ಬಳ್ಳಾರಿ / ಕಂಪ್ಲಿ: ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯ ದುರ್ನಡತೆ, ದೌರ್ಜನ್ಯ ಮತ್ತು ಅಕ್ರಮ ಬಂಧನದಂತಹ ಗಂಭೀರ ಪ್ರಕರಣಗಳ ವಿರುದ್ಧ ಸಾರ್ವಜನಿಕರು ಯಾವುದೇ ಭಯವಿಲ್ಲದೆ ಪೊಲೀಸ್ ದೂರುಗಳ ಪ್ರಾಧಿಕಾರಕ್ಕೆ ದೂರು ಸಲ್ಲಿಸಬಹುದು ಎಂದು ಕರ್ನಾಟಕ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರದ ಸದಸ್ಯ ಮೋಹನ್ ಕುಮಾರ್ ದಾನಪ್ಪ ತಿಳಿಸಿದ್ದಾರೆ.
ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಅಧಿಕಾರಿಗಳ ಹುದ್ದೆಗೆ ಅನುಗುಣವಾಗಿ ದೂರು ಸಲ್ಲಿಸುವ ವಿಧಾನವನ್ನು ಸ್ಪಷ್ಟಪಡಿಸಿದ್ದಾರೆ. ಹೆಚ್ಚುವರಿ ಪೊಲೀಸ್ ಅಧೀಕ್ಷಕರು (ASP) ಹಾಗೂ ಅದಕ್ಕಿಂತ ಮೇಲ್ದರ್ಜೆಯ ಹಿರಿಯ ಅಧಿಕಾರಿಗಳ ವಿರುದ್ಧದ ದೂರುಗಳನ್ನು ಬೆಂಗಳೂರಿನಲ್ಲಿರುವ ‘ಕರ್ನಾಟಕ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರ’ಕ್ಕೆ ಸಲ್ಲಿಸಬೇಕು. ಅದೇ ರೀತಿ, ಡಿವೈಎಸ್ಪಿ ಹಾಗೂ ಅದಕ್ಕಿಂತ ಕೆಳದರ್ಜೆಯ ಅಧಿಕಾರಿ ಮತ್ತು ಸಿಬ್ಬಂದಿ ವಿರುದ್ಧದ ದೂರುಗಳನ್ನು ಆಯಾ ಜಿಲ್ಲೆಯ ‘ಜಿಲ್ಲಾ ಪೊಲೀಸ್ ದೂರುಗಳ ಪ್ರಾಧಿಕಾರ’ಕ್ಕೆ ನೀಡಬೇಕು ಎಂದು ಅವರು ವಿವರಿಸಿದ್ದಾರೆ.
ದೂರು ಸಲ್ಲಿಸುವ ಸಾರ್ವಜನಿಕರು ತಮ್ಮ ದೂರುಗಳನ್ನು ಅಂಚೆ ಮೂಲಕ ಅಥವಾ ಖುದ್ದಾಗಿ ಈ ಕೆಳಗಿನ ವಿಳಾಸಕ್ಕೆ ಸಲ್ಲಿಸಬಹುದು :
ಕರ್ನಾಟಕ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರ,
3ನೇ ಮಹಡಿ, ವಿಶ್ವೇಶ್ವರಯ್ಯ ಮುಖ್ಯ ಗೋಪುರ,
ಡಾ. ಅಂಬೇಡ್ಕರ್ ವೀಧಿ, ಬೆಂಗಳೂರು-560001
ಇದಲ್ಲದೆ,
spca@karnataka.gov.in ಇ-ಮೇಲ್ ಐಡಿ ಮೂಲಕವೂ ದೂರನ್ನು ಕಳುಹಿಸಬಹುದಾಗಿದೆ. ದಾಖಲಾದ ದೂರುಗಳ ವಿಚಾರಣೆ ಹಾಗೂ ಪ್ರಕರಣದ ಪ್ರಸ್ತುತ ಸ್ಥಿತಿಗತಿಯನ್ನು ತಿಳಿಯಲು ಸಾರ್ವಜನಿಕರು 080-22868302, 22868303ಗೆ ಸಂಖ್ಯೆಗಳಿಗೆ ಕರೆ ಮಾಡಿ ಮಾಹಿತಿ ಪಡೆಯಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ವರದಿ : ಜಿಲಾನಸಾಬ್ ಬಡಿಗೇರ್




















