ಚಿಟಗುಪ್ಪ: ಕೋಟಿ ಕಂಠಗಾಯನ,ಕನ್ನಡ ರಾಜ್ಯೋತ್ಸವ ಆಚರಣೆಯ ಸಂದರ್ಭದ ವೇದಿಕೆ ಮೇಲೆ ಒಂದು ಸಂಘಟನೆಯವರಿಗೆ ಮಾತ್ರ ಅವಕಾಶ ನೀಡಿ, ಇನ್ನುಳಿದ ಸಂಘಟನೆಗಳಿಗೆ ಅಗೌರವ ತೋರಿದ ತಾಲೂಕಿನ ತಹಸೀಲ್ದಾರ್ ರವರ ಈ ನಡೆ ಖಂಡನೀಯವಾಗಿದ್ದು. ಮುಂಬರುವ ದಿನಗಳಲ್ಲಿ ಇವರ ವಿರುದ್ಧ ಉಗ್ರ ಹೋರಾಟ ಮಾಡಲಾಗುವುದು ಎಂದು ಸಾಮಾಜಿಕ ಕಾರ್ಯಕರ್ತ ಚಂದ್ರಶೇಖರ ನಾರಾಯಣಪೇಟ ಯವರು ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸದ್ದುಗದ್ದಲವಿಲ್ಲದೆ ಸಾಮಾಜಿಕ ಅಭಿವೃದ್ಧಿ ಕಾರ್ಯಗಳು ಮಾಡುತ್ತಿರುವ ಹಲವು ಸಂಘಟನೆಗಳು ನಮ್ಮ ತಾಲೂಕಿನಲ್ಲಿ ಇವೆ. ಅವುಗಳಲ್ಲಿ ಪ್ರಮುಖವಾದವೆಂದರೆ ತಾಲೂಕು ಶರಣ ಸಾಹಿತ್ಯ ಪರಿಷತ್ತು, ಕರ್ನಾಟಕ ಜಾನಪದ ಪರಿಷತ್ತು, ಕಲ್ಯಾಣ ಕರ್ನಾಟಕ ಸಾಹಿತ್ಯ ಪರಿಷತ್ತು ಸೇರಿದಂತೆ ಇನ್ನಿತರ ಸೇವಾ ಸಂಘಗಳು
ಸಾಹಿತ್ಯ, ಸಾಂಸ್ಕೃತಿಕ,ನಾಡು ನುಡಿ ನೆಲ ಜಲ ಭಾಷೆ ಗಡಿ ವಿಚಾರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ತಾಲೂಕಿನ ಸರ್ವಾಂಗೀಣ ಉನ್ನತಿಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಇಂತಹ ಜನಪರ,ಸಮಾಜಪರ, ನಾಡಿನ ಪರ ಇರುವ ಪರಿಷತ್ತಿನ ಪದಾಧಿಕಾರಿಗಳಿಗೆ ಅಗೌರವ ತೋರಿದ್ದು, ನಾಗರಿಕ ಸಮಾಜ ಉಗ್ರವಾಗಿ ಖಂಡಿಸುತ್ತದೆ.
ಅಲ್ಲದೇ ಇಂತಹ ಕಾರ್ಯಕ್ರಮಗಳಲ್ಲಿ ಸಾಹಿತಿಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ,ಅಪಮಾನ ಮಾಡಿದ್ದಾರೆ. ಕೇವಲ ಕೇವಲ ಒಂದು ಸಂಘಟನೆಗೆ ಮಾತ್ರ ಗೌರವ ನೀಡಿ, ಇನ್ನುಳಿದ ಸಂಘಟನೆಗಳಿಗೆ ಅಗೌರವ ನೀಡಿದ್ದು ಖಂಡನೀಯ ನಡೆ,ಬೇಸರದ ಸಂಗತಿ.
ಯಾರೋ ಒಂದಿಬ್ಬ ಕಿಡಿಗೇಡಿಗಳು ಅವರ ಸ್ವಾರ್ಥಕ್ಕೆ
ತಾಲೂಕಾಡಳಿತ ಬಳಸಿಕೊಂಡು, ತಾಲೂಕಿಗೆ ಕೆಟ್ಟ ಹೆಸರು ತರುವ ಕೆಲಸ ಮಾಡುತ್ತಿದ್ದಾರೆ. ಇವರ ಮಾತು ಕೇಳಿಕೊಂಡು ಇನ್ನುಳಿದ ಸಂಘಟನೆಗಳಿಗೆ ತಹಸೀಲ್ದಾರರು ಅಗೌರವಿಸಿದ್ದು ತಪ್ಪು. ತಾಲೂಕು ಜನರಿಗೆ ಹಾಗೂ ಸಂಘಟನೆಗಳಿಗೆ ಮಾಡಿದ ದೊಡ್ಡ ಅವಮಾನವಾಗಿದೆ. ಒಂದು ಸಂಘಟನೆಯವರಿಗೆ ಮಾತ್ರ ಗೌರವ ಕೊಡುತ್ತೇನೆ ಎಂದರೆ ಸಹಿಸಿಕೊಳ್ಳುವುದಿಲ್ಲ. ಒಂದು ಸಂಘಟನೆಯವರಿಗೆ ಮಾತ್ರ ಅವಕಾಶ ನೀಡಬೇಕು ಎಂದು ಯಾವ ಕಾನೂನು ಅಡಿಯಲ್ಲಿ ಹೇಳಿರುವುದಿಲ್ಲ. ಯಾವ ಆದೇಶದಲ್ಲಿಯೂ
- ಸುತ್ತೋಲೆಯಲ್ಲಿ ಖಂಡಿತವಾಗಿಯೂ ಇಲ್ಲವೇ ಇಲ್ಲ. ಲಿಖಿತ ರೂಪದಲ್ಲಿ ಸರ್ಕಾರದ ಆದೇಶ ಖಂಡಿತಾ ಇದ್ದರೆ ತಿಳಿಸಿ. ಅದನ್ನು ಗೌರವದಿಂದ ಸ್ವೀಕರಿಸುತ್ತೇವೆ.
ಮರ್ಯಾದೆ ಕೊಡುವುದಾದರೆ ಎಲ್ಲಾ ಪರಿಷತ್ತಿನ ಸಂಘಟನೆಗಳಿಗೆ ಗೌರವ ನೀಡುವ ಕೆಲಸ ಮಾಡಿ, ಅದು ಬಿಟ್ಟು ರಾಜಕೀಯ ಮಾಡಬೇಡಿ. ಅಲ್ಲದೇ ಆಚರಣೆ ಕಾರ್ಯಕ್ರಮಗಳು ಅತ್ಯಂತ ನಿರಾಸಕ್ತಿ ಜೊತೆಗೆ ಬೇಜವಾಬ್ದಾರಿಗಳಿಂದ ನಡೆಯುತ್ತಿವೆ. ಇದು ಸರಿಯಾದ ಕ್ರಮವಲ್ಲ.
ಈ ನಿಟ್ಟಿನಲ್ಲಿ ತಹಸೀಲ್ದಾರರು ತಾಲೂಕಿನ ಜನತೆಯ ಕ್ಷಮೆ ಕೇಳಬೇಕು. ಆಗಿರುವ ತಪ್ಪುಗಳನ್ನು ಸರಿಪಡಿಸಿಕೊಂಡು, ನ್ಯಾಯ ಬದ್ಧವಾಗಿ ನಡೆದುಕೊಂಡು, ತಾಲೂಕಿಗೆ ಶೋಭೆ ತರುವ ಕೆಲಸ ಮಾಡಬೇಕು.ಇಲ್ಲವಾದಲ್ಲಿ ಇವರ ವಿರುದ್ಧ ಉಗ್ರ ಹೋರಾಟ ಮಾಡಲಾಗುವುದು ಎಂದು ಸಾಮಾಜಿಕ ಕಾರ್ಯಕರ್ತ, ಕನ್ನಡ ಪರ ಹೋರಾಟಗಾರ ಚಂದ್ರಶೇಖರ ನಾರಾಯಣಪೇಟ ಯವರು ತಿಳಿಸಿದ್ದಾರೆ.