ಅಂತರಂಗದಿ ಶುದ್ಧ ಗುಣವ ನೆಟ್ಟು
ಶರಣರ ವಿಚಾರ ಮನದಲ್ಲಿ ಇಟ್ಟು
ಕಾಯಕ ನಿಷ್ಠೆಯ ಶ್ರದ್ಧೆಯ ತೊಟ್ಟು
ಸಾಗು ಹೆತ್ತವರಿಗೆ ಮಮತೆ ಕೊಟ್ಟು.
ಹೆಸರನು ಗಳಿಸಿದ ಶ್ರೇಷ್ಠ ಮನೆತನ
ಉಳಿಸುತಲಿ ನಡೆ ಅವರ ಗಟ್ಟಿತನ
ಬಯಸದೆ ಯಾರಿಗೂ ಕೆಡುಕುತನ
ಸನ್ಮಾರ್ಗದಿ ಸಾಗಲಿ ನಿನ್ನ ಜೀವನ.
ತೋರದೆ ಯಾರಿಗೂ ಸಿಟ್ಟು ಸಿಡುಕು
ಬಾಂಧವ್ಯದಿ ಬಾರದಂತೆ ಒಡಕು
ದೂರವೇ ಸರಿಸಿ ಬರುವ ತೊಡಕು
ಪರೋಪಕಾರ ಮಾಡಿ ನಿತ್ಯ ಬದುಕು.
ಬಿಟ್ಟು ಹುಳಿ ಹಿಂಡುವ ಸಣ್ಣತನ
ನಡೆ ನುಡಿಯಲ್ಲಿ ಗಳಿಸಿ ಸಿರಿತನ
ಬೆಳೆಸುತ ಸಾಮರಸ್ಯದ ಗೆಳೆತನ
ನಡೆಸು ನೀ ಸಾರ್ಥಕತೆಯ ಜೀವನ.
ನೀನೆಂದೂ ತೋರದಿರು ಹಗೆತನ
ಯಾರೂ ಇರರು ಇಲ್ಲಿ ಕೊನೆತನ
ಕಾಡಿದರೂ ನಿನಗೆ ಕಡು ಬಡತನ
ತೋರುತ ನಡೆ ನಿನ್ನಯ ದೊಡ್ಡತನ.
-ಬ್ಯಾಡನೂರು ವೀರಭದ್ರಪ್ಪ ಶಿವಶರಣ, ಎಸ್.,
ಪಾವಗಡ ತಾಲ್ಲೂಕು, ತುಮಕೂರು ಜಿಲ್ಲೆ,
ದೂರವಾಣಿ ಸಂಖ್ಯೆ:-9740199896.
