ಯಾರಿಗೇಳೋಣ ನಮ್ಮ ಪ್ರಾಬ್ಲಮ್ !
ನಾನೊಬ್ಬ ಬಡ ವಿದ್ಯಾರ್ಥಿಗಳಲ್ಲಿ ಒಬ್ಬ ಹಾಗಾಗಿ ನಾನು ಹಾಸ್ಟೆಲ್ ಅಲ್ಲಿ ಇದ್ದು ಓದುತ್ತಿದ್ದೇನೆ ನಮ್ಮ ಹಾಸ್ಟೆಲ್ ವಿದ್ಯಾರ್ಥಿಗಳನ್ನು ವಂಚಿಸುವವರು ಯಾರಾದ್ರೂ ಇದ್ರೆ ಅವರೇ ನಮಗೆ ಆಶ್ರಯ ನೀಡುವ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ನಮ್ಮ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ಹೆಸರಿಗೆ ತಕ್ಕಂತೆ ಸೌಲಭ್ಯ ನೀಡುವಲ್ಲಿ ಹಾಗೂ ಕಾರ್ಯಾಚರಣೆಯಲ್ಲಿ ಬಹಳಷ್ಟು ಹಿಂದುಳಿದಿದೆ ಎಂದರೆ ತಪ್ಪಾಗಲಾರದು, ನಮ್ಮ ಹಾಸ್ಟೆಲ್ ಗೆ 2024-25 ರ ಸಾಲಿನಲ್ಲಿ ನೂತನವಾಗಿ ದಾಖಲಾದ ವಿದ್ಯಾರ್ಥಿಗಳಿಗೆ ಮೂಲ ಸೌಲಭ್ಯಗಳಿಲ್ಲ. (ಹೊದಿಕೆ, ತಟ್ಟೆ, ಲೋಟ ) ಆದರೂ ದಾಖಲಾತಿ ಪಡೆಯುವಾಗ ಹಣವನ್ನು ನಮ್ಮಿಂದ ಇಂತಿಷ್ಟು ಅಂತಾ ಕಟ್ಟಿಸಿಕೊಳ್ಳುತ್ತಾರೆ ಅದು ಯಾಕೆ?
ನಂಬರ್ 1580-1582 ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ. ಬಾಲಕರ ವಿದ್ಯಾರ್ಥಿ ನಿಲಯ ಬೆಂಗಳೂರು ವಿಶ್ವವಿದ್ಯಾಲಯ ಆವರಣದಲ್ಲಿ ಕಳೆದ ವರ್ಷದ ಡಿಸೆಂಬರ್ ತಿಂಗಳಲ್ಲಿ ಸೋಪ್ ಕಿಟ್ ಕೊಡಲಿಲ್ಲ. ಅಷ್ಟೇ ಅಲ್ಲದೆ 2024ರ ಜೂನ್, ಜುಲೈ ತಿಂಗಳಲ್ಲಿಯೂ ಸೋಪ್ ಕಿಟ್ ನೀಡಲಿಲ್ಲ. ಕೇಳಿದರೆ ಈ ತಿಂಗಳು ಬಂದಿಲ್ಲ, ಬಂದರೆ ಕೊಡುತ್ತೇವೆ ಎನ್ನುತ್ತಾರೆ. ತಡವಾಗಿ ಸೋಪ್ ಕಿಟ್ ಬಂದರೂ ಕಳೆದ ತಿಂಗಳ ಸೋಪ್ ಕಿಟ್ ಕೊಡಲ್ಲ, ಕೇಳಿದರೆ ಈ ತಿಂಗಳದ್ದು ಬಂದಿದೆ ಕೊಟ್ಟಿದ್ದೇವೆ, ಹಿಂದಿನ ತಿಂಗಳದ್ದು ಬಂದಿಲ್ಲ ಇಷ್ಟೇ ಅಲ್ಲದೆ ನಾವು ವಾಸಿಸುವ ಕೋಣೆಗಳನ್ನು ಶುಚಿಯಾಗಿಡಲು ಬೇಕಾದ ಸಲಕರಣೆಗಳನ್ನು ನೀಡಿಲ್ಲ. ಹಾಗಾದರೆ ನಾವು ಏನು ಮಾಡಬೇಕು…?
ಅಡುಗೆಯ ವಿಚಾರಕ್ಕೆ ಬಂದರೆ ಪೌಷ್ಟಿಕಾಂಶವಿರುವ ತರಕಾರಿಗಳಿಗಿಂತ ಮಾರುಕಟ್ಟೆಯಲ್ಲಿ ಕಡಿಮೆ ದರದಲ್ಲಿ ಸಿಗುವ ತರಕಾರಿಗಳನ್ನು ಅಡುಗೆಗೆ ಬಳಸುತ್ತಾರೆ. ಅನಿರೀಕ್ಷಿತ ಕಾರಣಗಳಿಂದ ವಿದ್ಯಾರ್ಥಿಗಳು ಊಟದ ಸಮಯ ಮೀರಿ ಹತ್ತು, ಇಪ್ಪತ್ತು ನಿಮಿಷ ತಡವಾಗಿ ಹೋದಲ್ಲಿ ಊಟ ಖಾಲಿಯಾಗಿದ್ದರೆ ಮತ್ತೆ ಅಡುಗೆ ಮಾಡಿಸುವುದಿಲ್ಲ. ನಿಲಯ ಪಾಲಕರಲ್ಲಿ ಕೇಳಿದರೆ ಸಮಯ ಮುಗಿದಿದೆ ಎನ್ನುತ್ತಾರೆ.
ಹಿಂದುಳಿದ ವರ್ಗಗಳ ನಿಲಯದಲ್ಲಿ ನಡೆಯುವ ಸಣ್ಣ ಪುಟ್ಟ ತಪ್ಪುಗಳನ್ನು ದೂರು ನೀಡಲು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಹಾಯ ವಾಣಿಗೆ ಕರೆ ಮಾಡಿದರೆ ಯಾರಿಂದಲೂ ಪ್ರತಿಕ್ರಿಯೆ ಬರುವುದಿಲ್ಲ. ಸಂಖ್ಯೆ ಅಸ್ತಿತ್ವದಲ್ಲಿಲ್ಲ ಅಥವಾ ಬ್ಯುಸಿ ಎಂದಷ್ಟೇ ಬರುತ್ತೆ. ಸರ್ಕಾರಿ ಸೌಲಭ್ಯಗಳನ್ನೇ ನಂಬಿಕೊಂಡು ಬದುಕುವ ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ಸಂಕಷ್ಟ ಎದುರಾಗಿದೆ. 24/7 ದೂರು ಸಲ್ಲಿಸುವ ಸಹಾಯ ವಾಣಿ ಬೇಡವೇ? ಕೊನೆಯ ಪಕ್ಷ ಸರ್ಕಾರಿ ಕೆಲಸದ ದಿನಗಳಲ್ಲಾದರೂ ಸಹಾಯವಾಣಿ ಯಾಕೆ ಕಾರ್ಯಾತ್ಮಕವಾಗಿರಲ್ಲ ? ವಿದ್ಯಾರ್ಥಿಗಳನ್ನು ಯಾಕೆ ಇಲಾಖೆ ಇಷ್ಟೊಂದು ನಿರ್ಲಕ್ಷ ಮಾಡುತ್ತದೆ? ಇವೆಲ್ಲಾ ಸಮಸ್ಯೆಗಳಿಗೆ ಅಧಿಕಾರಿಗಳಿಗೆ ತಿಳಿಸಿದ್ರೂ ಯಾವುದೇ ಕ್ರಮ ಜರುಗಿಸಿಲ್ಲ ಹೀಗಿದ್ದಾಗ ನಾವು ಯಾರಿಗೇಳೋಣ ನಮ್ಮ ಪ್ರಾಬ್ಲಮ್ !…
- ರಾಮಕೃಷ್ಣ. ಎನ್, ಬಿಸಿಎಂ ಹಾಸ್ಟೆಲ್ ವಿದ್ಯಾರ್ಥಿ
