ತುಮಕೂರು/ಕುಣಿಗಲ್:- ತಾಲ್ಲೂಕಿನ ಮಡಿಕೆಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕೆಗೌಡನಪಾಳ್ಯ ಗ್ರಾಮದಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ಬಸ್ ಗಳು ನಿಗದಿತ ಸಮಯಕ್ಕಿಂತ 15 ರಿಂದ 30 ನಿಮಿಷಗಳು ತಡವಾಗಿ ಬರುತ್ತಿದ್ದು ಸೂಕ್ತ ಸಮಯಕ್ಕೆ ಶಾಲಾ ಕಾಲೇಜು ತಲುಪುವುದು ಕಷ್ಟವಾಗುತ್ತದೆ ಹಾಗೂ ಇದರಿಂದಾಗಿ ಕನಿಷ್ಠ ಒಂದು ತಾಸು ತರಗತಿಗೆ ತಡವಾಗುವುದಲ್ಲದೆ ಇದಕ್ಕೆ ಶಿಕ್ಷೆ ಕೂಡ ಅನುಭವಿಸಬೇಕಾಗಿದೆ ಎಂದು ಬಸ್ ತಡೆದು ಪ್ರತಿಭಟಸಿ ಆಕ್ರೋಶ ವ್ಯಕ್ತಪಡಿಸಿದರು. ಇನ್ನೂ ಈ ವೇಳೆ ಮಾತನಾಡಿದ ವಿದ್ಯಾರ್ಥಿಗಳು ಬಸ್ ಗಳು ತಡವಾಗಿ ಬರುವುದಲ್ಲದೆ, ಈ ಗ್ರಾಮ ತಲುಪುವುದರೊಳಗೆ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿಗೆ ಭರ್ತಿಯಾಗುತ್ತಿದ್ದು ಗುನ್ನಾಗರೆ ಗ್ರಾಮದಿಂದ ಚಿಕ್ಕೆಗೌಡನಪಾಳ್ಯ ತಲುಪುವುದರೊಳಗೆ ವಿದ್ಯಾರ್ಥಿಗಳಿಗೆ ನಿಲ್ಲಲು ಸಾಧ್ಯವಾಗದಷ್ಟು ಜನಸಂದಣಿ ತುಂಬಿರುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದೇ ವೇಳೆ ನಮ್ಮ ಕರುನಾಡ ಕಂದ ಪತ್ರಿಕೆಯ ವರದಿಗಾರ ಮನು ಕುಮಾರ್ ಅವರೊಂದಿಗೆ ಮಾತನಾಡಿದ ಚಾಲಕ ಸಿಬ್ಬಂದಿ ತಾಲೂಕಿನಲ್ಲಿ ಬಸ್ಸುಗಳ ಕೊರತೆ ಯಥೇಚ್ಛವಾಗಿದ್ದು ಇತರೆ ಮಾರ್ಗಗಳನ್ನು ಮುಗಿಸಿ ನಂತರ ಈ ಮಾರ್ಗವಾಗಿ ಬರಬೇಕಾಗಿದೆ ಬಹುತೇಕ ಬಸ್ ಗಳು ಇದೆ ರೀತಿ ಕಾರ್ಯನಿರ್ವಹಿಸುತ್ತಿವೆ. ಇದಲ್ಲದೆ ಸರ್ಕಾರದ ಶಕ್ತಿ ಯೋಜನೆ ಪ್ರಭಾವದಿಂದ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಬಸ್ಸುಗಳ ಸಮಯ ಏರುಪೇರು ಆಗುತ್ತಿದೆ ಎಂದು ತಮ್ಮ ಅಸಹಾಯಕತೆ ತೋಡಿಕೊಂಡರು.
ಈ ವೇಳೆ ಪ್ರತಿಕ್ರಿಯೆ ನೀಡಿದ ಗ್ರಾಮ ಪಂಚಾಯಿತಿ ಸದಸ್ಯ ವೆಂಕಟೇಶ್ ಎಂ(ರಾಜಹುಲಿ) ಅವರು ಈ ವಿಚಾರವನ್ನು ಶಾಸಕರ ಗಮನಕ್ಕೆ ತಂದು ಸಾರಿಗೆ ಇಲಾಖೆ ಮೂಲಕ ಬಸ್ಸುಗಳ ಸಂಖ್ಯೆ ಹೆಚ್ಚಿಸುವ ಪ್ರಯತ್ನ ಮಾಡುವುದಾಗಿ ತಿಳಿಸಿದರು.
ತದನಂತರ ಸ್ಥಳೀಯರ ಮಾರ್ಗದರ್ಶನದಂತೆ ಬಸ್ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟ ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ಈ ಸಮಸ್ಯೆ ಬಗೆಹರಿಯದಿದ್ದರೆ ತೀವ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ವರದಿ- ಮನು ಕುಮಾರ್