ಕೊಪ್ಪಳ : ಡಾ. ಪಂಚಾಕ್ಷರಿ ಹಿರೇಮಠ ಅವರು ಸ್ವಾತಂತ್ರ ಹೋರಾಟಗಾರ, ಕವಿ, ಲೇಖಕ, ಹೋರಾಟಗಾರ ಹಾಗೂ ಅಧ್ಯಾಪಕ.
ಇದಕ್ಕೂ ಮಿಗಿಲಾಗಿ ಒಬ್ಬ ಶ್ರೇಷ್ಠ ವಿದ್ವಾಂಸ ಎಂದು ಕವಯಿತ್ರಿ ಅರುಣಾ ನರೇಂದ್ರ ಪಾಟೀಲ ಅಭಿಪ್ರಾಯಪಟ್ಟರು.
ಕೊಪ್ಪಳ ಜಿಲ್ಲಾ ತಿರುಳ್ಗನ್ನಡ ಸಾಹಿತಿಗಳ ಸಹಕಾರ ಸಂಘ ನಗರದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಗುರುವಾರದಂದು ಆಯೋಜಿಸಿದ್ದ ಡಾ. ಪಂಚಾಕ್ಷರಿ ಹಿರೇಮಠ ಅವರ ಬದುಕು ಬರೆಹ ಕುರಿತ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪಂಚಾಕ್ಷರಿ ಹಿರೇಮಠ ಅವರದು ಕೊಪ್ಪಳ ತಾಲ್ಲೂಕಿನ ಬೀಸರಳ್ಳಿ ಗ್ರಾಮ. ಅವರು ಬಾಲ್ಯದಲ್ಲಿ ಅವರ ತಾಯಿಯ ಆದರ್ಶ ಗುಣಗಳನ್ನು ಮೂಗೂಡಿಸಿಕೊಂಡು ಬೆಳೆದರು. ಬಾಲ್ಯದಲ್ಲಿಯೇ ತಂದೆಯನ್ನು ಕಳೆದುಕೊಂಡು ಚಿಕ್ಕಪ್ಪನ ಮಡಿಲೊಳಗೆ ಮಮಕಾರದ ಮೂರ್ತಿಯಾಗಿ ಬೆಳೆದವರು. ಕಷ್ಟ ದಲ್ಲಿಯೇ ಶಿಕ್ಷಣ ಪಡೆದು ವಿದ್ಯಾರ್ಥಿ ಜೀವನವನ್ನು ಸುವರ್ಣ ಯುಗವಾಗಿ ಪರಿವರ್ತಿಸಿಕೊಂಡರು. ಹಲವು ಭಾಷೆಗಳ ಬಲ್ಲಂತಹ ಭಾಷಾ ಪಂಡಿತರು.
ಉತ್ತಮ ಸಾಹಿತಿಗಳಲ್ಲದೇ ಉತ್ತಮ ಅನುವಾದಕರೂ ಕೂಡ ಅವರು ಎಂದು ಹೇಳಿದರು. ರಾಜ್ಯ, ದೇಶ ಹಾಗೂ ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದು ಶ್ರೇಷ್ಠ ಸಾಹಿತಿಯಾಗಿದ್ದಾರೆ. ಉರ್ದು ಭಾಷೆಯಿಂದ ಕನ್ನಡಕ್ಕೆ ಅನೇಕ ಕೃತಿಗಳನ್ನು ತರ್ಜುಮೆಗೊಳಿಸಿದ ಕೀರ್ತಿ ಅವರದು ಎಂದು ಪಾಟೀಲ ಹೇಳಿದರು. ಹಿಂದಿ ಭಾಷೆಯ ಮುನ್ಷಿ ಪ್ರೇಮಚಂದ ಅವರ ಅನೇಕ ಕತೆಗಳನ್ನು ಕನ್ನಡಕ್ಕೆ ತಂದಿದ್ದಾರೆ. ವಿದ್ಯಾವಾಚಸ್ಪತಿ ಹಾಗೂ ಸೋವಿಯತ್ ಲ್ಯಾಂಡ್ ನೆಹರು ಪ್ರಶಸ್ತಿ ಇವರ ವ್ಯಕ್ತಿತ್ವವನ್ನು ಮತ್ತಷ್ಟು ಅಧಿಕಗೊಳಿಸುವ ನಿಟ್ಟಿನಲ್ಲಿ ಸಾರ್ಥಕ ಪಡೆದಿವೆ.
ಪಂಚಾಕ್ಷರಿ ಹಿರೇಮಠ ಸೌಮ್ಯ ಸ್ವಭಾವದವರು. ಗದ್ದಲ ಮಾಡಿ ಗಮನ ಸೆಳೆಯುವವರಲ್ಲ. ಅವರು
ಸ್ವಂತ ಬರಹಗಳೊಡನೆ ಅನೇಕ ಕೃತಿಗಳನ್ನು
ಬೇರೆಬೇರೆ ಭಾಷೆಗಳಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ. ಅವರ ಕವಿತೆಗಳು ಜರ್ಮನ್ ಭಾಷೆಗೆ ಅನುವಾದಗೊಂಡಿವೆ.
ಇವರು ಬಹುಭಾಷಾ ಪಂಡಿತರು, ಸೂಫಿಗಳನ್ನು ಕುರಿತು ಬರೆದಿದ್ದಾರೆ. ಗಾಲಿಬ್ ಅವರನ್ನು ಕನ್ನಡಕ್ಕೆ
ಪರಿಚಯಿಸಿದ್ದಾರೆ. ಪಂಚಾಕ್ಷರಿ ಹಿರೇಮಠ
ಅನೇಕ ದೇಶ ಸಂಚರಿಸಿದ್ದಾರೆ. ಜಾಗತಿಕ
ಕವಿಗೋಷ್ಠಿಯಲ್ಲಿ ಭಾಗವಹಿಸಿದ ಕೀರ್ತಿ
ಇವರಿಗಿದೆ. ಹತ್ತು ಹಲವಾರು ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕೊಪ್ಪಳ
ದ ಕೋಟೆಯ ಮೇಲೆ ಬ್ರಿಟಿಷ್ ಕಾಲದಲ್ಲಿ
ಧ್ವಜಾರೋಹಣ ಮಾಡಿದ ಕೀರ್ತಿಯೂ
ಅವರಿಗಿದೆ ಎಂದರು.
ಮತ್ತೊಬ್ಬ ನಿವೃತ್ತ ಉಪನ್ಯಾಸಕ ಶಂಭುಲಿಂಗಪ್ಪ ಹರಗೇರಿ ಅವರು ಪಂಚಾಕ್ಷರಿ ಹಿರೇಮಠ ಅವರ ಅನುವಾದಿತ ಕಾದಂಬರಿ ಮಗ್ಗ ಚೆಲ್ಲಿದ ಬೆಳಕು ಕುರಿತು ವಿಶ್ಲೇಷಿಸಿದರು.
ರಾಂಗೆ ಯ ರಾಘವ ಅವರ ಕಾದಂಬರಿಯನ್ನು ಮಗ್ಗ ಚೆಲ್ಲಿದ ಬೆಳಕು ಕಾದಂಬರಿಯನ್ನು ಪಂಚಾಕ್ಷರಿ ಹಿರೇಮಠ ಕನ್ನಡಕ್ಕೆ ಅರ್ಥಪೂರ್ಣವಾಗಿ ಅನುವಾದಿಸಿದ್ದಾರೆ. ಅದರಲ್ಲಿ ಅರ್ಥಪೂರ್ಣ ದೋಹೆಗಳಿವೆ ಎಂದರು.
ದತ್ತಿ ಉಪನ್ಯಾಸದ ದಾನಿಗಳಾದ ಪ್ರೊ. ಮಲ್ಲಿಕಾರ್ಜುನ ಹಿರೇಮಠ ಅವರು ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಪಠ್ಯತರ ಚಟುವಟಿಕೆಗಳ್ಳಲಿ ಪಾಲ್ಗೊಂಡರೆ ವ್ಯಕ್ತಿತ್ವ ವಿಕಾಸನ ಆಗುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಬಂಡಾಯ ಕವಿ ಅಲ್ಲಮಪ್ರಭು ಬೆಟ್ಟದೂರು ಮಾತನಾಡಿ ಹಿರಿಯರ ಸಾಹಿತ್ಯವನ್ನು ಕಿರಿಯರು ಓದುವ ಅಗತ್ಯತೆ ಇದೆ ಎಂದು ಒತ್ತಿ ಹೇಳಿದರು.
ಕಾಲೇಜಿನ ಪ್ರಾಂಶುಪಾಲ ಡಾ. ಗಣಪತಿ ಕೆ ಲಮಾಣಿ, ನಿವೃತ್ತ ಪ್ರಾಚಾರ್ಯ ಬಿ ಜಿ ಕರಿಗಾರ ವೇದಿಕೆಯ ಮೇಲೆ ಇದ್ದರು.
ಕನ್ನಡ ವಿಭಾಗದ ಮುಖ್ಯಸ್ಥೆ ಡಾ ಹುಲಿಗೆಮ್ಮ ಬಿ ಪ್ರಾಸ್ತಾವಿಕ ಮಾತು ಹೇಳಿದರು.
