ಪ್ರವೀಣ್ ಕುಟುಂಬಕ್ಕೆ ಸರಕಾರ ಪರಿಹಾರ ನೀಡಲಿ – ರೆಡ್ಡಿ ಸಮಾಜದ ಮುಖಂಡರು.
ಕೊಪ್ಪಳ: ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳಕ್ಕೆ ಹೋಗಿ ಮೃತನಾಗಿದ್ದ ಜಿಲ್ಲೆಯ ಕಾರಟಗಿ ತಾಲೂಕಿನ ಸಿದ್ಧಾಪುರ ಗ್ರಾಮದ ಪ್ರವೀಣ ಕುಮಾರ್ ಹೊಸಮನಿ ಅವರ ಮನೆಗೆ ಜಿಲ್ಲೆಯ ರೆಡ್ಡಿ ಸಮಾಜದ ಮುಖಂಡರು ಇಂದು ಭೇಟಿ ನೀಡಿ, ಮೃತನ ಕುಟುಂಬದ ಸದಸ್ಯರಿಗೆ ಸಾಂತ್ವಾನ ಹೇಳಿದರು.
ಮೃತನ ಕುಟುಂಬಕ್ಕೆ ಭೇಟಿ ನೀಡಿದ್ದ ರೆಡ್ಡಿ ಸಮಾಜದ ಗಂಗಾವತಿ ತಾಲೂಕ ಅಧ್ಯಕ್ಷ ಆ.ಪಿ.ರೆಡ್ಡಿ ವಕೀಲರು, ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ರಾಜೇಶ ರೆಡ್ಡಿ, ಜಿಲ್ಲಾ ಮುಖಂಡರಾದ ಮನೋಹರ ಗೌಡ ಹೇರೂರು, ವಿಶ್ವನಾಥ ಮಾಲಿಪಾಟೀಲ್, ಲಿಂಗನಗೌಡ ಹೇರೂರು, ಗಂಗಾವತಿ ನಗರ ಸಭೆ ಸದಸ್ಯ ಉಮೇಶ ಸಿಂಗನಾಳ್, ವಿಜಯ ಕುಮಾರ್ ಗದ್ದಿ ಅವರು, ಮೃತ ಪ್ರವೀಣನ ತಂದೆ ಮಲ್ಲಿಕಾರ್ಜುನ ಅವರು ಅನಾರೋಗ್ಯದಿಂದ ತೀರಿಕೊಂಡು ಕೇವಲ ಇಪ್ಪತ್ತೈದು ದಿನಗಳ ಅಂತರದಲ್ಲಿ 27 ವರ್ಷದ ದುಡಿಯುತ್ತಿದ್ದ, ಕೈಗೆ ಬಂದ ಮಗ ದುರಂತದ ಸಾವಿಗೀಡಾಗಿದ್ದು ಬಹಳ ಖೇದಕರ ಸಂಗತಿಯಾಗಿದೆ. ಇದರಿಂದ ಧೃತಿಗೆಟ್ಟು, ದುಗುಡಕ್ಕೆ ಈಡಾಗಿದ್ದ ಮೃತ ಪ್ರವೀಣನ ತಾಯಿ ಹಾಗೂ ಸಹೋದರನಿಗೆ ಸಾಂತ್ವಾನ ಹೇಳಿ, ಧೈರ್ಯ ತುಂಬಿದ ನಂತರ ಇದೇ ವೇಳೆಯಲ್ಲಿ ಮೃತ ದೇಹ ತರುವಲ್ಲಿ ನಿರ್ಲಕ್ಷ್ಯ ಮಾಡಿದ್ದ ಕಾರಟಗಿ ತಹಶೀಲ್ದಾರ ಕುಮಾರಸ್ವಾಮಿ ಅವರಿಗೆ ದೂರವಾಣಿ ಕರೆ ಮಾಡಿ ತರಾಟೆಗೆ ತೆಗೆದುಕೊಂಡರು.
ಕುಟುಂಬಕ್ಕೆ ಆಧಾರ ಸ್ತಂಭವಾಗಿದ್ದ ಯುವ ವಯಸ್ಸಿನ ಪ್ರವೀಣ ಕುಮಾರ್ ದುರಂತದ ಸಾವಿಗೀಡಾಗಿರುವುದು ಕುಟುಂಬಕ್ಕೆ ಬಹಳ ಅನ್ಯಾಯವಾಗಿದೆ. ಹೀಗಾಗಿ ಉತ್ತರ ಪ್ರದೇಶ ಮತ್ತು ಕರ್ನಾಟಕ ಸರಕಾರ ಹಾಗೂ ಕೇಂದ್ರ ಸರಕಾರ ಮಾನವೀಯತೆಯಿಂದ ಮೃತನ ಕುಟುಂಬಕ್ಕೆ ಪರಿಹಾರ ಅಥವಾ ಸಹಾಯ ಧನ ನೀಡಬೇಕು. ಈ ಕುರಿತು ನಾವು ತಹಶೀಲ್ದಾರರು, ಜಿಲ್ಲಾಧಿಕಾರಿಗಳು ಹಾಗೂ ಸಂಸದ ಮತ್ತು ಸಚಿವರೊಂದಿಗೆ ಚೆರ್ಚಿಸಿ, ಒತ್ತಾಯಿಸುತ್ತೇವೆ ಎಂದು ಕುಟುಂಬದ ಸದಸ್ಯರಿಗೆ ಹೇಳಿದರು.
ಈ ಸಂದರ್ಭದಲ್ಲಿ ರೆಡ್ಡಿ ಸಮಾಜದ ಮುಖಂಡರೆಲ್ಲರೂ ಜಿಲ್ಲಾ ಪಂಚಾಯತಿ ಮಾಜಿ ಉಪಾಧ್ಯಕ್ಷ ಬಸವರಾಜಪ್ಪ ಅವರ ಮನೆಗೆ ಭೇಟಿ ನೀಡಿ, ಮೃತನ ಕುಟುಂಬಕ್ಕೆ ಪರಿಹಾರ ಕೊಡಿಸುವ ವಿಷಯದ ಬಗ್ಗೆ ಚೆರ್ಚಿಸಿದರು.
ಮೃತನ ತಾಯಿ ಸುಮಂಗಲಮ್ಮ, ಚಿಕ್ಕಪ್ಪ ನಾಗರೆಡ್ಡಿ, ಸಹೋದರ ಶರಣಬಸವ, ಅಭಿಶೇಕ ಮತ್ತು ಪಂಪನಗೌಡ ಹೊಸಮನಿ ಇದ್ದರು.
