ಸಿರುಗುಪ್ಪ: ಗ್ರಾಮೀಣ ಭಾಗದ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಜನರ ನಡುವೆ ಆತ್ಮೀಯತೆ ಹಾಗೂ ಸಾಮರಸ್ಯವನ್ನು ಬೆಳೆಸುವ ಮಹತ್ವದ ಕೊಂಡಿಗಳಾಗಿವೆ ಎಂದು ಸಿರುಗುಪ್ಪ ವಿಧಾನಸಭಾ ಕ್ಷೇತ್ರದ ಜನಪ್ರಿಯ ಮಾಜಿ ಶಾಸಕ ಎಂ.ಎಸ್. ಸೋಮಲಿಂಗಪ್ಪ ಹೇಳಿದರು.
ತಾಲ್ಲೂಕಿನ ಅಗಸನೂರು ಗ್ರಾಮದ ಸಮೀಪ ಹಮ್ಮಿಕೊಳ್ಳಲಾಗಿದ್ದ ‘ಶ್ರೀ ದೇವಿ ಮಹಾತ್ಮೆ’ ಪ್ರಥಮ ವರ್ಷದ ಪುರಾಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ದೇವಿಯ ದರ್ಶನ ಪಡೆದು ಅವರು ಮಾತನಾಡಿದರು.
ನಮ್ಮ ನಾಡಿನ ಸಾಂಸ್ಕೃತಿಕ ಮೌಲ್ಯಗಳು ಮತ್ತು ಧಾರ್ಮಿಕ ಪರಂಪರೆಯನ್ನು ಉಳಿಸಿಕೊಂಡು ಹೋಗುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಇಂತಹ ಪುರಾಣ ಪ್ರವಚನಗಳು ಗ್ರಾಮೀಣ ಜನರಲ್ಲಿ ಸದ್ವಿಚಾರಗಳನ್ನು ಮೂಡಿಸುತ್ತವೆ. ಕ್ಷೇತ್ರದ ಸಮಸ್ತ ಜನತೆಗೆ ಶ್ರೀ ದೇವಿಯು ಸುಖ, ಶಾಂತಿ ಮತ್ತು ಸಮೃದ್ಧಿಯನ್ನು ಕರುಣಿಸಲಿ ಎಂದು ಅವರು ಈ ಸಂದರ್ಭದಲ್ಲಿ ಪ್ರಾರ್ಥಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕರು ಸ್ಥಳೀಯ ಭಕ್ತಾದಿಗಳು ಹಾಗೂ ಗ್ರಾಮಸ್ಥರೊಂದಿಗೆ ಅತ್ಯಂತ ಆತ್ಮೀಯವಾಗಿ ಬೆರೆತು ಸಂವಾದ ನಡೆಸಿದರು.
ಈ ಧಾರ್ಮಿಕ ಮಹೋತ್ಸವದಲ್ಲಿ ಪ್ರಮುಖ ಮುಖಂಡರಾದ ಮೇಕಲ್ ವೀರೇಶ್, ಶಿವಪ್ಪ, ಬಸವರಾಜ್, ಮಾದಣ್ಣ, ಕುಬೇರ, ಯಲ್ಲಪ್ಪ ಸೇರಿದಂತೆ ಅಗಸನೂರು ಹಾಗೂ ಸುತ್ತಮುತ್ತಲಿನ ಗ್ರಾಮಗಳ ನೂರಾರು ಭಕ್ತರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.
ವರದಿ : ಮಸೀದಿ ಅಬ್ದುಲ್ ಗೌಸ್, ಸಿರುಗುಪ್ಪ




















