
ಲೇಖಕರು:- ಶ್ರೀ ಡಾ||ಜೀವನಸಾಬ ವಾಲಿಕಾರ ಬಿನ್ನಾಳ
ಪುಟಗಳು:- 135.
ಬೆಲೆ:- 200 ರೂ.ಗಳು.
ಪ್ರಕಾಶಕರು:- ಜೀಶಾನ್ ಪ್ರಕಾಶನ ಬಿನ್ನಾಳ.
‘ನ ಭೂತೋ ನ ಭವಿಷ್ಯತಿ’ ಎನ್ನುವಂತೆ ಅದ್ದೂರಿಯಾಗಿ, ಅರ್ಥಗರ್ಭಿತವಾಗಿ ದಿನಾಂಕ 5ನೇ ಜನವರಿ 2025 ರಂದು ಡಾ|| ಜೀವನಸಾಬ ವಾಲಿಕಾರ ಬಿನ್ನಾಳ ಇವರ ‘ ಜನಪದ ಮತ್ತು ಸಮಷ್ಟಿಪ್ರಜ್ಞೆ ‘ ಎನ್ನುವ ಮೇರು ಕೃತಿಯು ಬಿಡುಗಡೆಯಾಯಿತು. ಇದರಲ್ಲಿ ಬಹುಮುಖ್ಯವಾಗಿ ಹೆಸರೇ ಸೂಚಿಸುವಂತೆ ಜನಪದ ಶೈಲಿಯ ಅನೇಕ ಅಂಶಗಳನ್ನು ಗಮನಾರ್ಹವಾಗಿ ಒಳಗೊಂಡಿರುವ ಒಂದು ಅಪರೂಪದ ಹೊತ್ತಿಗೆಯಾಗಿದೆ.
ನಮ್ಮ ದಿನನಿತ್ಯದ ಜೀವನದಲ್ಲಿ ಹಾಸುಹೊಕ್ಕಾಗಿರುವ ಅಪಾರವಾದ ಅನುಭವವನ್ನು ಹೊಂದಿರುವ ಜಾನಪದ ಶೈಲಿಯ ಸಾಹಿತ್ಯವನ್ನು ಒಳಗೊಂಡಿರುವ ಶ್ರೇಷ್ಠ ಕೃತಿ ಎಂದರೆ ತಪ್ಪಾಗಲಿಕ್ಕಿಲ್ಲ. ಜನರಿಂದ ಜನರ ಬಾಯಿಗೆ ಹರಿದು ಬರುವ ಗ್ರಾಮೀಣ ಪ್ರದೇಶದ ಸಾಹಿತ್ಯವನ್ನು ಕುರಿತು ಸಮಗ್ರವಾಗಿ ಸಂಗ್ರಹಿಸಿ ಅದಕ್ಕೊಂದು ಪುಸ್ತಕ ರೂಪದ ಜೀವ ತುಂಬಿ ಹೊರತಂದಿರುವ ಮೇರು ಕೃತಿ ಎಂದರೆ ಜನಪದ ಮತ್ತು ಸಮಷ್ಟಿಪ್ರಜ್ಞೆ ಈ ಒಂದು ಕೃತಿಯಲ್ಲಿ ಲೇಖಕರು ನೂರಾರು ಜನಪದ ಶೈಲಿಯ ಕವನಗಳನ್ನು ವಿಸ್ತೃತವಾಗಿ ವಿವರಿಸಿರುವಂತೆ ಇದು ಸಾಮಾನ್ಯ ಜನರು ಕೂಡಾ ಸುಲಭವಾಗಿ ಅರ್ಥೈಸಿಕೊಳ್ಳಲು ಸಹಕಾರಿಯಾಗಿದೆ.
ತಿಳಿಗೇಡಿ ನನ ತಮ್ಮ ತಾಯವ್ವನ ಬೈಬ್ಯಾಡ
ಭಾಳ ದಿನದಾಕೆ ಹಡೆದವ್ನ ಬೈದರೆ
ಬಾಳ ಮರುಗ್ಯಾಳ ಮನದಾಗ..||
ಎನ್ನುವಂಥಹ ಅನೇಕ ತ್ರಿಪದಿಗಳು ನೈತಿಕತೆಯನ್ನು ಪ್ರತಿಬಿಂಬಿಸುವ ಇಂತಹ ನೂರಾರು ಜನಪದ ಸಾಹಿತ್ಯದ ಹಾಡುಗಳು ಪುಸ್ತಕದ ಮೌಲ್ಯವನ್ನು ನೂರ್ಮಡಿಗೊಳ್ಳುವಂತೆ
ಮಾಡಿವೆ.
ಗಂಡು ಮಕ್ಕಳ ಒಂಬತ್ತು ಕೊಡು ಸ್ವಾಮಿ
ಬಂಡೀಯ ಮುಂದೆ ಕಳಸಕ್ಕೆ- ಒಪ್ಪುವಂಥ
ಒಬ್ಬ ಹೆಣ್ಣು ಮಗಳ ಕೊಡು ಶಿವನೆ..||
ಮಾನವೀಯ ನೆಲೆಗಟ್ಟಿನಲ್ಲಿ ಆಲೋಚಿಸಿ ಬದುಕುವಂಥಹ ಇಂತಹ ತ್ರಿಪದಿಗಳು ಲಿಂಗ ಸಮಾನತೆಯ ಕುರಿತು ಸಹ ನಮ್ಮ ಜನಪದರು ಚಿಂತನೆ ಮಾಡಿದ್ದರು ಎಂಬುದಕ್ಕೆ ಸಾಕ್ಷಿಯಾಗಿವೆ.
ಪ್ರತಿಯೊಂದು ಕ್ಷೇತ್ರವನ್ನೂ ಆಯ್ಕೆ ಮಾಡಿಕೊಂಡು ಅವಿರತ ಶ್ರಮದೊಂದಿಗೆ ಅಪಾರವಾದ ಆಸಕ್ತಿಯೊಂದಿಗೆ ಲೇಖಕರು ಈ ಒಂದು ಕೃತಿಯನ್ನು ರಚಿಸಿದ್ದಾರೆ ಎನ್ನುವುದು ಸಂಪೂರ್ಣವಾಗಿ ಓದಿದಾಗ ಮನದಟ್ಟಾಗುತ್ತದೆ. ದಾರ್ಮಿಕ, ಆಧ್ಯಾತ್ಮಿಕ, ಶೈಕ್ಷಣಿಕ, ಕಲೆ, ನಾಟಕ, ಸಾಹಿತ್ಯ, ವೈದ್ಯಕೀಯ, ಐತಿಹಾಸಿಕ ಹಾಗೂ ಸಂಶೋಧನೆಯಂಥಹ ಇನ್ನೂ ಹಲವಾರು ಅಂಶಗಳನ್ನು ಒಳಗೊಂಡು ಜಾನಪದ ಶೈಲಿಯ ಅನೇಕಾನೇಕ ತ್ರಿಪದಿಗಳನ್ನು, ಚೌಪದಿಗಳನ್ನು ಮತ್ತು ಇತರ ವಿಸ್ತೃತವಾಗಿ ವಿವರಣೆ ನೀಡಿದ್ದಾರೆ.
ಲೇಖಕರು ಸಂಗ್ರಹಿಸಿರುವಂತೆ ಹಳ್ಳಿಯ ಸೊಗಡನ್ನು ಪ್ರತಿಬಿಂಬಿಸುವ ಅನೇಕ ಹಾಡುಗಳನ್ನೂ ಕೂಡಾ ನಾವಿಲ್ಲಿ ಕಾಬಹುದಾಗಿದೆ. ಭಾರತ ದೇಶದಲ್ಲೇ ನಮ್ಮ ಕರ್ನಾಟಕದ ಜಾನಪದ ಸಂಸ್ಕೃತಿ ಅತ್ಯಂತ ಶ್ರೀಮಂತವಾಗಿದೆ. ಕಲೆ, ಸಾಹಿತ್ಯ, ನೃತ್ಯ (ಡೊಳ್ಳು ಕುಣಿತ, ಕಂಸಾಳೆ, ಕರಡಿ ಮಜಲು, ವೀರಗಾಸೆ, ನಂದಿಕೋಲು ಕುಣಿತ, ಇತ್ಯಾದಿ), ನಾಟಕ (ಬಯಲಾಟ, ದೊಡ್ಡಾಟ, ಶ್ರೀ ಕೃಷ್ಣಪಾರಿಜಾತ, ಯಕ್ಷಗಾನ) ಮುಂತಾದ ವಿವಿಧ ಪ್ರಕಾರಗಳನ್ನು ನಮ್ಮ ಕನ್ನಡ ಜಾನಪದ ಸಂಸ್ಕೃತಿಯಲ್ಲಿ ಕಾಣಬಹುದು. ಕನ್ನಡ ಜಾನಪದ ಸಂಸ್ಕೃತಿಯ ಒಂದು ಭಾಗವಾದ ಜಾನಪದ ಗೀತೆಗಳು ಅತ್ಯಂತ ವೈವಿಧ್ಯಮಯವಾಗಿ ಕನ್ನಡನಾಡಿನ ವಿವಿಧ ಪ್ರದೇಶಗಳ ಪ್ರಾದೇಶಿಕ ಸೊಗಡುಗಳನ್ನು ನಮ್ಮ ಮುಂದಿನ ಪೀಳಿಗೆಗೆ ಜೋಪಾನ ಮಾಡಿವೆ ಎಂದರೆ ತಪ್ಪಾಗಲಿಕ್ಕಿಲ್ಲ.
ಇಂದಿನ ಪಾಶ್ಚಾತ್ಯ ಶೈಲಿಯ ಅರ್ಥಹೀನ ಸಂಗೀತದ ಮಧ್ಯೆ ರಸವತ್ತಾದ, ಅರ್ಥಪೂರ್ಣವಾದ ಜಾನಪದ ಗೀತೆಗಳನ್ನು ಈ ಪುಸ್ತಕದಲ್ಲಿ ಮಾತ್ರ ನೋಡಲು ಸಾಧ್ಯವಿದೆ. ಜನಪದವು ತನ್ನ ಹಿಂದಿನ ವೈಭವವನ್ನು ಸ್ವಲ್ಪಮಟ್ಟಿಗೆ ಕಳೆದುಕೊಂಡಿದೆ ಎಂದೆನಿಸಿದರೂ ಕೂಡಾ ತನ್ನ ಮೂಲನೆಲೆಯಾದ ಹಳ್ಳಿಗಳಲ್ಲಿ ಇನ್ನೂ ಕೂಡಾ ತನ್ನ ನೆಲೆಯನ್ನು ಭದ್ರವಾಗಿ ಊಳಿಸಿಕೊಂಡಿರುವುದು ಸಮಾಧಾನ ತರುವ ಸಂಗತಿಯಾಗಿದೆ. ಕಂಸಾಳೆ ಪದ, ಗೀಗೀಪದ, ಕೋಲಾಟದ ಪದ, ಬೀಸೋ ಪದಗಳು, ಸುಗ್ಗಿ ಹಾಡುಗಳು ಹೀಗೆ ಇನ್ನೂ ಅನೇಕ ವಿವಿಧ ಬಗೆಯ ಜಾನಪದ ಗೀತೆಗಳು, ಆಯಾ ಪ್ರದೇಶದ ಜನರ ದೈನಂದಿನ ಚಟುವಟಿಕೆಗಳನ್ನು, ಕೌಟುಂಬಿಕ ಜೀವನವನ್ನು, ಸಂಬಂಧಗಳನ್ನು, ದೇವರುಗಳನ್ನು ಹಾಗೂ ಧಾರ್ಮಿಕ ಆಚರಣೆಗಳನ್ನು ಒಳಗೊಂಡ ಹಲವಾರು ಜನಪದ ಶೈಲಿಯನ್ನು ನಮ್ಮ ಮುಂದೆ ತೆರೆದಿಡುವಂತಹ ಅತ್ಯದ್ಭುತವಾದ ಸಾಹಿತ್ಯ ಕೃಷಿಯನ್ನು ಲೇಖಕರು ಹದವಾಗಿ ಮಾಡಿದ್ದಾರೆ.
ಇಂತಹ ಅತ್ಯಮೂಲ್ಯವಾದ ಜಾನಪದ ಗೀತೆಗಳನ್ನು ಒಗ್ಗೂಡಿಸಿ ಪುಸ್ತಕ ರೂಪ ನೀಡಿ ನಮಗೆ ಓದಲು ಅನುಕೂಲ ಮಾಡಿಕೊಟ್ಟಿರುವ ಡಾ||ಜೀವನಸಾಬ ಸರ್ ಗೆ ಧನ್ಯವಾದಗಳನ್ನು ಹೇಳಲೇಬೇಕು. ಹಳ್ಳಿಯ ಸಾಮಾನ್ಯ ಜನರ ನಡುವೆ ಹುಟ್ಟಿ ಬಾಯಿಂದ ಬಾಯಿಗೆ ಹರಿದು ಬಂದಿರುವ ಸಿರಿನುಡಿಗೆ ಜೀವ ತುಂಬಿದ ಲೇಖಕರ ಶ್ರಮ ನಿಜಕ್ಕೂ ಸಾರ್ಥವಾಗಿದೆ ಎಂದೆನಿಸುತ್ತದೆ.
ಆದ್ದರಿಂದ ಈ ಪುಸ್ತಕವು ಪ್ರತಿಯೊಂದು ಗ್ರಂಥಾಲಯದಲ್ಲಿ, ವಾಚನಾಲಯದಲ್ಲಿ ಮತ್ತು ನಮ್ಮ ನಿಮ್ಮೆಲ್ಲರ ಮನೆ-ಮನಗಳಲ್ಲಿ ಸಂಗ್ರಹ ಮಾಡಿಟ್ಟುಕೊಳ್ಳುವ ಮೇರು ಕೃತಿಯಾಗಿದೆ. ಏಕೆಂದರೆ ನಾನು ಇದನ್ನು ಮೊದಲೇ ಹೇಳಿದ ಹಾಗೆ ಇದು ಬರೀ ಜಾನಪದವಲ್ಲ ಜ್ಞಾನಪದ ಎಂದು.
- ಶ್ರೀನಿವಾಸ.ಎನ್.ದೇಸಾಯಿ, ಶಿಕ್ಷಕರು.
ಸ.ಮಾ.ಹಿ.ಪ್ರಾ.ಶಾಲೆ ವಿದ್ಯಾನಗರ ಕುಷ್ಟಗಿ.
