ಶತ್ರುತ್ವ ಎನ್ನುವುದು ನಮ್ಮ ಬದುಕಿನ ಸೌಂದರ್ಯವನ್ನೇ ಹಾಳು ಮಾಡಿಬಿಡುತ್ತದೆ. ಶತ್ರುಗಳಲ್ಲಿ ಆಂತರಿಕ ಶತ್ರುಗಳು,ಬಾಹ್ಯ ಶತ್ರುಗಳು ಎಂದು ಎರಡು ರೀತಿಗಳಲ್ಲಿ ನಾವು ಕಾಣಬಹುದು.
ಆಂತರಿಕ ಶತ್ರುಗಳು,ಬಾಹ್ಯ ಶತ್ರುಗಳಿಗಿಂತ ಭಯಾನಕರು.ನಮ್ಮ ಶಾಶ್ವತ ಶತ್ರುಗಳು ಅವರೇ.ಆ ಶಾಶ್ವತ ಶತ್ರುಗಳನ್ನ ಹುಡುಕುತ್ತಾ ಹೋದರೆ ಅವರು ಆಚೆ ಎಲ್ಲೂ ಕಾಣುವುದಿಲ್ಲ.ಬದಲಿಗೆ ನಮ್ಮೊಳಗೆ ಅಡಗಿ ಕುಳಿತಿರುತ್ತಾರೆ.ಅವರೇ ಕಾಮ,ಕ್ರೋಧ, ಲೋಭ,ಮೋಹ,ಮದ,ಮತ್ಸರ ಎಂಬ ಅರಿಷಡ್ವರ್ಗಗಳ ರೂಪದಲ್ಲಿರುತ್ತಾರೆ.ಇವರನ್ನು ಗೆದ್ದರೆ ನಮ್ಮಷ್ಟು ಪರಾಕ್ರಮ ಶಾಲಿಗಳು ಮತ್ತೊಬ್ಬರಿಲ್ಲ ಆದರೆ ಇವರು ನಮ್ಮನ್ನು ಸೋಲಿಸಿ ತಮ್ಮ ನಿಯಂತ್ರಣದಲ್ಲಿ ಇಟ್ಟುಕೊಂಡಿರುತ್ತಾರೆ ನಮಗೆ ತಿಳಿಯದ ಹಾಗೆ ಆಟಆಡಿಸುತ್ತಾ ತಮಗೆ ಬಂದಂತೆ ನಮ್ಮನ್ನ ಕುಣಿಸಿಕೊಳ್ಳುತ್ತಾರೆ,ಬಾಹ್ಯ ಶತ್ರು ಎಷ್ಟೇ ಪ್ರಬಲನಾಗಿದ್ದರೂ ಅವನನ್ನ ಗೆಲ್ಲಬಹುದು ಆದರೆ ಆಂತರಿಕ ಶತ್ರುಗಳನ್ನ ಸಾಮಾನ್ಯರಾದ ನಮ್ಮಿಂದ ಗೆಲ್ಲುವುದು ಬಹಳ ಕಠಿಣ ಅನೇಕಯೋಗಿಗಳೇ ಕೆಲವು ಬಾರಿ ಇವರ ಎದುರು ಸೋತು ಹೋಗಿದ್ದಾರೆ. ಇನ್ನು ನಾವು ನೀವು ಯಾವಲೆಕ್ಕ ಇವರನ್ನು ಹಣ ಅಂತಸ್ತು ಖಡ್ಗ ಅಥವಾ ಇನ್ಯಾವುದೇ ಆಯುಧಗಳನ್ನ ಬಳಸಿ ಗೆಲ್ಲಲಾಗದು ಜ್ಞಾನ ತಪಸ್ಸಿನಿಂದ ಮಾತ್ರ ಇವರನ್ನು ಗೆಲ್ಲಬಹುದು. ಈ ಆಂತರಿಕ ಶತ್ರುಗಳನ್ನ ಗೆದ್ದವರು ನಮ್ಮ ದೇಶದ ಪರಂಪರೆಯ ಇತಿಹಾಸದಲ್ಲಿ ಅನೇಕರನ್ನು ಕಾಣುತ್ತೇವೆ ಇಂದಿನ ಯುಗದಲ್ಲಿ ಅಂತಹ ತಪಸ್ವಿಗಳು ಸಿಗುವುದು ಅಪರೂಪ ಇಂದು ಅಂತವರು ಇಲ್ಲವೇ ಇಲ್ಲ ಎಂದು ಹೇಳಲಾಗದು ನಮ್ಮ ಕಣ್ಣೆದುರೇ ಇರುತ್ತಾರೆ ಇಂದ್ರಿಯಗಳನ್ನು ಗೆದ್ದ ಮಹಾತ್ಮರು ಆದರೆ ಅವರ ಅರಿವೇ ನಮಗಾಗುವುದಿಲ್ಲ,ಕೆಲವು ಬಾರಿ ಆದರೂ ಬಹಳ ಸಮಯದ ನಂತರವೇ…
ನೀವು ಯಾವುದೇ ಹಂತದಲ್ಲಾದರೂ ತೆಗೆದುಕೊಳ್ಳಿ ಆಂತರಿಕ ಶತ್ರುಗಳೇ ಆಘಾತಕಾರಿಗಳು.ಉದಾಹರಣೆಗೆ ಭಾರತವನ್ನೇ ತೆಗೆದುಕೊಳ್ಳಿ ಈ ದೇಶದ ಸುತ್ತಲಿರುವ ಪಾಕಿಸ್ತಾನ,ಚೀನಾ, ಬಾಂಗ್ಲಾದೇಶಗಳು ಬಾಹ್ಯ ಶತ್ರುಗಳಾದರೆ,ಭಾರತದೊಳಗೆ ಇದ್ದುಕೊಂಡು ಈ ನೆಲದ ಅನ್ನ ತಿಂದು,ನೀರು ಕುಡಿದು ಈ ದೇಶದ ವಿರುದ್ಧ ಸಂಚುರೂಪಿಸಿ ಭಾರತೀಯರಂತೆಯೇ ವೇಷಹಾಕಿ ಪ್ರತಿ ಹೆಜ್ಜೆಯಲ್ಲೂ ಈ ದೇಶದ ಬಗ್ಗೆ ಕುತಂತ್ರ ಮಾಡುವ ದೇಶದ್ರೋಹಿಗಳು ಆ ಪಾಕಿಸ್ತಾನ,ಚೀನಾ,ಬಾಂಗ್ಲಾದೇಶದ ಬಾಹ್ಯ ಶತ್ರುಗಳಿಗಿಂತಲೂ ಡೇಂಜರ್ ವಿದೇಶಿ ಶತ್ರುಗಳು ಯಾರೆಂದು ತಿಳಿಯುತ್ತದೆ,ಅವರು ದಾಳಿ ಮಾಡುತ್ತಿರುವುದು ಗೊತ್ತಾಗುತ್ತದೆ,ಆ ದಾಳಿಗೆ ಪ್ರತಿ ದಾಳಿ ಮಾಡಬಹುದು ಆದರೆ ಒಳಗಿನ ಶತ್ರುಗಳು ಯಾವ ರೂಪದಲ್ಲಿರುತ್ತಾರೆ ಎನ್ನುವುದೇ ತಿಳಿಯಲಾಗದು ಅವರ ದಾಳಿ ಹೇಗೆ ನಡೆಯುತ್ತದೆ ಅನ್ನೋದೇ ಅರ್ಥವಾಗುವುದಿಲ್ಲ ಒಂದು ವೇಳೆ ಕೆಲವು ಬಾರಿ ಅರ್ಥವಾದರೂ ನಮ್ಮಿಂದ ಏನೂ ಮಾಡಲಾಗದು ಹೇಗೆ ಒಂದು ದೇಶಕ್ಕೆ ಒಳಗಿನ ಶತ್ರುಗಳೇ ಕಂಟಕಪ್ರಾಯರೊ ಹಾಗೆ ಮನುಷ್ಯನಿಗೂ ಹೊರಗಿನ ವೈರಿಗಳಿಗಿಂತ ತನ್ನೊಳಗೆ ಇರುವ ಕಾಮ ಕ್ರೋಧಗಳೆಂಬ ರಜೋಗುಣಗಳೇ ಮಹಾಶತ್ರುಗಳು.
ಒಂದು ದೇಶ ತನ್ನೊಳಗಿನ ಶತ್ರುಗಳನ್ನು ಸಂಹಾರ ಮಾಡಿದರೆ ಬಾಹ್ಯ ಶತ್ರುಗಳಿಗೆ ಹೆದರುವ ಅವಶ್ಯಕತೆಯ ಇಲ್ಲ ಹಾಗೆಯೇ ಮನುಷ್ಯನು ತನ್ನೊಳಗಿನ ಶತ್ರುಗಳನ್ನ ಗೆದ್ದುಬಿಟ್ಟರೆ ಮತ್ತೊಬ್ಬರು ಮಾಡುವ ಸನ್ಮಾನ ಅವಮಾನಗಳ ಭಯವೇ ಇರುವುದಿಲ್ಲ ಆ ಆಂತರಿಕ ಶತ್ರುಗಳನ್ನು ನಮ್ಮಿಂದ ಗೆಲ್ಲಲು ಸಾಧ್ಯವೇ ಇಲ್ಲ ಎಂದೇನಲ್ಲ ನಾವು ಶ್ರದ್ಧೆಯ ತಪಸ್ಸಿನಿಂದ,ಪ್ರಾಮಾಣಿಕ ಗುರುಸೇವೆಯಿಂದ ಗೆಲ್ಲಬಹುದು.
ನಮ್ಮೊಳಗೆ ಆ ರಜೋಗುಣಗಳು ಹೇಗಿದೆ ಎಂದು ಭಗವಂತ ಶ್ರೀ ಕೃಷ್ಣ ಗೀತೆಯಲ್ಲಿ ಹೇಳುತ್ತಾನೆ ಹೊಗೆಯ ಪ್ರಾಬಲ್ಯದಿಂದ ಕಾಣದಂತಿರುವ ಬೆಂಕಿ,ಧೂಳಿನ ಕಣಗಳಿಂದ ಮಲಿನವಾದ ಕನ್ನಡಿಯಲ್ಲಿ ಮುಖ ಕಾಣದಂತಿರುವುದು,ತಾಯಿಯ ಗರ್ಭದೊಳಗೆ ಮಗು ಹೇಗಿರುತ್ತದೆಯೋ ಹಾಗೆ ನಮ್ಮೊಳಗಿನ ಜ್ಞಾನವು ಕಾಮಕ್ರೋದಗಳೆಂಬ ರಜೋಗುಣಗಳಿಂದ ಮುಚ್ಚಲ್ಪಟ್ಟಿದೆ.ಹೊಗೆಯನ್ನು ಇಲ್ಲವಾಗಿಸಿದ ನಂತರ ಬೆಂಕಿಯನ್ನು ಕಾಣಬಹುದು, ಕನ್ನಡಿಯ ಮೇಲಿನ ಮಲಿನತೆಯ ತೆಗೆದ ನಂತರ ಅದರಲ್ಲಿ ಮುಖವನ್ನು ನೋಡಬಹುದು,ಸಮಯಕಾನುಸಾರವಾಗಿ ತಾಯಿಯ ಗರ್ಭದೊಳಗಿನ ಮಗು ಹೊರ ಪ್ರಪಂಚಕ್ಕೆ ಬರುತ್ತದೆ ಹಾಗೆ ನಮ್ಮೊಳಗಿನ ಕಾಮ ಕ್ರೋಧಗಳೆಂಬ ರಜೋಗುಣಗಳನ್ನ ಗೆದ್ದರೆ ಜ್ಞಾನವು ತ್ಯಾನಾಗೆ ಪ್ರಕಾಶಿಸುತ್ತದೆ. ಒಮ್ಮೆ ಅವುಗಳನ್ನ ಗೆದ್ದರೆ ಮತ್ತೆ ಯಾವುದರ ಭಯವೂ ಇರುವುದಿಲ್ಲ ಜಗತ್ತನ್ನ ಗೆಲ್ಲುವ ಪ್ರಮೇಯವೇ ಬರುವುದಿಲ್ಲ ಏಕೆಂದರೆ ಜಗತ್ತೇ ಆತನೆದುರು ಶರಣಾಗತವಾಗಿ ಬಿಡುತ್ತದೆ.
– ಶ್ರೀ ರಾಮಕೃಷ್ಣ ದೇವರು. ಮರೇಗುದ್ದಿ,ಮೋ 6364111512
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.
One Response
h909g1