೌರವಿಸಿ ಸನ್ಮಾನಿಸಿತ್ತು.
ಎವರೆಸ್ಟ್ ಏರುವ ಗುರಿಯತ್ತ ಮತ್ತೊಂದು ಹೆಜ್ಜೆ
2028ರಲ್ಲಿ ವಿಶ್ವದ ಅತಿ ಎತ್ತರದ ಶಿಖರವಾದ ಮೌಂಟ್ ಎವರೆಸ್ಟ್ ಆರೋಹಣ ಮಾಡುವ ಗುರಿಯನ್ನು ಹೊಂದಿರುವ ರಮೇಶ್ ಕುಮಾರ್ ಅವರು, ಈ ನಿಟ್ಟಿನಲ್ಲಿ ಹಿಮಾಚಲ ಪ್ರದೇಶದಲ್ಲಿ ನಡೆದ 40 ದಿನಗಳ ಕಠಿಣ ತರಬೇತಿಯನ್ನು ಪೂರ್ಣಗೊಳಿಸಿದ್ದಾರೆ. ತರಬೇತಿಯ ಭಾಗವಾಗಿ ಹಿಮಾಲಯದ ಪ್ರಮುಖ ಎತ್ತರದ ಶಿಖರಗಳಲ್ಲಿ ಒಂದಾದ ಫ್ರೆಂಡ್ಶಿಪ್ ಪೀಕ್ ಅನ್ನು ಯಶಸ್ವಿಯಾಗಿ ಏರಿ ತಮ್ಮ ಸಾಹಸ ಸಾಮರ್ಥ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.
ಕುದುರೆ ಸವಾರಿ, ಬೈಕ್ ರೈಡಿಂಗ್, ಚಾರಣ, ಹೆಲ್ಮೆಟ್ ಜಾಗೃತಿ ಅಭಿಯಾನ ಸೇರಿದಂತೆ ವಿವಿಧ ಸಾಹಸ ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ರಮೇಶ್ ಕುಮಾರ್ ಅವರು, ತಮ್ಮ ವಿಭಿನ್ನ ಸಾಧನೆಗಳ ಮೂಲಕ ಯುವಜನತೆಗೆ ಸಾಹಸ, ಶಿಸ್ತು ಮತ್ತು ಸಾಮಾಜಿಕ ಜವಾಬ್ದಾರಿಯ ಸಂದೇಶವನ್ನು ನೀಡುತ್ತಿದ್ದಾರೆ.
ಸ್ನೇಹಿತರ ಬಳಗದಿಂದ ಅದ್ದೂರಿ ಸ್ವಾಗತ
ಫ್ರೆಂಡ್ಶಿಪ್ ಪೀಕ್ ಶಿಖರಾರೋಹಣದ ಯಶಸ್ಸಿನ ಬಳಿಕ ಇಂದು ಸಂಜೆ 6:30ರ ಸುಮಾರಿಗೆ ಬಳ್ಳಾರಿ ನಗರಕ್ಕೆ ಆಗಮಿಸಲಿರುವ ರಮೇಶ್ ಕುಮಾರ್ ಅವರನ್ನು ಸ್ವಾಗತಿಸಲು ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳ ಅವರ ಸ್ನೇಹಿತರ ಬಳಗ ಸಜ್ಜಾಗಿದೆ.
ರಮೇಶ್ ಕುಮಾರ್ ಅವರ ಈ ಸಾಧನೆ ಬಳ್ಳಾರಿ ಜಿಲ್ಲೆಯ ಹೆಮ್ಮೆಯ ಸಂಗತಿಯಾಗಿದೆ. ಅವರ ಸಾಹಸಮಯ ಸಾಧನೆ ಮುಂದಿನ ಪೀಳಿಗೆಯ ಯುವಕರಿಗೆ ಪ್ರೇರಣೆಯಾಗಲಿ ಎಂದು ಬಳ್ಳಾರಿ–ವಿಜಯನಗರ ಜಿಲ್ಲೆಯ ರಮೇಶ್ ಕುಮಾರ್ ಸ್ನೇಹಿತರ ಬಳಗ ಶುಭ ಹಾರೈಸಿದೆ.
ವರದಿ : ಜಿಲಾನಸಾಬ್ ಬಡಿಗೇರ್




















