ಸುಖಿ ಸಂಸಾರಕ್ಕೆ ಗಂಡ ಹೆಂಡತಿ ಹೇಗಿರಬೇಕು?
ವಿವಾಹ ವಿಚ್ಚೇದನ, ಕೌಟಂಬಿಕ ಕಲಹಗಳ ಮಧ್ಯೆ ಭಾರತೀಯ ಸಂಸ್ಕೃತಿ ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಇರುವ ಈ ಸಂದರ್ಭದಲ್ಲಿ ವೇಮನರ ವಿಚಾರಗಳು ಪ್ರಸ್ತುತವಾಗಿವೆ.ಅದರಲ್ಲೂ ಗಂಡ ಹೆಂಡತಿ ಹೇಗಿರಬೇಕೆಂದು ವೇಮನರು ಹೊಸ ಆಲೋಚನೆಗಳನ್ನು ನೀಡುತ್ತಾರೆ ಇದೇ ಜನೇವರಿ 19 ರಂದು ವೇಮನರ ಜಯಂತಿ ಈ ನಿಮಿತ್ಯ ಲೇಖನ.
ವೇಮನರು ಅರಸು ಪುತ್ರನಾಗಿದ್ದರೂ ಎಲ್ಲವನ್ನು ತೊರೆದು ಊರೂರು ಸುತ್ತಿ ಜನರ ಸಮಸ್ಯೆಗಳನ್ನು ಸ್ವತಃ ಕಣ್ಣಾರೆ ಕಂಡು ಕಾವ್ಯವನ್ನು ಬರೆದಿದ್ದಾರೆ.ಆತ ಅಡವಿಗೆ ಹೋಗಿ ತಪಸ್ಸು ಮಾಡಲಿಲ್ಲ,ಜನರ ಮಧ್ಯೆ ಸಾಮಾನ್ಯ ಮನುಷ್ಯನಂತೆ ಬಾಳಿದ್ದಲ್ಲದೆ ಇದ್ದುದನ್ನು ಇದ್ದಂತೆ ಹೇಳಿದ್ದಾರೆ. ಗಂಡ ಹೆಂಡತಿ ಹೇಗಿರಬೇಕು ಸುಖ ಸಂಸಾರಕ್ಕೆ ಹೆಂಡತಿ ಎಷ್ಟು ಅವಶ್ಯ ಎಂಬುದರ ಬಗ್ಗೆ ಇಲ್ಲಿ ಬೆಳಕು ಚೆಲ್ಲಲಾಗಿದೆ.
ಮಹಾ ಯೋಗಿ ವೇಮನರು ಮಾನವನ ಬದುಕಿನ ಎಲ್ಲಾ ಕ್ಷೇತ್ರಗಳ ಬಗ್ಗೆ ವಿಶ್ಲೇಷಿಸಿದ್ದಾರೆ.ಆಡು ಮಟ್ಟದ ಗಿಡವಿಲ್ಲ ವೇಮನ ವಿಶ್ಲೇಷಣೆ ಮಾಡದ ಕ್ಷೇತ್ರವಿಲ್ಲ ಎಂದು ಹೇಳುತ್ತಾರೆ ಮನುಷ್ಯ ಸುಖದಿಂದ ಇರಬೇಕಾದರೆ ಗಂಡ-ಹೆಂಡತಿ,ಅಣ್ಣ-ತಮ್ಮ, ತಂದೆ-ತಾಯಿ,ಸಂಬಂದಿಕರು, ಸ್ನೇಹಿತರು, ಹಿತೈಷಿಗಳು, ವೈರಿಗಳು ಮುಂತಾದವರೊಡನೆ ಹೇಗಿರಬೇಕೆಂದು ವಿಶ್ಲೇಷಿಸಿದ್ದಾರೆ.ಮನುಷ್ಯನು ಪಡುವ ಕಷ್ಠಗಳನ್ನು ಸ್ವತಃ ನೋಡಿ ತಮ್ಮ ಕಾವ್ಯದ ಮೂಲಕ ಎಚ್ಚರಿಸಿದ್ದಾರೆ.
ಒಂದಾದ ದಂಪತಿಗಳು ಚಂದದ ಸಂಸಾರ,
ನಂದನನ ನಡೆನುಡಿ ನಂದಿನಿಯೊಳು;
ಸತಿಗಿತ್ತಿ ರಕ್ಷಣೆಯು ಸ್ವಂತಕ್ಕೆ ರಕ್ಷಣೆ
ವಿಶ್ವದಾಭಿರಾಮ ಕೇಳು ವೇಮ
ಭಕ್ತಿ ಮುಕ್ತಿ ಉಂಟು ಭಾಗ್ಯ ಮತ್ತೆ ಉಂಟು ;
ಚಿತ್ತವರಿತ ಮಡದಿ ಜೊತೆಯೊಳಿರಲು,
ಚಿತ್ತವರಿಯದ ಸತಿ ಹತ್ತಿರಿರಲು ಹೊಲ್ಲ
ವಿಶ್ವದಾಭಿರಾಮ ಕೇಳು ವೇಮ
ಸಂಸಾರ ಸರಿಯಾಗಿ ಇರಬೇಕಾದರೆ ಗಂಡ ಹೆಂಡತಿ ಅನೋನ್ಯವಾಗಿರಬೇಕು ಎಂಬುದು ಸಾಮಾನ್ಯ ಮಾತು. ದಂಪತಿಗಳ ನಡೆನುಡಿ ಚನ್ನಾಗಿದ್ದರೆ ಅಂಥ ಮನೆಯೇ ಸ್ವರ್ಗ ಸತಿಯನ್ನು ರಕ್ಷಿಸಿಕೊಂಡರೆ ತನ್ನನ್ನೇ ರಕ್ಷಿಸಿಕೊಂಡತೆ ಎಂಬ ಮಾತು ಇಂದು ವಿರಸಗೊಂಡು ಬೇರೆಯಾಗುತ್ತಿರುವ ಸಂಸಾರಗಳಿಗೆಲ್ಲ ಹೇಳಿದ ಕಿವಿಮಾತು. ಹೆಂಡತಿಯನ್ನು ಕಳೆದುಕೊಂಡ ಗಂಡನ ಸ್ಥಿತಿ ಹಾಗೂ ಗಂಡನನ್ನು ಕಳೆದುಕೊಂಡ ಹೆಂಡತಿಯ ಸ್ಥಿತಿ ಅಯೋಮಯ ಎಂಬುದನ್ನು ಸಮಾಜದಲ್ಲಿ ಸಾಕಷ್ಟು ಕಾಣುತ್ತೇವೆ.
ಪತಿಯನ್ನು ಅರ್ಥ ಮಾಡಿಕೊಂಡು ನಡೆವ ಸತಿ ಇದ್ದರೆ ಭಕ್ತಿ, ಮುಕ್ತಿ, ಭಾಗ್ಯ ಎಲ್ಲವು ನಮ್ಮದಾಗುವುದು ಎಂದು ಹೇಳುವ ವೇಮನರು ಅದೇ ಅರ್ಥ ಮಾಡಿಕೊಳ್ಳದ ಹೆಂಡತಿ ಇದ್ದರೆ ಆ ಮನೆ ಪ್ರತ್ಯಕ್ಷ ನರಕ ಎಂದು ಸೂಚ್ಯವಾಗಿ ಹೇಳುತ್ತಾರೆ. ಅಂಥವರ ಸಂಸಾರ ಮುಳುಗುತ್ತಿರುವ ನಾವೆಯಂತೆಯೆ ಸರಿ.
ಹೆಂಡತಿಯೆನೆ ಆತ್ಮ ಕಣಾ !
ಹೆಂಡತಿಯೆನೆ ತಾಯಿ ಕಣಾ ಅರಿತೊಡೆ ಮನದೊಳ್
ಹೆಂಡತಿ ತಾಯಿಯೆನಲಾರು?
ಕಂಡರಿಯಬೇಕಿದನೆ ತಪ್ಪದಂತೆ ವೇಮಾ,
ಹೆಂಡತಿ ಗಂಡನ ಆತ್ಮವಿದ್ದಂತೆ ಅದಕ್ಕಾಗಿ ಸಂಸಾರ ಎಂಬುದು ಜೊಡಿ ಎತ್ತಿನ ಗಾಡಿ ಎಂದು ಹೇಳುತ್ತಾರೆ. ಅದರಲ್ಲಿ ಒಂದು ಎತ್ತು ಮುಗ್ಗರಿಸಿದರು ಗಾಡಿ ಮುಂದೆ ಚಲಿಸುವುದಿಲ್ಲ. ಹೆಂಡತಿ ಗಂಡನ ಆರೋಗ್ಯಕ್ಕೆ ಲಕ್ಷ್ಯಗೊಟ್ಟು ತಾಯಿಯಂತೆ ಆರೈಕೆ ಮಡುತ್ತಾಳೆ. ಇದನ್ನು ಗಂಡನಾದವನು ಅರ್ಥೈಸಿಕೊಂಡು ನಡೆಯಬೇಕು.
ಗಂಡ ಹೆಂಡತಿ ದಿನನಿತ್ಯ ಕಲಹಗೈದು ವಿರುದ್ದ ದಿಕ್ಕಿನಲ್ಲಿ ನಡೆದರೆ ಅಂಥ ಸಂಸಾರ ಹೇಗೆ ಸುಖದಿಂದ ಇರಲು ಸಾಧ್ಯ. ಅದಕ್ಕಾಗಿಯೇ ಗಂಡ ಹೆಂಡರಲ್ಲಿ ಅನ್ಯೋನ್ಯತೆ ಇದ್ದರೆ ಅಂಥಹ ಸಂಸಾರ ಸುಖಿ ಸಂಸಾರ ಸಂಸಾರ ಎನ್ನಬಹುದು.
ಸೂತ್ರವಾವುದರಸಿ ನೋಡೆ,
ಸೂತ್ರ ಸ್ತ್ರೀಯದೆನುವುದೇ ಸಿದ್ಧವಿಹುದಲಾ !
ಸೂತ್ರವೆನೆ ಸ್ತ್ರೀ ಸೂತ್ರವೆ
ಸೂತ್ರವದ ತಿಳಿಯುವಾತನೆ ನಾಥನು ವೇಮಾ
ಸದಾ ಸುಖಿ ಜೀವನದ ಸರಳ ಸೂತ್ರವೆಂದರೆ ಸ್ತ್ರೀ ಎಂದು ಹೇಳುವ ವೇಮನರು ಸ್ತ್ರೀಯರನ್ನು ತಿಳಿದುಕೊಂಡು ಹೋಗುವುದಲ್ಲಿಯೇ ಸಿದ್ದಿ ಇದೆ, ಈ ಸುಖ ಸಂಸಾರದ ಸೂತ್ರವನ್ನು ತಿಳಿದವನೇ ದೇವರು ಅವನೆ ಸಿದ್ದಿ ಪುರುಷನು ಎಂದು ವೇಮನರು ಅರ್ಥೈಸುತ್ತಾರೆ.
ಇಂದು ಸಂಸಾರಗಳು ಬೇರೆಯಾಗುವ ಈ ಕಾಲ ಘಟ್ಟಕ್ಕೆ ವೇಮನರ ಎಚ್ಚರಿಕೆಯ ಮಾತುಗಳನ್ನು ಬದುಕಿನಲ್ಲಿ ತಂದರೆ ಅದೆಷ್ಟೊ ಸಂಸಾರಗಳು ಸುಖ ಜೀವನವನ್ನು ನಡೆಸಬಹುದಾಗಿದೆ.
ಪತಿಯೊಪ್ಪಿರೆ ಸತಿಯೊಪ್ಪಲು,
ಸತಿಪತಿಯೊಂದಾಗಿ ಪರಮ ಪಾವನರೋಲ್,
ಸತಿಪತಿ ನ್ಯಾಯವೇ ಮೋಕ್ಷವು ;
ಬದುಕೇ ಪರಮಾತ್ಮನೆ ತಾನಾಯಿತು ವೇಮಾ.
ಸತಿ ಪತಿಗಳು ಒಪ್ಪಿಕೊಂಡು ಸಂಸಾರ ನಡೆಸಲು ಅದೇ ಪಾವನ ತೀರ್ಥ ಎಂದು ಹೇಳಬಹುದು, ಅಂಥ ಒಂದಾದ ಸಂಸಾರ ನ್ಯಾಯವಾದದ್ದು ಮತ್ತು ಮೋಕ್ಷ ಸಂಪಾದನೆಗೆ ದಾರಿ ಮಾಡಿಕೊಡುತ್ತದೆ. ಪತಿಯೇ ಪರಮಾತ್ಮನಂತೆ ಸ್ವರ್ಗ ಧರೆಗಳಿದು ಬಂದಂತೆ ಎಂದು ವೇಮನರ ಅಭಿಪ್ರಾಯ.
ಕೆರವಿನೊಳಗೆ ಕಲ್ಲು, ಕಿವಿಯು ಒಳಗೆ ಹುಳುವು ;
ಕಣ್ಣಿನೊಳಗೆ ಕಸುರು ಕಾಲ-ಮುಳ್ಳು ;
ಮನೆಯೊಳಗಿನ ಜಗಳ ಮತ್ತೆ ಹೇಳಲೆಷ್ಟು ?
ವಿಶ್ವದಾಭಿರಾಮ ಕೇಳು ವೇಮಾ.
ಸಂಸಾರದಲ್ಲಿ ಬಿರುಕು ಉಂಟಾದರೆ ಅಂಥ ಕಷ್ಟ ಯಾರಗೂ ಬರಬಾರದು ಅಂಥ ಸಂಸಾರವನ್ನು ಸರದೂಗಿಸಿಕೊಂಡು ಹೋಗುವುದು ಸಾಹಸದ ಕಾರ್ಯವೆಂದೆ ಹೇಳಬಹುದು. ಇದನ್ನು ಹಲವಾರು ಉದಾಹರಣೆ ಮೂಲಕ ವೇಮನರು ವಿಶ್ಲೇಷಿಸಿದ್ದಾರೆ.
ಚಪ್ಪಲಿಯೊಳಗೆ ಸಿಕ್ಕ ಕಲ್ಲು, ಕಿವಿಯೊಳಗೆ ಹೊಕ್ಕು ಹುಳುವು, ಕಣ್ಣಿನೊಳಗೆ ಹೊಕ್ಕ ಕಸುರು, ಕಾಲಿಗೆ ಚುಚ್ಚಿದ ಮುಳ್ಳು ಎಷ್ಟು ನೋವು ಕೊಡುತ್ತವೆಯೊ ಹಾಗೆ ಮನೆಯೊಳಗಿನ ಜಗಳ ಎಂದು ವೇಮನರು ಹೇಳಿದ್ದಾರೆ.
ಈ ದೇಶದಲ್ಲಿ ಸುಮಾರು ಹದಿನೆಂಟು ಸಾವಿರ ಅನಾಥಾಶ್ರಮಗಳಿವೆ ಅಲ್ಲಿ ಹೆಚ್ಚು ಜನ ವಿದ್ಯಾವಂತ ಮಕ್ಕಳ ತಂದೆ ತಾಯಿಗಳಿರುವುದು ಕಂಡು ಬರುವ ಈ ಸಂದರ್ಭದಲ್ಲಿ ಹೆಚ್ಚು ಹೆಚ್ಚು ಕೌಟುಂಬಿಕ ಕಲಹಗಳನ್ನು ಕಾಣುತ್ತೇವೆ. ಇವುಗಳಿಗೆಲ್ಲ ಮಹಾಯೋಗಿ ವೇಮನರು ತಮ್ಮ ಕಾವ್ಯದ ಮೂಲಕ ಪರಿಹಾರ ಸೂಚಿಸಿದ್ದಾರೆ. ಅವುಗಳನ್ನು ಬದುಕಿನಲ್ಲಿ ತಂದು ಸುಖಿ ಜೀವನ ನಡೆಸುವುದು ಅವಶ್ಯವಿದೆ.
ಲೇಖನ:
ಶ್ರೀ ಎಸ್ ಎಸ್ ಹಳ್ಳೂರ
ಸೆ ನಂ 26 ಪ್ಲಾಟ ನಂ 50
ನವನಗರ ಬಾಗಲಕೊಟ-587103
ಮೋ 7022243709