
ಕೊಪ್ಪಳ/ ಯಲಬುರ್ಗಾ : ತಾಲೂಕಿನ ಮಂಡಲಮರಿ ಗ್ರಾಮದ ಆರಾಧ್ಯ ದೇವಿ ಶ್ರೀ ದ್ಯಾಮಮ್ಮದೇವಿ ಹಾಗೂ ದುರ್ಗಾದೇವಿ ಜಾತ್ರಾ ಮಹೋತ್ಸವ ಇಂದು ಅದ್ದೂರಿಯಾಗಿ ಜರುಗಲಿದೆ.
ಇಂದು ಬೆಳಗ್ಗೆ ಶ್ರೀದ್ಯಾಮಮ್ಮದೇವಿ ಹಾಗೂ ಶ್ರೀ ದುರ್ಗಾದೇವಿ ಗೆ ವಸ್ತ್ರಲಂಕಾರ, ಕುಂಕುಮ, ಅರಿಸಿನಿ ಆರ್ಚನೆ, ಗಂಗಾ ಪೂಜೆ ,ಉಡಿ ತುಂಬುವುದು ಸೇರಿದಂತೆ ನಾನಾ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಜಾತ್ರೆ ಪ್ರಾರಂಭವಾಯಿತು.
ಈಗಾಗಲೇ ದೇವಸ್ಥಾನವನ್ನು ಬಣ್ಣಗಳಿಂದ ತಳಿರು, ತೋರಣಗಳಿಂದ ಹಾಗೂ ಅಲಂಕಾರಿಕ ವಿದ್ಯುತ್ ದ್ವೀಪಗಳಿಂದ ಶೃಂಗರಿಸಲಾಗಿದೆ.
ಜಾತ್ರೆಯ ಹಿನ್ನಲೆ : ಶ್ರೀದ್ಯಾಮಮ್ಮದೇವಿಯು ನೂರಾರು ವರ್ಷಗಳ ಹಿಂದೆ ಗ್ರಾಮದಲ್ಲಿ ನೆಲೆಯೂರಿದ ರೋಚಕದ ಇತಿಹಾಸವಿದೆ. ಊರು ಗೌಡ್ರು ಜಮೀನಿನ ( ಹೊಲ) ದಲ್ಲಿ ಹೇರಳವಾಗಿ ಬೆಳೆದು ನಿಂತ ಅಂಕಲಿ ಪೊದೆಯಲ್ಲಿ ಶ್ರೀದ್ಯಾಮಮ್ಮದೇವಿ ನೆಲೆಯೂರಿದ್ದಳು. ಒಂದು ದಿನ ರಾತ್ರಿ ದೇವಿಯು ಗೌಡಶ್ಯಾನಿಗೆ ಸ್ವಪ್ನದಲ್ಲಿ ಬಂದು ನಾನು ನಿಮ್ಮ ಮನೆಯ ಕುಲದೇವಿ ನಿಮ್ಮ ಹೊಲದ ಅಂಕಲಿ ಪೂದೆಯಲ್ಲಿರುವೆ ನನ್ನ ಜಪ ಮಾಡಿ ಪೂಜಿಸಿದರೆ ನಿಮ್ಮ ಕುಟುಂಬ ಹಾಗೂ ನಿಮ್ಮೂರಿಗೆ ಒಳಿತು ಆಗುತ್ತದೆ ಎಂದು ಹೇಳಿ ಅದೃಶ್ಯಳಾದಳು
ಎಂಬ ವಾಡಿಕೆ ಇದೆ ಎಂದು ನಮ್ಮ ಹಿರಿಯರಾದ ದಿ.ದುರಗಮ್ಮ ಗೌಡಶ್ಯಾನಿ ಹೇಳುತ್ತಿದ್ದರು ಎಂದು ಹಿರಿಯರಾದ ನಿಂಬನಗೌಡ, ವೀರನಗೌಡ, ದ್ಯಾಮನಗೌಡ ಹೇಳುತ್ತಾರೆ.
ಅಂದಿನಿಂದ ಇಂದಿನವರಿಗೆ ನಮ್ಮ ಪೂರ್ವಿಕರ ಕಾಲದಿಂದಲೂ ಶ್ರೀದ್ಯಾಮಮ್ಮ ದೇವಿಯನ್ನು ಪೂಜೆಸುತ್ತಾ ಬಂದಿದ್ದೇವೆ. ಮೊದಲು ಅಂಕಲಿ ಪೂದೆ ( ಅಂಕಲಿಗಿಡ) ದಲ್ಲಿರುವ ಕಲ್ಲಿನ ಮೂರ್ತಿಯನ್ನು ಪೂಜಿಸಲಾಗುತ್ತಾ ಬರಲಾಗಿತ್ತು. ನಂತರ ಸಣ್ಣದೊಂದು ಗುಡಿಯನ್ನು ಕಟ್ಟಿ ಪೂಜಿಸುತ್ತಾ ಬಂದಿದ್ದರು. ಕಳೆದ 06 ವರ್ಷಗಳ ಹಿಂದೆ ಗ್ರಾಮದ ಗುರು ಹಿರಿಯ ಸಹಕಾರದಿಂದ ಹಳೆಯ ದೇವಸ್ಥಾನದ ಜಾಗದಲ್ಲಿ ಬೃಹತ್ ದೇವಸ್ಥಾನ ನಿರ್ಮಿಸಿ ಶ್ರೀದ್ಯಾಮಮ್ಮ ದೇವಿ ದೇವಿಯ ಐದು ಅಡಿಯ ಶಿಲಾ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸುತ್ತಾ ಬಂದಿದ್ದೇವೆ. ಇಂದಿಗೂ ದೇವಸ್ಥಾನ ಪಕ್ಕದಲ್ಲಿ ಅಂಕಲಿ ಮರ ಇದೆ.
ಎಂದು ಎಂದು ವಯೋವೃದ್ದ ನಿಂಬನಗೌಡ ಇತಿಹಾಸವನ್ನು ಮೆಲಕು ಹಾಕಿದರು.
ಶಕ್ತಿ ದೇವೆತೆ :
ಶ್ರೀದ್ಯಾಮಮ್ಮದೇವಿಯು ಶಕ್ತಿ ದೇವಿತೆಯಾಗಿದ್ದಾಳೆ. ಭಕ್ತಿಯಿಂದ ನಡೆದುಕೊಂಡವರಿಗೆ ಶಕ್ತಿ ತುಂಬುವ ದೇವಿಯಾಗಿದ್ದಾಳೆ. ಬೇಡಿದ ವರವ ನೀಡಿ ಗ್ರಾಮ ದೇವಿತೆಯಾಗಿ ಮಂಡಲಮರಿ ಗ್ರಾಮದಲ್ಲಿ ನೆಲೆಯೂರಿ ಪೊರೆಯುತ್ತಿದ್ದಾಳೆ. ಪ್ರತಿ ಮಂಗಳವಾರ ಮತ್ತು ಶುಕ್ರವಾರ ಹಾಗೂ ಹುಣ್ಣುಮೆ , ಅಮಾವಾಸ್ಯೆ ದಿನ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಆ ದಿನ ಹೆಚ್ವಿನ ಸಂಖ್ಯೆಯಲ್ಲಿ ಭಕ್ತರ ದಂಡು ದೇವಸ್ಥಾನದಲ್ಲಿ ಕಂಡು ಬರುತ್ತದೆ.
ಮೂರು ವರ್ಷಕ್ಕೊಮ್ಮೆ ಜಾತ್ರೆ :
ಶ್ರೀ ದ್ಯಾಮಮ್ಮದೇವಿ ಹಾಗೂ ದುರ್ಗಾದೇವಿಯ ಜಾತ್ರೆಯೂ ಪ್ರತಿ ಮೂರು ವರ್ಷಕ್ಕೊಮ್ಮೆ ನಡೆಯುವುದು ವಾಡಿಕೆಯಾಗಿದೆ. ಇಲ್ಲಿ ನಡೆಯುವ ಜಾತ್ರೆ ನೋಡಿ ಕಣ್ಣುತುಂಬಿಕೊಳ್ಳಲು ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಳ್ಳುತ್ತಾರೆ. ಹರಕೆ ಹೊತ್ತ ಭಕ್ತರು ದೀರ್ಘದಂಡ ನಮಸ್ಕಾರ ಸೇರಿದಂತೆ ನಾನಾ ಹರಕೆ ತಿರಿಸಿ ಭಕ್ತಿ ಪಾರಕಾಷ್ಠೆ ಮೆರೆಯುತ್ತಾರೆ.
ನಮ್ಮ ಗ್ರಾಮದ ಆರಾಧ್ಯ ದೇವಿಯೂ ದುಷ್ಟ ಶಕ್ತಿ ಸಂಹಾರ ಮಾಡಿ ಶಿಷ್ಟ ಶಕ್ತಿಯ ಮೂಲಕ ನಮ್ಮ ಕುಟುಂಬ ಹಾಗೂ ಗ್ರಾಮವನ್ನು ಸಂರಕ್ಷಣೆ ಮಾಡುತ್ತಿದ್ದಾಳೆ. ಪ್ರತಿ ಮೂರು ವರ್ಷಕೊಮ್ಮೆ ಮೂರು ದಿನಗಳ ಕಾಲ ಅದ್ದೂರಿಯಾಗಿ ಜಾತ್ರೆ ನಡೆಯುತ್ತದೆ. ಜಾತ್ರೆಯ ಅಂಗವಾಗಿ ಗ್ರಾಮದ ರಂಗಭೂಮಿ ಕಲಾವಿದರು ಮೂರು ದಿನಗಳ ಕಾಲ ವಿವಿಧ ಸಮಾಜಿಕ ನಾಟಕಗಳನ್ನು ಅಭಿನಯಿಸುತ್ತಾ ಬರುತ್ತಿದ್ದಾರೆ.
- ವೀರನಗೌಡ ಪೊಲೀಸ್ ಪಾಟೀಲ್
ಗ್ರಾಮದ ಹಿರಿಯ ಮುಖಂಡ ಹಾಗೂ ದೇವಸ್ಥಾನ ಕಮಿಟಿಯವರು.
